‘ತಾಯಿಯ ಬಳಿ ಇರಲು ಕೆನಡಾಕ್ಕೆ ಹೋಗಲ್ಲ; ಅಪ್ಪನ ಜೊತೆ ಭಾರತದಲ್ಲಿಯೇ ಇರುತ್ತೇನೆ’

7
ಅಪ್ಪಾ, ಅಪ್ಪ ನಂಗೆ ನೀನು ಬೇಕಪ್ಪ: ಮಗಳ ಇಚ್ಛೆಗೆ ಹೈಕೋರ್ಟ್‌ ಅಸ್ತು

‘ತಾಯಿಯ ಬಳಿ ಇರಲು ಕೆನಡಾಕ್ಕೆ ಹೋಗಲ್ಲ; ಅಪ್ಪನ ಜೊತೆ ಭಾರತದಲ್ಲಿಯೇ ಇರುತ್ತೇನೆ’

Published:
Updated:
Prajavani

ಬೆಂಗಳೂರು: ‘ನಾನು ತಾಯಿಯ ಬಳಿ ಇರಲು ಕೆನಡಾಕ್ಕೆ ಹೋಗುವುದಿಲ್ಲ. ಅಪ್ಪನ ಜೊತೆ ಭಾರತದಲ್ಲಿಯೇ ಇರುತ್ತೇನೆ. ಎರಡನೇ ತಾಯಿ ತುಂಬಾ ಒಳ್ಳೆಯವರು. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂಬ ಕೆನಡಾ ಪೌರತ್ವ ಪಡೆದ 10 ವರ್ಷದ ಹೆಣ್ಣು ಮಗುವಿನ ಆಸೆಗೆ ಹೈಕೋರ್ಟ್ ಅಸ್ತು ಎಂದಿದೆ.

ಪತಿ-ಪತ್ನಿ ಮಧ್ಯದ ಕಲಹಕ್ಕೆ ಸಂಬಂಧಿಸಿದಂತೆ, ‘ಮಗು ತಾಯಿಯ ಬಳಿ ಇರಬೇಕು’ ಎಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿದೆ.

ಈ ಕುರಿತಂತೆ 41 ವರ್ಷದ ತಂದೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮನ್ನಿಸಿರುವ ನ್ಯಾಯಪೀಠ, ‘ಸಂರಕ್ಷಕರು ಮತ್ತು ಪೋಷಕರು ಉಸ್ತುವಾರಿ ಕಾಯ್ದೆ–1890ರ ಕಲಂ 12ರ ಅನುಸಾರ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯ 2018ರ ಅಕ್ಟೋಬರ್ 30ರಂದು ನೀಡಿರುವ ಆದೇಶ ಸೂಕ್ತವಾಗಿಲ್ಲ. ಹಿಂದೂ ಅಲ್ಪಸಂಖ್ಯಾತ ಕಾಯ್ದೆ–1956ರ ಅನುಸಾರ ಅಪ್ರಾಪ್ತ ಹಿಂದೂ ಬಾಲಕ ಬಾಲಕಿಯರಿಗೆ ಸ್ವಾಭಾವಿಕವಾಗಿಯೇ ತಂದೆಯೇ ಮೊದಲ ಸಂರಕ್ಷಣಾ ಅಧಿಕಾರ ಹೊಂದಿರುತ್ತಾನೆ’ ಎಂದು ಹೇಳಿದೆ.

‘ಮಗುವಿನ ಪಾಸ್‌ಪೋರ್ಟ್‌ ಮತ್ತು ಪಿಒಐ ಕಾರ್ಡ್‌ (ಪರ್ಸನ್‌ ಆಫ್‌ ಇಂಡಿಯನ್‌) ಅನ್ನು ಕೂಡಲೇ ತಂದೆಗೆ ನೀಡಬೇಕು. ಒಂದು ವೇಳೆ ತಾಯಿಯು ಮಗಳ ಭೇಟಿಗೆ ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಅದಕ್ಕೆ ತಂದೆ ವಿರೋಧ ಮಾಡಬಾರದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಬಾಲಕಿ ಈ ಮೊದಲೇ ಕೌಟುಂಬಿಕ ನ್ಯಾಯಾಲಯದಲ್ಲಿ, ತಾನು ತಂದೆಯ ಜೊತೆ ಇರುವುದಾಗಿ ಹೇಳಿದ್ದನ್ನು ಕಡೆಗಣಿಸಲಾಗಿದೆ. ಇದು ತಪ್ಪು. ಮಗು ಮಾನಸಿಕವಾಗಿ ಸರಿಯಾಗಿ ಯೋಚಿಸಬಲ್ಲ ಬುದ್ಧಿವಂತೆ, ತಂದೆ–ತಾಯಿಗಳ ಸ್ವಭಾವ, ವ್ಯತ್ಯಾಸವನ್ನು ಚೆನ್ನಾಗಿ ಅರಿಯಬಲ್ಲವಳಿದ್ದಾಳೆ. ತನ್ನನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬುದೂ ಆಕೆಗೆ ಗೊತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಉತ್ತರ ಕರ್ನಾಟಕ ಭಾಗದ ಪತಿ–ಪತ್ನಿ ಕುಟುಂಬದ ಒಪ್ಪಿಗೆಯ ಮೇರೆಗೆ 2006ರ ಏಪ್ರಿಲ್‌ 30ರಂದು ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಿದ್ದರು. ನಂತರ ಕೆನಡಾಕ್ಕೆ ತೆರಳಿದ್ದರು. 2008ರ ಅಕ್ಟೋಬರ್‌ 20ರಂದು ಹೆಣ್ಣು ಮಗು ಜನಿಸಿತ್ತು.

ಏತನ್ಮಧ್ಯೆ ಪತಿ ಭಾರತಕ್ಕೆ ಹಿಂದಿರುಗಲು ಬಯಸಿದರು. ಆದರೆ, ಪತ್ನಿ ಒಪ್ಪದೇ ವ್ಯಾಂಕೂವರ್‌ನಲ್ಲೇ ಉಳಿಯುವ ಹಟ ಹಿಡಿದರು.
ಮಾತ್ರವಲ್ಲ ಭಾರತಕ್ಕೆ ಹೋಗುವುದಾದರೆ ವಿಚ್ಛೇದನ ಕೋರುವುದಾಗಿ ಕೋರ್ಟ್‌ ಮೆಟ್ಟಿಲು ತುಳಿದರು. ವಿಚ್ಛೇದನ ವ್ಯಾಜ್ಯ ಶುರುವಾದ ಬಳಿಕ ಪತಿ ಮತ್ತೊಂದು ಮದುವೆಯಾದರು.

‘ವಾತ್ಸಲ್ಯದ ನೆಲೆಯಲ್ಲಿ ನೋಡಬೇಕು’

‘ಇದು ಮಗುವಿನ ಹಿತದೃಷ್ಟಿಯಿಂದ ನೀಡಲಾಗುತ್ತಿರುವ ಆದೇಶವೇ ಹೊರತು ತಂದೆಯ ಹಕ್ಕುಗಳನ್ನು ಪುರಸ್ಕರಿಸಿದೆ ಎಂದರ್ಥವಲ್ಲ’ ಎಂದು ತಿಳಿಸಲಾಗಿದೆ.

‘ಈ ಪ್ರಕರಣದಲ್ಲಿ ತಂದೆ–ತಾಯಿಗಳು ತಮ್ಮ ಅಹಂಭಾವದ ಬೆನ್ನೇರಿ ವ್ಯಾಜ್ಯ ಸೆಣಸುತ್ತಾ ಮಗುವಿನ ಸರ್ವೊಚ್ಚ ಬೆಳವಣಿಗೆ ಮತ್ತು ಭವಿಷ್ಯವನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಪ್ರೀತಿ, ವಾತ್ಸಲ್ಯ, ಸದ್ಭಾವನೆಗಳ ಮಾನವೀಯ ನೆಲೆಯಲ್ಲಿ ಈ ಪ್ರಕರಣವನ್ನು ಗಮನಿಸಲಾಗಿದೆ’ ಎಂದು ವಿವರಿಸಲಾಗಿದೆ.

‘ಬೇಸರವಿಲ್ಲದೆ ಮನೆಗೆಲಸ ಮಾಡುತ್ತಿದ್ದ ಪತಿ’

‘ಪತಿ ಬೆಳಿಗ್ಗೆ ಬೇಗ ಎದ್ದು ಪತ್ನಿಗೆ, ಪುತ್ರಿಗೆ ತಿಂಡಿ ತಯಾರಿಸುತ್ತಿದ್ದರು. ರಾತ್ರಿ ಶಿಫ್ಟ್‌ ಮಾಡಿ ಹಗಲಿನಲ್ಲಿ ಮನೆಯ ದೇಖರೇಖಿ ಮಾಡುತ್ತಿದ್ದರು. ಆದರೆ, ಪತ್ನಿ ಒಂಚೂರು ಕರುಣೆಯಿಲ್ಲದೆ ಆಗಾಗ್ಗೆ ಪತಿಯ ಮೇಲೆಯೇ ಹಲ್ಲೆ ನಡೆಸಿದ್ದಾಳೆ’ ಎಂದು ಅರ್ಜಿದಾರ ಪತಿಯ ಪರ ವಕೀಲರು ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ತಿಳಿಸಿದ್ದರು.

‘ಒಮ್ಮೆ ಇಬ್ಬರ ಮಧ್ಯೆ ಜಗಳವಾದಾಗ ಪತ್ನಿ ಪತಿಯ ಹೆಬ್ಬೆರಳನ್ನು ಮುರಿಯಲು ಪ್ರಯತ್ನಿಸಿದ್ದಳು. ಪತಿಯ ನಡವಳಿಕೆ ನಿಸ್ಸಂದೇಹವಾಗಿಯೂ ಉತ್ತಮವಾಗಿದೆ’ ಎಂದು ಪ್ರತಿಪಾದಿಸಿದ್ದರು.

**

ಮಗು ಯಾವುದೊ ಆಸ್ತಿ ಅಥವಾ ವಸ್ತು ಅಲ್ಲ. ತಾಯಿ–ತಂದೆ ಉತ್ತಮ ಶಿಕ್ಷಣ ಪಡೆದವರು. ಧನಿಕರೂ ಹೌದು. ಆದರೆ, ಹಾರ್ದಿಕ ಸಂಬಂಧ ಇಲ್ಲದೆ ಬದುಕು ನಡೆಸಿದ್ದಾರೆ.
– ಬಿ.ವೀರಪ್ಪ, ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 27

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !