ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಲಿಲ್ಲದ ಸರದಾರ’ನಿಗೆ ಸವಾಲೊಡ್ಡಲು ಕಾರ್ಯತಂತ್ರ

ಗೃಹ ಸಚಿವರ ವರ್ಚಸ್ಸಿಗೆ ಸರಿಸಮನಾದ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಯೋಜನೆ
Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಿಟಿಎಂ ಲೇಔಟ್‌ ಹಲವು ಐ.ಟಿ ಕಂಪನಿಗಳ ತವರು. ಟೋಟಲ್‌, ಫೋರಂ ಮಾಲ್ ಸೇರಿ ಸಾಕಷ್ಟು ಪ್ರಮುಖ ವಾಣಿಜ್ಯ ಕೇಂದ್ರಗಳು ಇಲ್ಲಿವೆ. ಕೋರಮಂಗಲ ಪ್ರದೇಶವೊಂದರಲ್ಲೇ 600ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಮಡಿವಾಳ ಸಂತೆ, ಬೆಂಗಳೂರು ಡೇರಿ, ಮೈಕೊ ಕಂಪನಿ ಇದರ ವ್ಯಾಪ್ತಿಗೆ ಸೇರುತ್ತವೆ. ನಿಮ್ಹಾನ್ಸ್, ಕಿದ್ವಾಯಿಯಂತಹ ಆಸ್ಪತ್ರೆಗಳಿರುವುದು ಈ ಕ್ಷೇತ್ರದಲ್ಲಿಯೇ. 

ಇಲ್ಲಿ ಸುಮಾರು 2.63 ಲಕ್ಷ ಮತದಾರರಿದ್ದಾರೆ. ರೆಡ್ಡಿಗಳು ಹಾಗೂ ತಿಗಳರ ಪ್ರಾಬಲ್ಯ ಇಲ್ಲಿದೆ. ಕ್ರೈಸ್ತ, ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ‌ದಂತೆ ಇತರ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಮಲ‌ಯಾಳಿಗಳು, ಈಶಾನ್ಯ ಭಾರತದವರು ನೆಲೆ ಕಂಡುಕೊಂಡಿದ್ದಾರೆ. ಇಷ್ಟಾಗಿಯೂ ಈ ಕ್ಷೇತ್ರದ ಹಣೆಬರಹವನ್ನು ‘ಜಾತಿ ಲೆಕ್ಕಾಚಾರ’ ನಿರ್ಧರಿಸುತ್ತದೆ ಎಂದು ಭಾವಿಸಿದರೆ ತಪ್ಪಾದೀತು.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್‌ ಮುಖಂಡ ರಾಮಲಿಂಗಾರೆಡ್ಡಿ, ಕ್ಷೇತ್ರ ಪುನರ್‍ ವಿಂಗಡಣೆ ಬಳಿಕ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲೂ ಸತತ ಎರಡು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಹಾಲಿ ಗೃಹ ಸಚಿವರು ಇಲ್ಲಿಂದ ಮೂರನೇ ಬಾರಿ ಕಣಕ್ಕಿಳಿಯಲು ಸಿದ್ಧವಾಗಿದ್ದಾರೆ. ಸೋಲಿಲ್ಲದ ಸರದಾರನಿಗೆ ಏಳನೇ ಚುನಾವಣೆ ಇದು. ಅವರ ಗೆಲುವಿನ ಓಟಕ್ಕೆ ಸವಾಲೊಡ್ಡುವವರು ಯಾರು ಎನ್ನುವುದು ಕುತೂಹಲದ ಪ್ರಶ್ನೆ.

ಕಾಂಗ್ರೆಸ್‍ ಪ್ರಾಬಲ್ಯವಿರುವ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್ ಕಾರ್ಯತಂತ್ರ ರೂಪಿಸುತ್ತಿವೆ. ಮೊದಲು ಹಾಗೂ ಎರಡನೇ ಪಟ್ಟಿಯಲ್ಲಿ ಈ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನು ಬಿಜೆಪಿ ಘೋಷಣೆ ಮಾಡಿಲ್ಲ. ರಾಮಲಿಂಗಾರೆಡ್ಡಿ ಅವರ ವರ್ಚಸ್ಸಿಗೆ ಸರಿಸಮಾನವಾದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ಹುಡುಕಾಟ ನಡೆಸಿದೆ. ಇಲ್ಲಿಂದ ಕಣಕ್ಕಿಳಿಯಲು ಹಲವರು ಪೈಪೋಟಿ ನಡೆಸಿದ್ದಾರೆ. ಮಾಜಿ ಶಾಸಕ ಹಾಗೂ ಪಕ್ಷದ ಮುಖಂಡರಾದ ಸುಬ್ಬಾರೆಡ್ಡಿ ಅವರ ಪುತ್ರ ವಿವೇಕ್‍ ರೆಡ್ಡಿ, ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಸುಧಾಕರ ರೆಡ್ಡಿ ಜಯದೇವ್ ಟಿಕೆಟ್‍ಗಾಗಿ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರ ದೂರದ ಸಂಬಂಧಿ ಲಲ್ಲೇಶ್‍ ರೆಡ್ಡಿ ಕೂಡ ಕಣ್ಣಿಟ್ಟಿದ್ದಾರೆ. ಕೆಲವು ತಿಂಗಳುಗಳಿಂದ ಇಲ್ಲಿನ ಮತದಾರರ ಜೊತೆ ಸಂಪರ್ಕದಲ್ಲಿರುವ ಅವರು, ಟಿಕೆಟ್‍ಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಲಲ್ಲೇಶ್‌ಗೇ ಮಣೆ ಹಾಕಬಹುದು ಎಂಬ ಸುದ್ದಿ ಕ್ಷೇತ್ರದಾದ್ಯಂತ ಬಲವಾಗಿ ಹರಿದಾಡುತ್ತಿದೆ.

ರಾಮಲಿಂಗಾರೆಡ್ಡಿ ಸಂಯಮದ ರಾಜಕಾರಣಿ, ಯಾವುದೇ ಸಂಘರ್ಷಕ್ಕಿಳಿಯುವುದಿಲ್ಲ, ಎಲ್ಲರನ್ನೂ ಸಮಚಿತ್ತವಾಗಿ ನಿಭಾಯಿಸುವ ಗುಣ ಹೊಂದಿರುವವರು ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯ. ಜೊತೆಗೆ ಉತ್ತಮ ಜನಸಂಪರ್ಕ ಹೊಂದಿದ್ದಾರೆ, ಅವರ ಬಗ್ಗೆ ವಿರೋಧಿ ಅಲೆಯೂ ಇಲ್ಲ, ಹೀಗಾಗಿ ಈ ಬಾರಿ ಅವರ ಗೆಲುವು ಮತ್ತಷ್ಟು ಸುಲಭವಾಗಬಹುದು ಎಂಬುದು ಕಾಂಗ್ರೆಸ್‍ ಲೆಕ್ಕಾಚಾರ.

ಕಳೆದ ಬಾರಿ ರಾಮಲಿಂಗಾರೆಡ್ಡಿ ಅವರ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದ ಸುಧಾಕರ್, ಸುಮಾರು 49,048 ಮತಗಳ ಅಂತರದಿಂದ ಸೋತಿದ್ದರು.

ಹಾಗೆಂದು, ಚುನಾವಣೆ ಗಾಳಿ ಇದೇ ದಿಕ್ಕಿನಲ್ಲಿ ಬೀಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದಿಢೀರ್‌ ಏಳುವ ಅಲೆಯಲ್ಲಿ ಕೊಚ್ಚಿ ಹೋದವರು, ಬೀಸುವ ಗಾಳಿಗೆ ತರಗೆಲೆಯಂತೆ ಮಾಯವಾದವರು ಕಣ್ಣ ಮುಂದಿದ್ದಾರೆ. ಹೀಗಾಗಿ ಪ್ರಭಾವಿ ಎಂಬ ಕಾರಣಕ್ಕೆ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ. ಈ ಅರಿವು ರೆಡ್ಡಿ ಅವರಿಗೂ ಇದೆ. ಈ ಕಾರಣಕ್ಕೆ, ಅವರು ಚುನಾವಣೆಯನ್ನು ಅಷ್ಟು ಸುಲಭವಾಗಿ ಪರಿಗಣಿಸಿಲ್ಲ.

ಬಿಜೆಪಿ ಇಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸುತ್ತಿದೆ. ಮನೆ ಮನೆ ಪ್ರಚಾರ, ಬೂತ್‍ ಮಟ್ಟದ ಪ್ರಚಾರ ಸೇರಿದಂತೆ ಹಲವು ಹಂತಗಳಲ್ಲಿ ಕಾರ್ಯಕರ್ತರು ಮತ ಸೆಳೆಯುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಲೋಪದೋಷ ಹಿಡಿದುಕೊಂಡು ಮತದಾರರ ಮನಪರಿವರ್ತನೆಗೆ ಪಕ್ಷ ಪ್ರಯತ್ನಿಸುತ್ತಿದೆ. ಮಧ್ಯಮ ವರ್ಗದ ಮತದಾರರು ಬಿಜೆಪಿ ಕೈ ಹಿಡಿಯಬಹುದು ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಾರ್ಯತಂತ್ರ ಫಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕೆಲಸ ಮಾಡಿದರೆ ಇಲ್ಲಿ ಕಮಲ ಅರಳುವುದು ಖಚಿತ ಎಂಬ ಆಶಾವಾದ ಕಾರ್ಯಕರ್ತರಲ್ಲಿದೆ.

ಬಿಬಿಎಂಪಿ ಸದಸ್ಯರಾಗಿರುವ ಕೆ. ದೇವ್‍ದಾಸ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ. ಜೆಡಿಎಸ್‌ಗೆ ಹೇಳಿಕೊಳ್ಳುವಂಥ ವರ್ಚಸ್ಸು ಇಲ್ಲಿ ಇಲ್ಲವಾದರೂ ಅಭ್ಯರ್ಥಿ ಮಾತ್ರ ಪರಿಣಾಮಕಾರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಯಾರು ಯಾರೊಂದಿಗೆ ಕೈ ಜೋಡಿಸುತ್ತಾರೆ, ಯಾರು ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ

ಸಿಲ್ಕ್ ಬೋರ್ಡ್, ಡೇರಿ ಸರ್ಕಲ್, ಫೋರಂ ಮಾಲ್‌ ಬಳಿ ಟ್ರಾಫಿಕ್ ಜಾಮ್ ಸಮಸ್ಯೆ ಹಾಗೆಯೇ ಉಳಿದಿದೆ. ಸಾರ್ವಜನಿಕ ಸಾರಿಗೆ ಸೌಲಭ್ಯದ ವಿಷಯದಲ್ಲೂ ಕ್ಷೇತ್ರ ಹಿಂದೆ ಬಿದ್ದಿದೆ. ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವಕಾಶ ಬಳಸಿಕೊಳ್ಳಬೇಕಿತ್ತು. ಗೃಹ ಸಚಿವರಾದ ಬಳಿಕ ಅವರ ವರ್ಚಸ್ಸು ಕುಗ್ಗಿದೆ. ಬೆಂಗಳೂರಿನಲ್ಲಿ ನಡೆದಿರುವ ರಾಜಕೀಯ ಕೊಲೆ, ಪೊಲೀಸ್ ಇಲಾಖೆ ವೈಫಲ್ಯ, ಗೌರಿ ಲಂಕೇಶ್ ಹತ್ಯೆ ಪ್ರಕರಣ, ಗೃಹ ಸಚಿವರಾಗಿ ಸ್ಪಂದಿಸಿದ ರೀತಿ ಚುನಾವಣೆ ಮೇಲೆ ಪ್ರಭಾವ ಬೀರಿದರೂ ಅಚ್ಚರಿ ಇಲ್ಲ.

– ರಾಜೇಂದ್ರ ಶೆಟ್ಟಿ, ಮಾರುತಿ ನಗರ

ಒಳ್ಳೆಯ ಗುಣವೇ ಗೆಲುವಿಗೆ ರಹದಾರಿ

ನಮ್ಮ ಜನಪ್ರತಿನಿಧಿ ಎಲ್ಲರಿಗೂ ಮಾದರಿ, ಪ್ರಾಮಾಣಿಕ. ಎಲ್ಲ 224 ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಂಡರೂ ಅತ್ಯಂತ ಸುಲಭದಲ್ಲಿ ಕೈಗೆ ಸಿಗುವ ಸಾಮಾನ್ಯ ವ್ಯಕ್ತಿ. ಮೊದಲ ಬಾರಿ ಆಯ್ಕೆಯಾದಂದಿನಿಂದ ಈವರೆಗೆ ಅವರ ನಡೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದೇ ಅವರ ಗೆಲುವಿನ ಗುಟ್ಟು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿದವರಲ್ಲ. ಎಲ್ಲ ವಾರ್ಡ್‌ಗಳ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ತಾರತಮ್ಯ ಮಾಡದೆ ಅನುದಾನ ಹಂಚಿಕೆ ಮಾಡಿದ್ದಾರೆ. ಅವರ ಸರಳ, ಸಜ್ಜನಿಕೆಯ ಗುಣ ಮತ್ತೆ ನೆರವಿಗೆ ಬರುತ್ತದೆ ಎನ್ನುವ ವಿಶ್ವಾಸವಿದೆ.

– ಎಸ್‌.ಜೆ. ಜಗದೀಶ, ಬಿಟಿಎಂ ಲೇಔಟ್‌

ಅಕ್ಕ– ಪಕ್ಕ ಅಪ್ಪ– ಮಗಳು!

ರಾಮಲಿಂಗಾರೆಡ್ಡಿ ಅವರು ಕ್ಷೇತ್ರ ಪುನರ್‍ ವಿಂಗಡಣೆ ಬಳಿಕ ತಮ್ಮ ಕಾರ್ಯಕ್ಷೇತ್ರವನ್ನು ಬಿಟಿಎಂ ಲೇಔಟ್‌ಗೆ ಬದಲಿಸಿದ ನಂತರ, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಕುಸಿದಿದೆ. ಅಲ್ಲಿ ಬಿಜೆಪಿ ನೆಲೆಯನ್ನು ಗಟ್ಟಿಮಾಡಿಕೊಂಡಿತ್ತು. ಈ ಬಾರಿ ಜಯನಗರ ಕ್ಷೇತ್ರದ ಮೇಲೂ ರಾಮಲಿಂಗಾರೆಡ್ಡಿ ಕಣ್ಣಿಟ್ಟಿದ್ದಾರೆ. ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದ ಅವರು, ಹಿಂದೆಯೇ ಪ್ರಚಾರವನ್ನು ಆರಂಭಿಸಿದ್ದರು. ಪಕ್ಷದ ಹೈಕಮಾಂಡ್‌ ಇದೀಗ ಸೌಮ್ಯಾ ಅವರಿಗೇ ಟಿಕೆಟ್‌ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT