ಬುಧವಾರ, ಅಕ್ಟೋಬರ್ 23, 2019
27 °C
ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಜಿಲ್ಲಾಧಿಕಾರಿ ಶಿಫಾರಸು

ಎಚ್‌ಆರ್‌ಪಿ: 414 ಅಕ್ರಮ ಮಂಜೂರಾತಿ ರದ್ದತಿಗೆ ಆದೇಶ

Published:
Updated:
Prajavani

ಸಕಲೇಶಪುರ: ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ, ಅಕ್ರಮವಾಗಿ ಸರ್ಕಾರಿ ಭೂಮಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 414 ಮಂಜೂರಾತಿ (1,656 ಎಕರೆ) ರದ್ದುಪಡಿಸಿ, ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿರುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಎಚ್‌ಆರ್‌ಪಿ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಆದೇಶ ನೀಡಿದ್ದಾರೆ.

ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಯೋಜನೆ ಸಂತ್ರಸ್ತರ ಹೆಸರಿನಲ್ಲಿ ಆಗಿರುವ ಭೂ ಮಂಜೂರಾತಿಗಳೆಲ್ಲವೂ ಸಂಶಯಾಸ್ಪದವಾಗಿದ್ದು, ಈ ಎಲ್ಲ ಪ್ರಕರಣಗಳನ್ನು ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ ಮಾಡಲು ಆದೇಶಿಸಬಹುದಾಗಿದೆ ಎಂದು ಕಂದಾಯ ಇಲಾಖೆ (ಭೂಮಂ) ಪ್ರಧಾನ ಕಾರ್ಯದರ್ಶಿಗಳಿಗೆ ಅ.3ರಂದು ಪತ್ರ ಬರೆದಿದ್ದಾರೆ.

ಸಂತ್ರಸ್ತರ ಹೆಸರಿನಲ್ಲಿ ಸಲ್ಲಿಸಿರುವ ಅರ್ಜಿಗಳಲ್ಲಿ ಸತ್ಯಾಂಶ ಕಂಡು ಬಂದಿಲ್ಲ. ವಿಶೇಷ ಭೂ ಸ್ವಾಧೀನಾಧಿಕಾರಿಗಳು ಜಮೀನು ಮಂಜೂರು ಮಾಡುವ ಪೂರ್ವದಲ್ಲಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಮಂಜೂರಾತಿ ನೀಡಬೇಕು. ಆದರೆ, ಏಪ್ರಿಲ್‌ 17, 2018ರಿಂದ ಜೂನ್‌ 8, 2018ರವರೆಗೆ ಎಚ್‌ಆರ್‌ಪಿ ವಿಶೇಷ ಭೂ ಸ್ವಾಧೀನಾಧಿಕಾರಿ ಆಗಿದ್ದ ರವಿಚಂದ್ರನಾಯಕ್‌ ನಿಯಮ ಪಾಲಿಸಿಲ್ಲ. ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನವಿದ್ದಾಗ್ಯೂ ಉದ್ದೇಶಪೂರ್ವಕವಾಗಿ ಜಮೀನು ಮಂಜೂರು ಮಾಡಿರುವುದು ಕಂಡು ಬಂದಿದೆ. ಇವರು ಮಂಜೂರಾತಿ ನೀಡಿದ ಎಲ್ಲ ಪ್ರಕರಣಗಳ ತನಿಖೆಗೆ ಆದೇಶಿಸಬಹುದಾಗಿದೆ ಎಂದು ವರದಿಯಲ್ಲಿ  ತಿಳಿಸಿದ್ದಾರೆ.

ಸಂತ್ರಸ್ತರ ಹೆಸರಿನಲ್ಲಿ ಕೆಲ ಅಧಿಕಾರಿಗಳು, ನೌಕರರು, ಮಧ್ಯವರ್ತಿಗಳು ಶಾಮೀಲಾಗಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮ ಮಂಜೂರು ಮಾಡಿರುವ ಬಗ್ಗೆ ‘ಪ್ರಜಾವಾಣಿ’ ಆಗಸ್ಟ್‌ 25ರಂದು ವಿಶೇಷ ವರದಿ ಪ್ರಕಟಿಸಿತ್ತು. ಸೆ.20ರಂದು ಕಂದಾಯ ಸಚಿವ ಆರ್‌. ಅಶೋಕ್‌ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌, ಸಕಲೇಶಪುರ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಎತ್ತಿನಹೊಳೆ ವಿಶೇಷ ಭೂ ಸ್ವಾಧೀನಾಧಿಕಾರಿ ಗಿರೀಶ್‌ ನಂದನ್‌, ಎಚ್‌ಆರ್‌ಪಿ ವಿಶೇಷ ಭೂ ಸ್ವಾಧೀನಾಧಿಕಾರಿ ಶ್ರೀನಿವಾಸ್‌ಗೌಡ ಅವರನ್ನು ಒಳಗೊಂಡ ತನಿಖಾ ತಂಡ ಭೂದಾಖಲೆಗಳನ್ನು ಪರಿಶೀಲಿಸಿತ್ತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)