ಸೋಮವಾರ, ಅಕ್ಟೋಬರ್ 21, 2019
21 °C
ಸ್ಚಚ್ಛತೆಯಲ್ಲಿ ಅಗ್ರಸ್ಥಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ

ಎನ್ಎಂಪಿಟಿ: ನಾವಿಕರಿಗೆ ‘ಹೆಲಿ ಪ್ರವಾಸ’

Published:
Updated:
Prajavani

ಮಂಗಳೂರು: ವಿಹಾರನೌಕೆಗಳ (ಕ್ರೂಯಿಸರ್) ಮೂಲಕ ಬರುವ ಪ್ರವಾಸಿಗರಿಗೆ ಕರಾವಳಿ ತಾಣಗಳ ದರ್ಶನಕ್ಕಾಗಿ ‘ಹೆಲಿ ಪ್ರವಾಸ’ ಆರಂಭಿಸುವ ಯೋಜನೆಯನ್ನು ನವ ಮಂಗಳೂರು ಬಂದರು ಟ್ರಸ್ಟ್‌(ಎನ್‌ಎಂಪಿಟಿ) ರೂಪಿಸುತ್ತಿದೆ.

‘ಮಂಗಳೂರು ಸುತ್ತಲ ಸುಮಾರು 150 ಕಿ.ಮೀ. ವ್ಯಾಪ್ತಿಯ ಪ್ರವಾಸಿ ಸ್ಥಳಗಳಿಗೆ ಕ್ಷಿಪ್ರ ಅವಧಿಯಲ್ಲಿ ಹೋಗಿಬರಲು ಅನುಕೂಲವಾಗುವಂತೆ, ಖಾಸಗಿ ಸಹಭಾಗಿತ್ವದಲ್ಲಿ ‘ಹೆಲಿ ಪ್ರವಾಸ’ ಆರಂಭಿಸಲು ಯೋಜಿಸುತ್ತಿದ್ದೇವೆ. ಈ ಕುರಿತ ಪ್ರಸ್ತಾವವನ್ನು ಶೀಘ್ರವೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಿದ್ದೇವೆ’ ಎಂದು ಎನ್‌ಎಂಪಿಟಿ ಅಧ್ಯಕ್ಷ ವೆಂಕಟ ರಮಣ ಅಕ್ಕರಾಜು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಳೆದ ವಿತ್ತೀಯ ವರ್ಷದಲ್ಲಿ 26 ನೌಕೆಗಳು ಇಲ್ಲಿ ಲಂಗರು ಹಾಕಿದ್ದವು. ಈ ಬಾರಿ ನವೆಂಬರ್ 4ರಂದು 23 ಬರಲಿವೆ. ವಿತ್ತೀಯ ವರ್ಷಾಂತ್ಯಕ್ಕೆ ಕಳೆದ ವರ್ಷದ ಸಾಧನೆಯನ್ನು ಮೀರುವ ಗುರಿ ಇದೆ. ಪ್ರತಿ ಕ್ರೂಯಿಸರ್‌ನಲ್ಲಿ ತಲಾ 2,500 ಪ‍್ರವಾಸಿಗರು ಇರುತ್ತಾರೆ’ ಎಂದರು.

‘ಈ ನೌಕೆಗಳು ಬಂದರಿನ ನಾಲ್ಕನೇ ದಕ್ಕೆಗೆ (ಬರ್ತ್‌) ಬರಲಿದ್ದು, ಅಲ್ಲಿಂದ ಮುಖ್ಯದ್ವಾರ ‘ಮಲ್ಯ ಗೇಟ್’ ತನಕದ ರಸ್ತೆಯನ್ನು ಪ್ರವಾಸಿ ಸ್ನೇಹಿಯಾಗಿ ರೂಪಿಸಲಾಗುವುದು. ಅಲ್ಲಿನ ಟ್ರಕ್‌ ಹಾಗೂ ಭಾರಿ ವಾಹನಗಳ ಸಂಚಾರವನ್ನು ಬೇರೆ ರಸ್ತೆಗೆ ವರ್ಗಾಯಿಸಲಾಗುವುದು. ಹೆಚ್ಚಿನ ಸುರಕ್ಷತೆ ಕಲ್ಪಿಸಲಾಗುವುದು. ಅಲ್ಲದೇ, ಪ್ರವಾಸಿಗರಿಗಾಗಿ ಶಾಶ್ವತ ರಸ್ತೆಯೊಂದನ್ನು ನಿರ್ಮಿಸಲೂ ಯೋಜಿಸಲಾಗುತ್ತಿದೆ’ ಎಂದರು. 

ಮುಖ್ಯದ್ವಾರದ ಮುಂಭಾಗದಲ್ಲಿ ‘ಪೂರ್ವ ಪಾವತಿ’ಯ ಕಾರು ಹಾಗೂ ವಾಹನಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಇತರ ಪ್ರವಾಸಿ ವಾಹನಗಳ ನಿಲ್ದಾಣವನ್ನೂ ನಿರ್ಮಿಸಲಾಗುವುದು. ಪ್ರವಾಸಿಗರಲ್ಲಿ ಹಿರಿಯ ನಾಗರಿಕರೇ ಹೆಚ್ಚಾಗಿರುತ್ತಿದ್ದು, ಪೂರಕ ಸೌಲಭ್ಯ ಕಲ್ಪಿಸಲಾಗುವುದು ಎಂದರು. 

ಡ್ರೆಡ್ಜಿಂಗ್:
‘ಬಂದರಿನ ಹೂಳೆತ್ತುವ ಬಗ್ಗೆ ಇನ್ನೆರಡು ದಿನಗಳಲ್ಲಿ ಸರ್ವೆ ಮುಗಿಯಲಿದೆ. ಡ್ರೆಡ್ಜಿಂಗ್ (ಬಂದರಿನಲ್ಲಿ ಹೂಳೆತ್ತುವುದು) ಯಂತ್ರವು ಈಗಾಗಲೇ ವಿಶಾಖಪಟ್ಟಣದಿಂದ ಹೊರಟಿದ್ದು, ಅಕ್ಟೋಬರ್ ಮಧ್ಯದಲ್ಲಿ ಡ್ರೆಡ್ಜಿಂಗ್ ಆರಂಭಗೊಳ್ಳಲಿದೆ’ ಎಂದರು.

‘ಈಚೆಗೆ ಹಡಗೊಂದು ಮುಳುಗಿದ್ದರೂ, ಅದು ಬಂದರಿನ ಮುಖ್ಯ ಕಾಲುವೆ (ನ್ಯಾವಿಗೇಶನಲ್ ಚಾನಲ್)ಗೆ ಅಡ್ಡಿಯಾಗಿಲ್ಲ. ಅಲ್ಲದೇ, ಯಾವುದೇ ತೈಲ ಸೋರಿಕೆಯಾಗಿಲ್ಲ. ಹೀಗಾಗಿ ಯಾವುದೇ ಅಪಾಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಟ್ರಸ್ಟ್ ಕಾರ್ಯದರ್ಶಿ ಲೆಫ್ಟಿನೆಂಟ್ ಬಿಜು ವಾರಿಯರ್ ಇದ್ದರು.

Post Comments (+)