ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಕಾಲದ ತೀರ್ಥಗಳು

ಅಕ್ಷರ ಗಾತ್ರ

ಬೌದ್ಧದರ್ಶನ ಮತ್ತು ಬುದ್ಧನ ಬಗ್ಗೆ ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದವರು ಜಿ. ಪಿ. ರಾಜರತ್ನಂ. ಅವುಗಳಲ್ಲಿ ‘ಬುದ್ಧನ ಕಾಲದ ತೀರ್ಥಕರೂ ತೀರ್ಥಕರರೂ’ (1937) ಸ್ವಾರಸ್ಯಕರವಾದ ಕೃತಿಗಳಲ್ಲಿ ಒಂದು. ಪ್ರಾಚೀನ ಕಾಲದ ಗ್ರಂಥಗಳಲ್ಲಿರುವ ವಿವರಗಳನ್ನು ಎಷ್ಟು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕಾಗುತ್ತದೆ ಎನ್ನುವುದಕ್ಕೆ ಈ ಕೃತಿ ಉದಾಹರಣೆಯಂತಿದೆ.

ರಾಜರತ್ನಂ ಅವರು ‘ಗೌತಮಬುದ್ಧ’ ಎಂಬ ಕೃತಿಯನ್ನು ಬರೆದಿದ್ದರು. ಅದರಲ್ಲಿಯ ‘ತೀರ್ಥಕ’ ಎಂಬ ಶಬ್ದವನ್ನು ಕುರಿತಂತೆ ಅವರಿಗೂ ಶಾಂತಿರಾಜಶಾಸ್ತ್ರಿಯವರಿಗೂ ಚರ್ಚೆ ನಡೆದಿತ್ತು. ‘ತೀರ್ಥಕ’ ಮತ್ತು ‘ತೀರ್ಥಕರ’ ಎಂಬವು ಪ್ರತ್ಯೇಕಾರ್ಥವುಳ್ಳ ಎರಡು ಪ್ರತ್ಯೇಕ ಶಬ್ದಗಳೆಂದು ಆಧಾರವತ್ತಾಗಿ ತೋರಿಸಿಕೊಡುವುದಕ್ಕಾಗಿ – ಮೇಲಣ ಕೃತಿಯನ್ನು ಬರೆದುದಾಗಿ ರಾಜರತ್ನಂ ‘ಪ್ರವೇಶ’ದಲ್ಲಿ ತಿಳಿಸಿದ್ದಾರೆ.

ಹಾಗಾದರೆ ತೀರ್ಥ ಮತ್ತು ತೀರ್ಥಕರ ಯಾರು?

ರಾಜರತ್ನಂ ಹಲವು ಕಥೆಗಳನ್ನೂ ಸೂತ್ರವಾಕ್ಯಗಳನ್ನೂ ಉದಾಹರಿಸಿ ಕೊನಗೆ ಹೇಳಿರುವ ಮಾತುಗಳು ಇವು:

‘ತೀರ್ಥ’ ಎಂಬುದಕ್ಕೆ ‘ದರ್ಶನ’ ಎಂದೂ ‘ತೀರ್ಥಕರ’ ಎಂಬುದಕ್ಕೆ ‘ದರ್ಶನಕಾರ’ನೆಂದೂ ಹೇಳಿದಮೇಲೆ, ‘ಜಾತಾದೀನಂ ಇಮಿಯಾ ಚ’ ಎಂಬ ಸೂತ್ರದ ಪ್ರಕಾರ ‘ತಿತ್ಥ’ (= ತೀರ್ಥ)ದಲ್ಲಿ ಹುಟ್ಟಿದವನಿಗೆ ತಿತ್ಥಿಯ (= ತೀರ್ಥಕ) ಎಂದು ಹೆಸರಾಗುತ್ತದೆ; ಪ್ರತಿ ‘ತೀರ್ಥಕರ’ರ ಅನುಯಾಯಿಗಳೂ ‘ತೀರ್ಥಕ’ರೆನಿಸಿಕೊಳ್ಳುತ್ತಾರೆ.

ರಾಜರತ್ನಂ ಅವರ ಕೃತಿಯಲ್ಲಿಯ ‘ಬುದ್ಧನ ಕಾಲದ ತೀರ್ಥಗಳು’ ಎಂಬ ಅಧ್ಯಾಯ ಹೀಗಿದೆ:

‘ಪ್ರಾಚೀನಕಾಲದ ಋಷಿಗಳು ಪ್ರತಿ ಜೀವಿಗೂ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ನಾಲ್ಕು ಆಶ್ರಮಗಳನ್ನು ವಿಧಿಸಿದರು; ಆಯಾ ವಯಸ್ಸಿಗನುಗುಣವಾಗಿ ಆಯಾ ಆಶ್ರಮಗಳನ್ನು ಸ್ವೀಕರಿಸಬೇಕೆಂದೂ ವಿಧಿಸಿದರು. ಆದರೆ ಕೆಲವರು ತಮ್ಮ ಮನೆ, ಮಠ, ಹೆಂಡತಿ, ಮಕ್ಕಳೇ ಸರ್ವಸ್ವವೆಂದು ಅವರನ್ನು ಬಿಡಲಾರದೆ ಗೃಹಸ್ಥರಾಗಿಯೇ ಇದ್ದುಬಿಟ್ಟರು. ಅವರು ಆಗಾರಿಕರೆನಿಸಿಕೊಂಡರು. ಆದರೆ ಇತರರನೇಕರು ಸಂಸಾರದಲ್ಲಿ ನಿರ್ವೇದ ತಾಳಿ, ವಿರಾಗದಿಂದ ಮನೆಮಠ ಹೆಂಡತಿ ಮಕ್ಕಳು ಎಲ್ಲರನ್ನೂ ತ್ಯಜಿಸಿ, ಶಾಂತಿಯನ್ನು ಅರಸುತ್ತ ಮನೆಯಿಂದ ಮನೆಯಿಲ್ಲದ ಸ್ಥಿತಿಗೆ ಹೊರಟರು; ಶಾಂತಿಮಾರ್ಗವನ್ನು ಅರಸುತ್ತ, ಏಕಾಂತದಲ್ಲಿ ವಾಸಿಸುತ್ತ, ಅಕಿಂಚನರಾಗಿ ತಿರುಗಾಡುತ್ತಿದ್ದರು. ಇವರು ಆನಾಗಾರಿಕರು ಅಥವಾ ಪರಿವ್ರಾಜಕರೆಂದು ಹೆಸರಾದರು.

ಈ ಆನಾಗಾರಿಕರು ತಾವು ಸಾಧಿಸಿಕೊಂಡ ಸತ್ಯವನ್ನೋ, ಅದನ್ನು ಮುಟ್ಟುವುದಕ್ಕೆ ತಾವು ಅನುಸರಿಸಿದ ದಾರಿಯನ್ನೋ, ಅಥವಾ ಸತ್ಯವನ್ನೂ ಅದರ ಮಾರ್ಗವನ್ನೂ ಕುರಿತ ತಮ್ಮ ಕಲ್ಪನೆಯನ್ನೂ ಲೋಕಕ್ಕೆ ಬೋಧಿಸಿದರು. ಅವರ ಉಪದೇಶದಲ್ಲಿ ಶ್ರದ್ಧೆಯಿಟ್ಟು ಅನೇಕರು ಆಗಾರಿಕರು ಆನಾಗಾರಿಕರಾಗುತ್ತಿದ್ದರು; ಹಲವರು ತಾವು ಪರಿವ್ರಜಿಸದಿದ್ದರೂ ತಮಗೆ ಧರ್ಮೋಪದೇಶ ಮಾಡಿದ ಪರಿವ್ರಾಜಕರನ್ನು ಗೌರವಿಸಿ ಪೂಜಿಸುತ್ತಿದ್ದರು.

ಈ ರೀತಿಯಲ್ಲಿ ಪರಿವ್ರಾಜಕರ ಮತ್ತು ಅವರ ಅನುಯಾಯಿಗಳ ಪರಂಪರೆ ಬೆಳೆದಂತೆಲ್ಲ ಅವರ ಮಾರ್ಗಗಳ, ಕಲ್ಪನೆಗಳ, ತೀರ್ಥಗಳ, ಮತಗಳ, ದೃಷ್ಟಿಗಳ, ವಾದಗಳ ಸಂಖ್ಯೆಹೆಚ್ಚುತ್ತಹೋಯಿತು. ಪಿಟಕಗಳನ್ನು ನಂಬುವುದಾದರೆ ಬುದ್ಧನ ಕಾಲದಲ್ಲಿ ಪ್ರಚಾರದಲ್ಲಿದ್ದ ದೃಷ್ಟಿಗಳ ಸಂಖ್ಯೆ ಅರುವತ್ತೆರಡು ಎಂದು ತಿಳಿದುಬರುತ್ತದೆ. ಆ ಎಲ್ಲ ದೃಷ್ಟಿಗಳ ವಿವರಣೆಯು ‘ದೀಘನಿಕಾಯ’ದ ಮೊದಲ ಸೂತ್ರವಾದ ‘ಬ್ರಹ್ಮಜಾಲಸುತ್ತ’ದಲ್ಲಿ ದೊರೆಯುತ್ತದೆ.’

ಬುದ್ಧನ ಕಾಲದಲ್ಲಿ ಅರುವತ್ತೆರಡು ತೀರ್ಥಗಳು ಇದ್ದವೆಂದು ತಿಳಿದು ಬರುತ್ತದೆಯಾದರೂ, ಆ ‘ತೀರ್ಥ’ಗಳು ಯಾವುವು ಮತ್ತು ಅವುಗಳ ‘ತೀರ್ಥಕರ’ರು ಯಾರು ಎಂದು ಗೊತ್ತಾಗುವುದಿಲ್ಲ. ಪಿಟಕಗಳು ಆರು ಮಂದಿ ತೀರ್ಥಕರರನ್ನು ಹೆಸರಿಸಿವೆ. ಅವರೆಂದರೆ:

1. ಪೂರಣ ಕಸ್ಸಪ (ಪೂರ್ಣ ಕಶ್ಯಪ)

2. ಮಕ್ಖಲಿ ಗೋಪಾಲ (ಮಸ್ಕರಿನ್‌ ಗೋಶಾಲ)

3. ಅಜಿತ ಕೇಸಕಮ್ಭಳಿ (ಅಜಿತ ಕೇಶಕಂಬಳಿ)

4. ಪಕುಧ ಕಚ್ಚಾಯನ (ಪಕುದ್ಧ ಕಾತ್ಯಾಯನ)

5. ನಿಗಂಠ ನಾತಪುತ್ತ (ನಿರ್ಗ್ರಂಥ ಜ್ಞಾತಿಪುತ್ರ)

6. ಸಂಜಯ ಬೇಲಟ್ಠಪುತ್ತ (ಸಂಜಯ ಬೇಲಟ್ಟಠಪುತ್ರ)

ಪಿಟಕಗಳು ಈ ತೀರ್ಥಕರರನ್ನೂ ‘ಸಂಘೀ, ಗಣೀ, ಗಣಾಚಾರ್ಯ, ಜ್ಞಾತ, ಯಶಸ್ವಿ, ತೀರ್ಥಕರ, ಬಹುಜನರಿಂದ ಸಾಧುಸಮ್ಮತ, ರಾತ್ರಜ್ಞ, ಚಿರಪ್ರವ್ರಜಿತ, ಅಧ್ವಗತ, ವಯೋನುಪ್ರಾಪ್ತ’ ಎಂದು ಒಂದೇ ರೀತಿಯಾಗಿ ವರ್ಣಿಸುತ್ತವೆ – ಎಂದೂ ರಾಜರತ್ನಂ ತಿಳಿಸುತ್ತಾರೆ. ಈ ವಿವರಗಳ ಲಕ್ಷಣಗಳನ್ನು ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT