ಚುನಾವಣೆ: ಪ್ರಚಾರ ಕಣದಲ್ಲಿ ಚಿಣ್ಣರು

ಮಂಗಳವಾರ, ಏಪ್ರಿಲ್ 23, 2019
33 °C
ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿಲ್ಲ: ಗ್ರಾಮಸ್ಥರಿಂದ ಆಕ್ಷೇಪ

ಚುನಾವಣೆ: ಪ್ರಚಾರ ಕಣದಲ್ಲಿ ಚಿಣ್ಣರು

Published:
Updated:
Prajavani

ಹೆಸರಘಟ್ಟ: ದಾಸನಪುರ ಮತ್ತು ಹೆಸರಘಟ್ಟ ಹೋಬಳಿಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಮಕ್ಕಳನ್ನು ಕರೆದೊಯ್ಯಲಾಗುತ್ತಿದ್ದು, ಚುನಾವಣಾಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲವು ಸ್ಥಳೀಯರು ಆಕ್ಷೇಪಿಸಿದ್ದಾರೆ.

‘14 ವರ್ಷಕ್ಕಿಂತ ಕೆಳಗಿರುವ ಮಕ್ಕಳನ್ನು ಕೆಲಸಗಳಿಗೆ ಹಚ್ಚಬಾರದು ಎಂಬ ನಿಯಮ ಇದೆ. ಆದರೆ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಈ ನಿಯಮವನ್ನು ಗಾಳಿಗೆ ತೂರಿ ಮಕ್ಕಳ ಕೈಯಲ್ಲಿ ಪಕ್ಷದ ಬಾವುಟಗಳನ್ನು ಕೊಟ್ಟು ಜೈಕಾರ ಹಾಕಿಸಿಕೊಳ್ಳುತ್ತಿದ್ದಾರೆ. ಕರಪತ್ರಗಳನ್ನು ನೀಡಿ, ಹಂಚಿಸುತ್ತಿದ್ದಾರೆ’ ಎಂದು ಬಿಳಿಜಾಜಿ ಗ್ರಾಮದ ನಿವಾಸಿ ಗೋವಿಂದರಾಜು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಅಭ್ಯರ್ಥಿಯ ಮತಯಾಚನೆ ಸಂದರ್ಭದಲ್ಲಿ ಅಂದಾಜು 50 ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ₹200 ಆಸೆಗಾಗಿ ಬಿಸಿಲನ್ನು ಲೆಕ್ಕಸದೇ ಮಕ್ಕಳು ಬೀದಿ–ಬೀದಿ ಅಲೆಯುತ್ತಿದ್ದಾರೆ’ ಎಂದು ಅವರು ಸಹಾನುಭೂತಿ ತೋರಿದರು.

‘ಮಕ್ಕಳನ್ನು ಪ್ರಚಾರಕ್ಕೆ ಕರೆದೊಯ್ಯಬಾರದು ಎಂಬ ಪ್ರಜ್ಞೆ ಇರುವ ನಾಯಕರು ಪ್ರತಿ ಪಕ್ಷದಲ್ಲಿ ಇದ್ದಾರೆ. ಆದರೆ, ಚುನಾವಣಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗ ಕೇವಲ ಅಕ್ರಮಗಳನ್ನು ತಡೆಯುವುದು ಮಾತ್ರವಲ್ಲದೇ, ಇಂಥ ವಿಷಯಗಳ ಬಗ್ಗೆಯೂ ನಿಗಾ ಇಡಬೇಕು’ ಎನ್ನುವುದು ಸಾರ್ವಜನಿಕರ ಆಶಯ.

‘ನಾನು 5ನೇ ತರಗತಿ ಓದುತ್ತಿದ್ದೀನಿ. ಇನ್ನೂರು ರೂಪಾಯಿ ಕೊಡುತ್ತೀನಿ ಬಾ ಅಂದ್ರು, ಬಂದೆ. ಮುಂದಿನ ವರ್ಷದ ವಿದ್ಯಾಭ್ಯಾಸಕ್ಕೆ ಈ ಕಾಸು ನೆರವಾಗುತ್ತದೆ’ ಎಂದು ವಿದ್ಯಾರ್ಥಿಯೊಬ್ಬ ಹೇಳಿದ.  

‘ಪ್ರತಿ ಅಭ್ಯರ್ಥಿಯು ಮತಯಾಚನೆ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಇರುತ್ತಾರೆ. ಅವರು ಇದನ್ನೆಲ್ಲ ಗಮನಿಸದೇ ವಾಹನದಲ್ಲಿ ಕೂತು ಕಾಲ ಕಳೆಯುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ಚುನಾವಣಾ ಮಾರ್ಗದರ್ಶಿ ಅಧಿಕಾರಿಯೂ ಆಗಿರುವ ಯಲಹಂಕ ಉತ್ತರ ವಲಯ ತಹಶೀಲ್ದಾರ್‌ ಮಂಜುನಾಥ್,‘ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !