ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಿಂದ ಉಂಟಾದ ಶೋಚನೀಯ ಸ್ಥಿತಿ: ಜನನಾಂಗ ಕಳೆದುಕೊಂಡವನಿಗೆ ₹24 ಲಕ್ಷ

ಮಾನವೀಯ ನೆಲೆಗಟ್ಟಿನ ತೀರ್ಪಿಗೆ ಮೇಲ್ಪಂಕ್ತಿ
Last Updated 2 ನವೆಂಬರ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ತುಂಬು ಯೌವ್ವನಕ್ಕೆ ಕಾಲಿಡುತ್ತಿದ್ದ 17ರ ದಷ್ಟಪುಷ್ಟ ತರುಣನೊಬ್ಬ ಬಸ್‌ ಅಪಘಾತಕ್ಕೆ ಈಡಾಗಿ ತನ್ನ ಜನನಾಂಗ ಮತ್ತು ವೃಷಣಗಳನ್ನು ಕಳೆದುಕೊಂಡು ಜೀವನಪೂರ್ತಿ ನಪುಂಸಕನಾಗಿ ಬಾಳಬೇಕಾಗಿ ಬಂದಿರುವ ಶೋಚನಿಯ ಪ್ರಕರಣವಿದು. ಈ ಪ್ರಕರಣದಲ್ಲಿ ನ್ಯಾಯಮಂಡಳಿ ಘೋಷಿಸಿದ್ದ ₹ 2.70 ಲಕ್ಷ ಪರಿಹಾರವನ್ನು ₹ 24 ಲಕ್ಷಕ್ಕೆ ಏರಿಸುವ ಮೂಲಕ ಕರ್ನಾಟಕ ಹೈಕೋರ್ಟ್‌ ಮಾನವೀಯ ನೆಲಗಟ್ಟಿನ ತೀರ್ಪಿಗೆ ಮೇಲ್ಪಂಕ್ತಿ ಹಾಕಿದೆ.

ಬಳ್ಳಾರಿ ನಗರದ ಕೌಲ್‌ ಬಜಾರ್‌ನ ಗಡಂಗ ಓಣಿಯ ನಿವಾಸಿ ಸುರೇಶ್‌ ನಾಯಕ್ 2010ರ ಡಿಸೆಂಬರ್‌ 22ರಂದು ಸೈಕಲ್‌ನ ಹಿಂಬದಿಯಲ್ಲಿ ಕುಳಿತು ತೆರಳುತ್ತಿದ್ದ. ಈ ವೇಳೆ ಆಂಧ್ರಪ್ರದೇಶದ ಸರಕು ಸಾಗಣೆ ಬಸ್‌ ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಅಪಘಾತದಲ್ಲಿ ಸುರೇಶನ ವೃಷಣಕೋಶಕ್ಕೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಆಂಧ್ರಪ್ರದೇಶದ ರಾಯದುರ್ಗದ ಆಸ್ಪತ್ರೆಯಲ್ಲಿ ಈತನಿಗೆ ಚಿಕಿತ್ಸೆ ನೀಡಲಾಯಿತು.

ನಂತರ ಬಳ್ಳಾರಿಯ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್‌) ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದಾಗ ಜರ್ಜರಿತವಾಗಿದ್ದ ಶಿಶ್ನ ಮತ್ತು ವೃಷಣಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಬುಡಸಮೇತ ತೆಗೆದು ಹಾಕಿದರು.

ಪರಿಹಾರ ಕೋರಿದ್ದ ಸುರೇಶ್‌ ನಾಯಕ್‌ಗೆ ಬಳ್ಳಾರಿಯ ಮೋಟಾರು ಅಪಘಾತಗಳ ಎರಡನೇ ಕ್ಲೇಮು ನ್ಯಾಯಮಂಡಳಿ ₹ 2.70 ಲಕ್ಷ ಮೊತ್ತವನ್ನು ವಾರ್ಷಿಕ ಶೇ 8ರ ಬಡ್ಡಿ ದರದಲ್ಲಿ ಪರಿಹಾರ ನೀಡುವಂತೆ ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಗೆ ಆದೇಶಿಸಿತು. ಪರಿಹಾರ ಹೆಚ್ಚಿಸುವಂತೆ ಕೋರಿ ಸುರೇಶ್, ನಾಯಕ್‌ ಹೈಕೋರ್ಟ್‌ಗೆ 2012ರ ಮೇ 23ರಂದು ಮೇಲ್ಮನವಿ ಸಲ್ಲಿಸಿದರು. ಇದೀಗ ಈ ಮೇಲ್ಮನವಿ ಇತ್ಯರ್ಥಗೊಳಿಸಿರುವ ಧಾರವಾಡ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರು ಪರಿಹಾರ ಮೊತ್ತವನ್ನು ₹ 24 ಲಕ್ಷಕ್ಕೆ ಏರಿಸಿ ತೀರ್ಪು ನೀಡಿದ್ದಾರೆ.

ಜಿಪುಣತನ: ‘ಓದಿ ಬಾಳಿ ಬದುಕಬೇಕಾಗಿದ್ದ ಸುರೇಶ ತನ್ನ ಲೌಕಿಕ ಸುಖಗಳನ್ನೆಲ್ಲಾ ಕಳೆದುಕೊಂಡಿದ್ದಾನೆ. ತಟಸ್ಥ ಲಿಂಗಕ್ಕೆ ಸೇರಬೇಕಾಗಿ ಬಂದ ದುರದೃಷ್ಟ ಹುಡುಗನಾಗಿದ್ದಾನೆ. ಅಪಘಾತ ಇವನಿಗೆ ಶಾಶ್ವತ ಊನವುಂಟು ಮಾಡಿದೆ. ಆದರೆ, ಈ ಪ್ರಕರಣದಲ್ಲಿ ನ್ಯಾಯಮಂಡಳಿ ಉದಾರ ಪರಿಹಾರ ಘೋಷಿಸುವ ಬದಲಿಗೆ ಅಸೀಮ ಜಿಪುಣತನ ತೋರಿದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಆಸ್ಟ್ರೇಲಿಯಾದ ಮಾರ್ಗದರ್ಶಿ ಸೂತ್ರ ಪರಿಗಣನೆ
‘ಆಸ್ಟ್ರೇಲಿಯಾದ ಕ್ಯಾಪಿಟಲ್ ಟೆರಿಟರಿ ಮಾರ್ಗದರ್ಶಿ ಸೂತ್ರಗಳನ್ನೂ ಈ ಪ್ರಕರಣದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

‘ದುರದೃಷ್ಟಕರ ಘಟನೆಗೆ ಈಡಾಗಿರುವ ಯುವಕ ಭವಿಷ್ಯದಲ್ಲಿ ತನ್ನ ಲೈಂಗಿಕ ಶಕ್ತಿ, ಆಸೆ, ಆಕಾಂಕ್ಷೆಗಳನ್ನು ಕೆಳದುಕೊಂಡಿದ್ದು; ಜೀವನಪರ್ಯಂತ ಮಾನಸಿಕ ವೇದನೆಯಲ್ಲಿ ಕೊರುಗುವಂತಾಗಿದೆ’ ಎಂದು ಹೇಳಿದೆ.

‘ಸಂತ್ರಸ್ತನಿಗೆ ಲೈಂಗಿಕ ಹಾರ್ಮೋನುಗಳನ್ನು ಉತ್ಪತ್ತಿ ಮಾಡುವ ಅಂಗಗಳನ್ನೇ ತೆಗೆದು ಹಾಕಬೇಕಾಗಿ ಬಂದಿದೆ. ಇದರಿಂದಾಗಿ ಆತ ತನ್ನ ವಿಷಯಾಸಕ್ತಿಗಳನ್ನೆಲ್ಲಾ ಕಳೆದುಕೊಂಡು ಬದುಕಿನುದ್ದಕ್ಕೂ ಅನೂಹ್ಯ ಮಾನಸಿಕ ವರ್ತನೆಗಳಿಗೆ ಈಡಾಗುವ ಸಂದರ್ಭವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಕೀಲರಿಗೆ ₹ 25 ಸಾವಿರ
ಸುರೇಶ್‌ ಪರ ವಾದ ಮಂಡನೆಗೆ ಸಹಕರಿಸಿದ್ದ ವಕೀಲ ಗಿರೀಶ್‌ ಭಟ್ ಅವರಿಗೆ ₹ 25 ಸಾವಿರ ಶುಲ್ಕ ನೀಡುವಂತೆಯೂ ನ್ಯಾಯಪೀಠ ನಿರ್ದೇಶಿಸಿದೆ. ‘ಗಿರೀಶ್‌ ಭಟ್‌ ಅವರು ವಿಸ್ತೃತ ಸಂಶೋಧನೆ ನಡೆಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಕಾನೂನುಗಳನ್ನು ಅಭ್ಯಸಿಸಿ ಪರಿಹಾರ ಮೊತ್ತದ ಹೆಚ್ಚಳಕ್ಕೆ ನೆರವಾಗಿದ್ದಾರೆ’ ಎಂದು ನ್ಯಾಯಪೀಠ ಶ್ಲಾಘಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT