ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳ್ಗಿಚ್ಚು ತಡೆಗೆ ಕಾರ್ಯಪಡೆ ಅಗತ್ಯವಿಲ್ಲ: ಹೈಕೋರ್ಟ್‌ ನಿರ್ದೇಶನ

ಅರಣ್ಯ ಸಂರಕ್ಷಣೆ ಮತ್ತು ಅವಘಡ ನಿಯಂತ್ರಣ
Last Updated 31 ಮೇ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಳ್ಗಿಚ್ಚು ತಡೆಯುವಲ್ಲಿ ಮತ್ತು ಅರಣ್ಯ, ಪ್ರಾಣಿ ಹಾಗೂ ಪಕ್ಷಿ ಸಂಕುಲದ ರಕ್ಷಣೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ಹೊರಬೇಕು’ ಎಂದು ಹೈಕೋರ್ಟ್ ನಿರ್ದೇಶಿಸಿದೆ.

‘ಕೊಡಗು ಜಿಲ್ಲೆಯಲ್ಲಿ ಕಾಳ್ಗಿಚ್ಚಿನಿಂದ ನಾಶವಾಗುವ ಅರಣ್ಯ ಸಂಪತ್ತು ರಕ್ಷಣೆಗೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು‘ ಎಂದು ಕೋರಿ ಕೊಡಗು ಜಿಲ್ಲೆ ಕಾತಕೇರಿ ಗ್ರಾಮದ ಕೆ.ವಿ.ರವಿ ಚೆಂಗಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ.

‘ಕಾಡಿಗೆ ಬೀಳುವ ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು’ ಎಂಬ ಅರ್ಜಿದಾರರ ಕೋರಿಕೆಯನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಇದೇ ವೇಳೆ ಅರಣ್ಯ ರಕ್ಷಣೆ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೆಲವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

‘ರಾಜ್ಯದ ಎಲ್ಲ ಅರಣ್ಯ ವಲಯಗಳಲ್ಲಿ ಕಾಳ್ಗಿಚ್ಚು ತಡೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ತಕ್ಷಣವೇ ಮುಂದಾಗಬೇಕು. ಇದಕ್ಕಾಗಿ ಎಲ್ಲ ಇಲಾಖೆಗಳ ಸಹಕಾರ ಪಡೆಯಬೇಕು. ಅವಘಡ ಸಂಭವಿಸಿದರೆ ಸ್ಥಳೀಯ ಅರಣ್ಯ ಅಧಿಕಾರಿಗಳನ್ನು ಹೊಣೆ ಮಾಡಬೇಕು’ ಎಂದು ಆದೇಶಿಸಿದೆ.

ನ್ಯಾಯಪೀಠದ ಆತಂಕ: ‘ಪ್ರಕೃತಿ ಸಂರಕ್ಷಣೆಗೆ ಸುಶಿಕ್ಷಿತರು ಮತ್ತು ಅನಕ್ಷರಸ್ಥರೂ ಸೇರಿದಂತೆ ಸಮಸ್ತ ಜನಕೋಟಿ ಕಟಿಬದ್ಧರಾಗಬೇಕಾದ ಕಾಲ ಈಗ ಕೂಡಿ ಬಂದಿದೆ. ಮನುಷ್ಯ ತನ್ನ ಮಿತಿ ಮೀರಿದ್ದಾನೆ. ಇದರಿಂದ ವನ್ಯಜೀವಿ ಮತ್ತು ಮಾನವ ಸಂಘರ್ಷ ಕಾಣಿಸಿಕೊಳ್ಳುತ್ತಿದೆ. ಇದು ಭವಿಷ್ಯದ ಅಪಾಯಕಾರಿ ಮುನ್ಸೂಚನೆ ಆಗಿದೆ. ನಾವೀಗ ಎಚ್ಚೆತ್ತುಕೊಳ್ಳದೇ ಹೋದರೆ ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲದಂತಾಗುತ್ತದೆ’ ಎಂದು ನ್ಯಾಯಪೀಠ ಎಚ್ಚರಿಸಿದೆ.

ಆಕ್ಷೇಪ: ‘ಅರಣ್ಯ ಸಂರಕ್ಷಣೆಗೆ ಸ್ಥಳೀಯರನ್ನು ಒಳಗೊಂಡ ಅಧಿಕಾರಿಗಳ ತಂಡ ರಚಿಸಬೇಕು. ಈ ತಂಡದಲ್ಲಿ ಕೊಡುಗು ಜಿಲ್ಲೆಗೆ ಅನ್ವಯ ಆಗುವಂತೆ ಅರ್ಜಿದಾರ ಕೆ.ವಿ.ರವಿ ಚೆಂಗಪ್ಪ ಅವರನ್ನೂ ಸೇರ್ಪಡೆ ಮಾಡಬೇಕು’ ಎಂದು ನ್ಯಾಯಪೀಠ ಆದೇಶಿಸಿತು.

ಇದನ್ನು ಆಕ್ಷೇಪಿಸಿದ ಸರ್ಕಾರಿ ವಕೀಲ ವೈ.ಡಿ.ಹರ್ಷ ಅವರು, ‘ಅರ್ಜಿದಾರರನ್ನು ಸೇರ್ಪಡೆ ಮಾಡಬಾರದು‘ ಎಂದು ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿಗಳು ಈ ಮನವಿಯನ್ನು ಸಾರಾಸಗಟು ತಳ್ಳಿ ಹಾಕಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ಪವನಚಂದ್ರ ಶೆಟ್ಟಿ, ‘ಅವಘಡಗಳ ಮುಂಚಿತ ಅರಿವಿಗೆ ಡ್ರೋನ್‌ ಕ್ಯಾಮೆರಾಗಳ‌ ವ್ಯವಸ್ಥೆ ಮಾಡಲು ನಿರ್ದೇಶಿಸಬೇಕು’ ಎಂದೂ ಕೋರಿದರು.

ಇದಕ್ಕೂ ಹರ್ಷ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ‘ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥೆಯ ಪರಿಧಿಯಲ್ಲೇ ಎಲ್ಲ ರಕ್ಷಣಾ ಕ್ರಮ ಕೈಗೊಳ್ಳಲು ಸರ್ಕಾರ ಸಮರ್ಥವಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT