ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ: ಸೂಚನೆ

ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚನೆ
Last Updated 31 ಮಾರ್ಚ್ 2020, 10:51 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರ ಪಟ್ಟಿ ಮಾಡಿ ಸ್ವಯಂಸೇವಾ ಸಂಘ-ಸಂಸ್ಥೆಗಳ ನೆರವಿನಿಂದ ಅವರಿಗೆ ಊಟೋಪಹಾರದ ವ್ಯವಸ್ಥೆ ಮಾಡಬೇಕು. ಇಟ್ಟಿಗೆ ತಯಾರಕರು, ಸವಿತಾ ಸಮಾಜ, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ನಿರ್ಗತಿಕರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು.

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಸಾಧ್ಯವಾದರೆ ಮನೆ ಮನೆಗೆ ದಿನಸಿ ಹಾಗೂ ತರಕಾರಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಊಟೋಪಾಹಾರ ಪಾರ್ಸೆಲ್ ನೀಡಲು ಹೋಟೆಲ್‌ನವರಿಗೆ ಆರಂಭಿಸಲು ಅವಕಾಶ ಕಲ್ಪಿಸಬೇಕು. ಸರಕು ಸಾಗಾಣಿಕೆಗೆ ಸಂಬಂಧಿಸಿದಂತೆ ಲಾರಿ ಮಾಲೀಕರು ಹಾಗೂ ಚಾಲಕರ ಸಂಘದವರ ಕರೆದು ಸರಕು ಸಾಗಾಣಿಕೆಗೆ ಮುಕ್ತ ಅವಕಾಶ ನೀಡಿರುವ ಬಗ್ಗೆ ಮನವರಿಕೆ ಮಾಡಬೇಕು ಹಾಗೂ ಪಾಸ್ ಒದಗಿಸಬೇಕು’ ಎಂದು ತಿಳಿಸಿದರು.

ಕ್ಲಿನಿಕ್‌ ಆರಂಭಿಸಿ

‘ಬೆಳಿಗ್ಗೆ ಹಾಗೂ ಸಂಜೆ ಒಂದೆರಡು ಗಂಟೆಗಳ ಕಾಲ ಖಾಸಗಿ ಕ್ಲಿನಿಕ್ ಆರಂಭಿಸಲು ಕ್ರಮ ವಹಿಸಬೇಕು’ ಎಂದು ಡಿಎಚ್‌ಒಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಇದುವರೆಗೆ ಉತ್ತಮ ನಿರ್ವಹಣೆಯಾಗಿದೆ. ಆದಾಗ್ಯೂ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉದ್ಭವಿಸದಂತೆ ಜಿಲ್ಲಾಡಳಿತ ಹಾಗೂ ಉಳಿದ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಸ್ಯಾನಿಟೈಸರ್, ಮಾಸ್ಕ್ (ಕೈಗವಸುಗಳು)ಗಳನ್ನು ಸಮರ್ಪಕವಾಗಿ ಒದಗಿಸಬೇಕು’ ಎಂದರು.

‘ಆಹಾರ ಸಾಮಗ್ರಿಗಳ ದಾಸ್ತಾನು ಮತ್ತು ಸರಬರಾಜು ಬಹಳ ಮುಖ್ಯ. ಇದರ ಬಗ್ಗೆ ನಿರಂತರ ನಿಗಾ ವಹಿಸಬೇಕು. ಅಗತ್ಯ ಪ್ರಮಾಣದಲ್ಲಿ ಪೂರೈಕೆಗೆ ಕ್ರ‌ಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಸವಿತಾ ಸಮಾಜಕ್ಕೆ ನೆರವಾಗಿ

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ಸವಿತಾ ಸಮಾಜದವರ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕು’ ಎಂದರು.

ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘318 ಮಂದಿಗೆ ಸ್ಟ್ಯಾಂಪಿಂಗ್ ಮಾಡಲಾಗಿದೆ’ ಎಂದು ತಿಳಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿದರು. ಶಾಸಕ ಅನಿಲ ಬೆನಕೆ, ಪೊಲೀಸ್ ಆಯುಕ್ತ ಬಿ‌.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ನಗರಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ್ ಇದ್ದರು.

***

‘ಕೋವಿಡ್ ಆಸ್ಪತ್ರೆಯಾಗಿ ಬಿಮ್ಸ್‌’

‘ಬಿಮ್ಸ್ ಅನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ತಿಳಿಸಿದರು.

‘ಮಿಲಿಟರಿ ಆಸ್ಪತ್ರೆಯನ್ನು ಕೂಡ ಕೋವಿಡ್ ಆಸ್ಪತ್ರೆ ಎಂದು ಪರಿವರ್ತಿಸಬಹುದಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾಹಿತಿ ನೀಡಿದರು.

‘ಬೆಂಗಳೂರು, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಸಾವಿರ ಕಾರ್ಮಿಕರು ಬಂದಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿ ಊಟೋಪಹಾರ ಒದಗಿಸಲಾಗುತ್ತಿದೆ. ಬೈಲಹೊಂಗಲ, ಹುಕ್ಕೇರಿ ಮತ್ತು ಕಿತ್ತೂರು ತಾಲ್ಲೂಕುಗಳಲ್ಲಿ ಸಾಮೂಹಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಗೋವಾಕ್ಕೆ ಹಾಲು, ತರಕಾರಿ ಸಾಗಾಣಿಕೆ ಮಾಡುವ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಕಚೇರಿಗೂ ಮಾಹಿತಿ ನೀಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT