ಶನಿವಾರ, ಅಕ್ಟೋಬರ್ 19, 2019
27 °C
ವೈದ್ಯಕೀಯ ವಿದ್ಯಾರ್ಥಿನಿಗೆ ಹೈಕೋರ್ಟ್ ಮಂಗಳಾರತಿ

‘ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸಬೇಡಿ’

Published:
Updated:

ಬೆಂಗಳೂರು: ‘ನನ್ನ ಸ್ನೇಹಿತನನ್ನು ಆತನ ತಂದೆ–ತಾಯಿ ಅವನ ಅನುಮತಿ ಇಲ್ಲದೆ ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿದ್ದು, ಅಕ್ರಮ ಬಂಧನದಲ್ಲಿಟ್ಟಿದ್ದಾರೆ' ಎಂದು ಆಕ್ಷೇಪಿಸಿ ಹೇಬಿಯಸ್ ಕಾರ್ಪಸ್‌ ಅರ್ಜಿ ದಾಖಲಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿಗೆ ಹೈಕೋರ್ಟ್‌ ಮಂಗಳಾರತಿ ಎತ್ತಿದೆ.

‘ಮತ್ತೊಬ್ಬರ ಮನೆಯ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ನಿಮಗೇನು ಅಧಿಕಾರ. ತೆಪ್ಪಗೆ ನಿಮ್ಮ ಕೆಲಸ ನೋಡಿಕೊಂಡು ಬಿದ್ದಿರಿ’ ಎಂದು ಮೌಖಿಕವಾಗಿ ಎಚ್ಚರಿಸಿದೆ. ಈ ಸಂಬಂಧ ಮುಚ್ಚಳಿಕೆಯೊಂದನ್ನೂ ಬರೆಯಿಸಿಕೊಂಡು ಕಳುಹಿಸಿದೆ.

ಪ್ರಕರಣವೇನು?: ಅವರು 24 ವರ್ಷದ ಸ್ಫುರದ್ರೂಪಿ. ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞ. ಆದರೆ, ಗಾಂಜಾ ಸೇವನೆ ಚಟಕ್ಕೆ ದಾಸರಾಗಿದ್ದಾರೆ. ಹೀಗಾಗಿ ತಂದೆ–ತಾಯಿ ಅವರನ್ನು ನಗರದ ಖಾಸಗಿ ವ್ಯಸನಮುಕ್ತಿ ಕೇಂದ್ರವೊಂದಕ್ಕೆ ದಾಖಲಿಸಿದ್ದು, ಮನೋಸಾಮಾಜಿಕ ಆಪ್ತ ಸಲಹೆ ಕೊಡಿಸುತ್ತಿದ್ದಾರೆ.

ತಂದೆ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಇಎನ್‌ಟಿ (ಕಣ್ಣು, ಕಿವಿ, ಗಂಟಲು) ವಿಭಾಗದ ಮುಖ್ಯಸ್ಥರು. ತಾಯಿಯೂ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ನರರೋಗ ತಜ್ಞೆ. ಮಗನನ್ನು ಗಾಂಜಾ ಸೇವನೆ ಚಟದಿಂದ ಹೊರತರಲು ಕಳೆದ ವರ್ಷ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಟದಿಂದ ಮುಕ್ತರಾಗಲೇ ಇಲ್ಲ. ಇದರಿಂದಾಗಿ ಕಳೆದ ಮೂರು ವರ್ಷಗಳಿಂದ ಇಂಟರ್ನ್‌ಷಿಪ್‌ ಪೂರ್ಣಗೊಂಡಿಲ್ಲ. ವ್ಯಸನದಿಂದಾಗಿ ತೀವ್ರ ಹೊಟ್ಟೆನೋವು, ಪದೇ ಪದೇ ವಾಂತಿ ಮಾಡಿಕೊಳ್ಳುವ ಕಾರಣ ಒಂದು ವರ್ಷದ ಅವಧಿಯಲ್ಲಿ 22 ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮಗನ ಅವಸ್ಥೆಯಿಂದ ಕಂಗೆಟ್ಟ ತಂದೆ–ತಾಯಿ ವ್ಯಸನಮುಕ್ತಿ ಕೇಂದ್ರಕ್ಕೆ ದಾಖಲಿಸುತ್ತಿದ್ದಂತೆಯೇ, ಸ್ನೇಹಿತೆ ಎಂದು ಹೇಳಿಕೊಂಡ 25 ವರ್ಷದ ವೈದ್ಯ ವಿದ್ಯಾರ್ಥಿನಿ, ‘ನನ್ನ ಸ್ನೇಹಿತನನ್ನು ಅಕ್ರಮ ಬಂಧನದಲ್ಲಿಡ ಲಾಗಿದೆ. ಅವನ ಅನುಮತಿ ಇಲ್ಲದೆ ಒತ್ತಾಯ‍ಪೂರ್ವಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ದೂರಿ ಸ್ಥಳೀಯ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ–ತಾಯಿಯನ್ನು ವಿಚಾರಿಸಿ ನಿಜಾಂಶ ಖಚಿತಪಡಿಸಿಕೊಂಡರು. ಏತನ್ಮಧ್ಯೆ ವೈದ್ಯ ವಿದ್ಯಾರ್ಥಿನಿ, ಹೈಕೋರ್ಟ್‌ ಕದ ಬಡಿದರು.

‘2012ರಿಂದ ನಾನು, ಅವನು ಗಾಢ ಸ್ನೇಹದಲ್ಲಿದ್ದೇವೆ. ವ್ಯಸನಮುಕ್ತಿ ಕೇಂದ್ರದ ಕೆಲವು ಠಕ್ಕರು ನನ್ನ ಸ್ನೇಹಿತನನ್ನು ಹೊತ್ತೊಯ್ದು ಅವನ ಇಚ್ಛೆಗೆ ವಿರುದ್ಧವಾಗಿ ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ. ಇದು ವ್ಯಕ್ತಿಯೊಬ್ಬನಿಗೆ ನೀಡಲಾದ ಸಂವಿಧಾನದತ್ತ ಹಕ್ಕುಗಳನ್ನು ಮೊಟಕುಗೊಳಿಸಿದಂತೆ. ವೈಯಕ್ತಿಕ ಸ್ವಾತಂತ್ರ್ಯದ ಹರಣ’ ಎಂದು ಆಕ್ಷೇಪಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿದ್ಯಾರ್ಥಿನಿಯ ಆಕ್ಷೇಪಕ್ಕೆ ಕಿಡಿ ಕಾರಿದೆ. ನ್ಯಾಯಪೀಠದ ಎಚ್ಚರಿಕೆಗೆ ತಲೆ ಬಾಗಿರುವ ವಿದ್ಯಾರ್ಥಿನಿ ಅರ್ಜಿಯನ್ನು ಹಿಂಪಡೆದಿದ್ದಾರೆ.

ನ್ಯಾಯಪೀಠಕ್ಕೆ ‍ಪೊಲೀಸರ ದಾಖಲೆ ಸಲ್ಲಿಕೆ

ವ್ಯಸನಮುಕ್ತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಪೊಲೀಸರು, ವೈದ್ಯ ವಿದ್ಯಾರ್ಥಿಗೆ ಚಿಕಿತ್ಸೆ ನೀಡುತ್ತಿರುವುದರ ಬಗ್ಗೆ ವಿಚಾರಣೆ ನಡೆಸಿ ಖಚಿತಪಡಿಸಿಕೊಂಡಿದ್ದಾರೆ. ಈ ಕುರಿತ ದಾಖಲೆ ಹಾಗೂ ಫೋಟೊಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.

‘ಪೋಷಕರು ಅಥವಾ ಕೇಂದ್ರದವರು ಆತನನ್ನು ಅಕ್ರಮ ಬಂಧನದ ಲ್ಲಿಟ್ಟಿಲ್ಲ. ಕಾನೂನು ಬದ್ಧವಾಗಿಯೇ ಚಿಕಿತ್ಸೆ ಕೊಡಿಸುತ್ತಿದ್ದಾರೆ’ ಎಂದು ವಿವರಿಸಿದ್ದಾರೆ.

* ತಂದೆ–ತಾಯಿ ತಮ್ಮ ಮಕ್ಕಳನ್ನು ಬೆಳೆಸುವ ದಿಸೆಯಲ್ಲಿ ಕೊಂಚ ಹಾದಿ ತಪ್ಪಿದರೂ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಪ್ರಕರಣವಿದು

ಎಸ್‌.ವಿ.ಗಿರಿಕುಮಾರ್ ಹೈಕೋರ್ಟ್‌ ಸರ್ಕಾರಿ ವಕೀಲ

Post Comments (+)