ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮಾಚರಣೆಗೆ ವಿಶೇಷ ಕಾರ್ಯಕ್ರಮ

ಧಾರವಾಡ ಹೈಕೋರ್ಟ್‌ ಪೀಠ ಸ್ಥಾಪನೆಯಾಗಿ ಹತ್ತು ವರ್ಷ
Last Updated 5 ಜುಲೈ 2018, 10:34 IST
ಅಕ್ಷರ ಗಾತ್ರ

ಧಾರವಾಡ: ’ಹತ್ತು ವರ್ಷಗಳ ಹಿಂದೆ ಸ್ಥಾಪನೆಗೊಂಡ ಧಾರವಾಡ ಹೈಕೋರ್ಟ್‌ ಪೀಠ ಈ ಅವಧಿಯಲ್ಲಿ ತೃಪ್ತಿಕರವಾಗಿ ಕೆಲಸ ಮಾಡಿದೆ. ಈ ಭಾಗದ ನ್ಯಾಯಾಪೇಕ್ಷಿತ ಕಕ್ಷದಾರರಿಗೆ ಶೀಘ್ರ ಮತ್ತು ಗುಣಮಟ್ಟದ ನ್ಯಾಯದಾನ ಮಾಡುವ ಮೂಲಕ ಸಫಲತೆ ಕಂಡಿದೆ’ ಎಂದು ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಆರ್.ಡಿ.ದೇಸಾಯಿ ಹೇಳಿದರು.

‘ಸುಧೀರ್ಘ ಹೋರಾಟದ ಮೂಲಕ ಪಡೆದ ಹೈಕೋರ್ಟ್‌ ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆ ಸಂಭ್ರಮವನ್ನು ಆಚರಿಸಲು ಇದೇ 7 ರಂದು ಬೆಳಿಗ್ಗೆ 11 ಕ್ಕೆ ಹೈಕೋರ್ಟ್‌ ಆವರಣದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹೈಕೋರ್ಟ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ ಮೋಹನ ಶಾಂತನಗೌಡರ್‌, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ, ನ್ಯಾಯಮೂರ್ತಿಗಳು, ಅಡ್ವೋಕೇಟ್‌ ಜನರಲ್‌ ಉದಯ ಹೊಳ್ಳ ಭಾಗವಹಿಸುತ್ತಾರೆ. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದುವ ನ್ಯಾಯಮೂರ್ತಿಗಳಾದ ಆರ್.ಬಿ.ಬೂದಿಹಾಳ, ಬಿ.ಎಸ್‌.ಪಾಟೀಲ್‌, ಬಿ.ಶ್ರೀನಿವಾಸೇಗೌಡ ಮತ್ತು ರತ್ನಕಲಾ ಅವರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

‘ಈ ಭಾಗದಲ್ಲಿ ಪೀಠ ಆರಂಭವಾಗಿರುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಿದೆ. ಮೊದಲು ಬೆಂಗಳೂರಿಗೆ ಹೋಗಿ ಬರುವುದು ವೆಚ್ಚದಾಯಕವಾಗಿತ್ತು. ಹೀಗಾಗಿ ಬಹಳಷ್ಟು ಸಂದರ್ಭದಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಈ ಭಾಗದ ಕಕ್ಷಿದಾರರು ಹಿಂದೇಟು ಹಾಕುತ್ತಿದ್ದರು. ಈಗ ಬೆಳಿಗ್ಗೆ ಧಾರವಾಡಕ್ಕೆ ಬಂದು ಸಂಜೆ ವಾಪಾಸು ತಮ್ಮ ಊರಿಗೆ ಹೋಗಲು ಸಾಧ್ಯವಾಗಿದೆ. ಜತೆಗೆ ಈ ಭಾಗದ ಅಭಿವೃದ್ಧಿಗೂ ಪೀಠ ಸ್ಥಾಪನೆ ಕಾರಣವಾಗಿದೆ’ ಎಂದು ಅವರು ಹೇಳಿದರು.

‘ಹತ್ತು ವರ್ಷದಲ್ಲಿ ಸುಮಾರು 2.65ಲಕ್ಷ ಪ್ರಕರಣಗಳು ದಾಖಲಾಗಿವೆ. ಪೀಠದಲ್ಲಿ ಸದ್ಯ ಸುಮಾರು 65 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಕೋರ್ಟ್‌ ಕಾರ್ಯ ತೃಪ್ತಿಕರವಾಗಿದೆ. ಬಾಕಿ ಇರುವ ಪ್ರಕರಣಗಳಿಗೆ ಹೋಲಿಸಿದರೆ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇದೆ. ಧಾರವಾಡ ಪೀಠಕ್ಕೆ 10 ನ್ಯಾಯಮೂರ್ತಿಗಳ ಅಗತ್ಯವಿದ್ದು, ಸದ್ಯ ಐದು ಜನ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೆಚ್ಚುತ್ತಿರುವ ಪ್ರಕರಣಗಳು, ಕಡಿಮೆ ಸಂಖ್ಯೆಯ ನ್ಯಾಯಮೂರ್ತಿಗಳಿರುವುದರಿಂದ ಅವರ ಮೇಲೆ ಕೂಡಾ ಕೆಲಸದ ಒತ್ತಡ ಉಂಟಾಗುತ್ತದೆ. ಹೀಗಾಗಿ ಅಗತ್ಯ ಸಂಖ್ಯೆಯ ನ್ಯಾಯಮೂರ್ತಿಗಳನ್ನು ನಿಯುಕ್ತಿಗೊಳಸಬೇಕು ಎನ್ನುವುದು ವಕೀಲರ ಸಂಘದ ಆಗ್ರಹ’ ಎಂದು ದೇಸಾಯಿ ಹೇಳಿದರು.

ಜೆ.ಎಸ್‌.ಶೆಟ್ಟಿ, ರಾಜಶೇಖರ ಬುರ್ಜಿ, ಎಂ.ಸಿ.ಹುಕ್ಕೇರಿ, ಪ್ರಶಾಂತ ಕಾಡದೇವರ್‌, ಮಧುಕೇಶ್ವರ ದೇಶಪಾಂಡೆ, ವಿಜಯ ಮಳಲಿ, ಚೇತನ್‌ ಲಿಂಬಿಕಾಯಿ, ಪ್ರಶಾಂತ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT