ಮಂಗಳವಾರ, ನವೆಂಬರ್ 19, 2019
26 °C
ನೀತಿ ಸಂಹಿತೆ–ನಿಗಮ ಮಂಡಳಿ ನೇಮಕ ಪ್ರಶ್ನಿಸಿ ರಿಟ್‌

ಹೈಕೋರ್ಟ್‌ ಮೆಟ್ಟಿಲೇರಿದ ದಿನೇಶ್‌ ಗುಂಡೂರಾವ್

Published:
Updated:

ಬೆಂಗಳೂರು: ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿರುವ ಚುನಾವಣಾ ನೀತಿ ಸಂಹಿತೆ ಹಾಗೂ ಈ ಕ್ಷೇತ್ರಗಳಲ್ಲಿನ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ ಮಂಡಳಿಗೆ ನೇಮಕ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾ‌ವ್‌ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಚುನಾವಣಾ ಆಯೋಗದ ಸಚಿವಾಲಯವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. 

ಮನವಿ ಏನು?: ‘ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ 2019ರ ಸೆಪ್ಟೆಂಬರ್‌ 27ರಂದು ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿ ಮತ್ತು ನೀತಿ ಸಂಹಿತೆ ನವೆಂಬರ್‌ 11ರಿಂದ ಜಾರಿಗೆ ಬರುವಂತೆ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು. ಈ 15 ಕ್ಷೇತ್ರಗಳಲ್ಲಿನ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಅಕ್ಟೋಬರ್ 9ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಆಕ್ಷೇಪಣೆ ಏನು?: ಉಪ ಚುನಾವಣೆಗೆ ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಲಾಗಿತ್ತು ಮತ್ತು ಚುನಾವಣಾ ಆಯೋಗ ಅದೇ ದಿನದಿಂದ ನೀತಿ ಸಂಹಿತೆ ಜಾರಿಗೊಳಿಸಿದೆ. ಇದರ ಅನುಸಾರ ಹಲವು ಮಂದಿ ನಾಮಪತ್ರವನ್ನೂ ಸಲ್ಲಿಸಿದ್ದರು. ಆದರೆ, ಏಕಾಏಕಿ ಈ ಅಧಿಸೂಚನೆ ರದ್ದುಪಡಿಸಿ ಸೆಪ್ಟೆಂಬರ್‌ 27ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ. 2019ರ ನವೆಂಬರ್ 11ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ತರಲಾಗಿದೆ. ಇದು ಕಾನೂನುಬಾಹಿರ ಮತ್ತು ಏಕಪಕ್ಷೀಯ ನಿರ್ಧಾರವಾಗಿದೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಅನರ್ಹ ಶಾಸಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದವರ ಪೈಕಿ 8 ಮಂದಿಯನ್ನು ವಿವಿಧ ನಿಗಮ ಮಂಡಳಿಗಳಿಗೆ ರಾಜ್ಯ ಸಚಿವ ಸ್ಥಾನ
ಮಾನದೊಂದಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಕ್ಟೋಬರ್ 9ರಂದು ಆದೇಶ ಹೊರಡಿಸಲಾಗಿದೆ. ಇದು ಮತದಾರರ ಮೇಲೆ ಪ್ರಭಾವ
ಬೀರುವ ಪ್ರಯತ್ನವಾಗಿದೆ’ ಎಂದು ದೂರಲಾಗಿದೆ.

‘ಚುನಾವಾಣಾ ಆಯೋಗದ ಈ ನಡೆ ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ. ಈಗಾಗಲೇ ಮತದಾರರಿಗೆ ಬಾಡೂಟ ಹಾಗೂ ಸೀರೆ ಹಂಚಿಕೆಯಂತಹ ಆಮಿಷ ಒಡ್ಡಲಾಗುತ್ತಿದ್ದು, ಇದರಿಂದ ಚುನಾವಣೆ ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂಬ ಭರವಸೆ ಇಲ್ಲವಾಗಿದೆ. ಆದ್ದರಿಂದ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಗಳನ್ನು ರದ್ದುಪಡಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)