ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಪ್ರಕರಣ ವಿಚಾರಣೆ: ಜಡ್ಜ್ ಲಂಚ ತಗೋತಾರೆ ಅಂದಾಕ್ಷಣ ಅರೆಸ್ಟ್ ಮಾಡೋಕಾಗುತ್ತಾ?

ಜಿಲ್ಲಾಧಿಕಾರಿ ವಿಜಯ ಶಂಕರ್‌ ಮೂರು ದಿನ ಪೊಲೀಸ್‌ ಕಸ್ಟಡಿಗೆ
Last Updated 9 ಜುಲೈ 2019, 19:20 IST
ಅಕ್ಷರ ಗಾತ್ರ

ಬೆಂಗಳೂರು: ಮಂತ್ರಿಗಳು, ಜಡ್ಜ್‌ಗಳು ಲಂಚ ತಗೊಂಡಿದ್ದಾರೆ ಎಂದು ಕೋರ್ಟ್‌ ಕಾರಿಡಾರ್‌ನಲ್ಲಿ ಯಾರೋ ಹೇಳಿದಾಕ್ಷಣ ಅದನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ಬಂಧಿಸಲು ಆಗುತ್ತದೆಯೇ..?

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿ ಎಸ್‌ಐಟಿ ವಶದಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್‌ ಪರ ಹಿರಿಯ ವಕೀಲ ವೈ.ಆರ್.ಸದಾಶಿವ ರೆಡ್ಡಿ ಅವರು ಮಂಗಳವಾರ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ ಅಮರಣ್ಣವರ ಅವರ ಮುಂದೆ ವಾದ ಮಂಡಿಸುವಾಗ ಹೇಳಿದ ಮಾತಿದು.

‘ಐಎಂಎ ಹಗರಣದಲ್ಲಿ ವಂಚನೆಗೆ ಒಳಾಗದವರು, ಜಿಲ್ಲಾಧಿಕಾರಿ ವಿಜಯಶಂಕರ್‌ ವಿರುದ್ಧ ಎಲ್ಲೂ ದೂರು ನೀಡಿಲ್ಲ. ಹೀಗಾಗಿ ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣ ಅಂತರರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಪ್ರಕರಣದ ಸಹ ಆರೋಪಿಯೂ ಆದ ದ್ವಿತೀಯ ದರ್ಜೆ ಸಹಾಯಕ ಎನ್‌.ಮಂಜುನಾಥ್‌ ಹೇಳಿಕೆ ಆಧಾರದಲ್ಲಿ ಜಿಲ್ಲಾಧಿಕಾರಿಗಳನ್ನು ಬಂಧಿಸಿರುವುದು ಕಾನೂನು ಬಾಹಿರ’ ಎಂದು ಪ್ರತಿಪಾದಿಸಿದರು.

ಅಂತೆಯೇ ಮತ್ತೊಬ್ಬ ಹಿರಿಯ ವಕೀಲ ಎನ್.ಲಕ್ಷ್ಮೀ ನಾರಾಯಣ ಅವರೂ ವಿಜಯಶಂಕರ್ ಪರ ವಾದ ಮಂಡಿಸಿ, ‘ಕಂಪನಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳ, ದುಬೈ, ಚೆನ್ನೈ ಮುಂತಾದ ಹೊರ ರಾಜ್ಯಗಳ ಹೂಡಿಕೆದಾರರು ತಮ್ಮ ಹಣ ತೊಡಗಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸುವುದು ಸೂಕ್ತವಲ್ಲ. ವಿಜಯಶಂಕರ್‌ ನೀಡಿರುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. ಕೇಂದ್ರ ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದರು.

ಈ ಅಂಶಗಳನ್ನು ಅಲ್ಲಗಳೆದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಂ.ನಾರಾಯಣ ರೆಡ್ಡಿ, ‘ಆರೋಪಿ ವಿಜಯಶಂಕರ್ ₹ 1.5 ಕೋಟಿ ಲಂಚ ಪಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಈ ಹಣ ಹೂಡಿಕೆದಾರರಿಗೆ ಸೇರಿದ್ದು ಇದನ್ನು ವಾಪಸು ಪಡೆಯುವ ಅವಶ್ಯಕತೆ ಇದೆ. ಆದ್ದರಿಂದ ಆರೋಪಿಯನ್ನು ಸಮಗ್ರ ವಿಚಾರಣೆ ನಡೆಸಲು ಇದೇ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕು’ ಎಂದು ಕೋರಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಯನ್ನು ಮೂರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿ ವಿಚಾರಣೆ ಮುಂದೂಡಿದರು.

ಹೈಕೋರ್ಟ್‌ನಲ್ಲಿ ರಿಟ್‌: ‘ತಮ್ಮ ವಿರುದ್ಧ ಎಸ್‌ಐಟಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ವಿಜಯಶಂಕರ್ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ.

‘ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿ‌ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT