ಗುರುವಾರ , ನವೆಂಬರ್ 21, 2019
20 °C
ಕೃಷ್ಣಾಗೆ ಹೆಚ್ಚಿದ ಒಳಹರಿವು; ಬೆಳಗಾವಿ ಜಿಲ್ಲೆಯ ಏಳು ಸೇತುವೆ ಜಲಾವೃತ

ಕಣಕುಂಬಿ: ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ

Published:
Updated:

ಬೆಳಗಾವಿ: ಮಲಪ್ರಭಾ ನದಿಯ ಉಗಮ ಸ್ಥಳವಾಗಿರುವ ಕಣಕುಂಬಿಯಲ್ಲಿ ಭಾರಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 15.7 ಸೆಂ.ಮೀ ಮಳೆಯಾಗಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾಗಿದೆ.

ಭಾಗಮಂಡಲದಲ್ಲಿ 11.0 ಸೆಂ.ಮೀ, ಆಗುಂಬೆಯಲ್ಲಿ 9.0 ಸೆಂ.ಮೀ ಮಳೆಯಾಗಿದೆ.

ಜಿಲ್ಲೆಯ ವಿವಿಧೆಡೆಯೂ ಮಳೆ ಮುಂದುವರಿದಿದೆ. ಬೆಳಗಾವಿ, ಖಾನಾಪುರ, ಬೈಲಹೊಂಗಲ, ರಾಮದುರ್ಗ, ಎಂ.ಕೆ. ಹುಬ್ಬಳ್ಳಿ, ಹಿರೇಬಾಗೇವಾಡಿ, ಚಿಕ್ಕೋಡಿ, ಹುಕ್ಕೇರಿಯಲ್ಲಿ ಮಳೆ ಸುರಿದಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಮಳೆ ಮುಂದುವರಿದಿದ್ದು, ಅಪಾರ ಪ್ರಮಾಣದಲ್ಲಿ ನೀರು ರಾಜ್ಯದೊಳಗೆ ಪ್ರವೇಶಿಸುತ್ತಿದೆ.

ರಾಜಾಪುರ ಬ್ಯಾರೇಜ್‌ ಮೂಲಕ 1,10,350 ಕ್ಯುಸೆಕ್‌, ದೂಧ್‌ಗಂಗಾ ಹಾಗೂ ವೇದಗಂಗಾ ನದಿಯ ಮೂಲಕ 19,060 ಕ್ಯುಸೆಕ್‌ ಸೇರಿದಂತೆ ಚಿಕ್ಕೋಡಿಯ ಕಲ್ಲೋಳದ ಬಳಿ 1,29,410 ಕ್ಯುಸೆಕ್‌ ನೀರು ಕೃಷ್ಣಾಗೆ ಸೇರಿಕೊಳ್ಳುತ್ತಿದೆ. ನೀರಿನ ಹರಿವು ಹೆಚ್ಚಳವಾಗಿದ್ದರೂ, ಇನ್ನೂ ಒಡಲೊಳಗೆ ಹರಿಯುತ್ತಿದೆ.

ರಾಯಬಾಗದ ಕುಡಚಿ ಬಳಿ ಸೇತುವೆಯು ಜಲಾವೃತವಾಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಏಳು ಸೇತುವೆಗಳು ಜಲಾವೃತಗೊಂಡಂತಾಗಿದೆ. ಘಟಪ್ರಭಾ ನದಿಗೂ ಹೆಚ್ಚಿನ ಹರಿವು ಬಂದಿದ್ದು, ಹಿಡಕಲ್‌ ಜಲಾಶಯದಿಂದ 23,479 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ. ಮಲಪ್ರಭಾ ನದಿಯ ಒಳಹರಿವು ಹೆಚ್ಚಳವಾಗಿದ್ದು, ನವಿಲುತೀರ್ಥ ಜಲಾಶಯದಿಂದ 16,100 ಕ್ಯುಸೆಕ್‌ ಹೊರಬಿಡಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿ ತೀರದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪ್ರತಿಕ್ರಿಯಿಸಿ (+)