ಸೋಮವಾರ, ಡಿಸೆಂಬರ್ 9, 2019
22 °C

ಪ್ರತ್ಯೇಕ ಧರ್ಮ: ಇದುವರೆಗಿನ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ರಾಜ್ಯದ ಸರ್ಕಾರದ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕಲು ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಡಲು 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನ ಕೈಗೊಂಡಿತು.

* ಬೆಂಗಳೂರು ಅರಮನೆ ಮೈದಾನದಲ್ಲಿ 2017ರ ಜೂನ್‌ 14ರಂದು ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಆಗ ವೀರಶೈವ–ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂಬ ಬೇಡಿಕೆ ಸಲ್ಲಿಸಲಾಯಿತು.

* ಈ ಮನವಿ ಪತ್ರಕ್ಕೆ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಹಿರಿಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ ಹಾಗೂ ಅಂದಿನ ಪೌರಾಡಳಿತ ಸಚಿವರೂ ಆಗಿದ್ದ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಸಹಿ ಮಾಡಿದ್ದರು.

* ಏತನ್ಮಧ್ಯೆ ಮಾತೆ ಮಹಾದೇವಿ ನೇತೃತ್ವದ 'ಲಿಂಗಾಯತ ಧರ್ಮ ಮಹಾಸಭಾ' (ಅಖಿಲ ಭಾರತ ಲಿಂಗಾಯತ ಧರ್ಮ ಪ್ರತಿನಿಧಿಗಳ ಸಂಸ್ಥೆ) ಜೂನ್‌ 23ರಂದು ಮುಖ್ಯಮಂತ್ರಿಯವರಿಗೆ ಮತ್ತೊಂದು ಮನವಿ ಸಲ್ಲಿಸಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಕೋರಿದರು.

* ಇದಕ್ಕೆ ಸಂಶೋಧಕ ಎಂ.ಚಿದಾನಂದಮೂರ್ತಿ ವಿರೋಧ ವ್ಯಕ್ತಪಡಿಸಿದರು.

* ಈ ಬೆಳವಣಿಗೆ ನಂತರ ಪರ ವಿರೋಧದ ಹೇಳಿಕೆಗಳು ಬೆಳೆದು, ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ 2017ರ ಆಗಸ್ಟ್‌ 10ರಂದು ನಡೆದ ಲಿಂಗಾಯತ ಸಮಾಜದ ಮಠಾಧೀಶರು, ವಿವಿಧ ಪಕ್ಷಗಳ ಪ್ರಮುಖರು ಸಭೆ ಸೇರಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ನಾಂದಿ ಹಾಡಿದರು.

* ಅಂದಿನ ಸಚಿವರುಗಳಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ಶರಣ ಪ್ರಕಾಶ ಪಾಟೀಲ, ಬಸವರಾಜ ರಾಯರಡ್ಡಿ ಹಾಗೂ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ಬೀದರ್‌, ಬೆಳಗಾವಿ, ಲಾತೂರ್‌, ಕಲಬುರ್ಗಿ, ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ರ‌್ಯಾಲಿಗಳು ನಡೆದವು.

* 2018ರ ಜನವರಿ 19ರಂದು ಮಾತೆ ಮಹಾದೇವಿ ಬೆಂಗಳೂರಿನಲ್ಲಿ ರ‌್ಯಾಲಿ ನಡೆಸಿದರು. ನಂತರದಲ್ಲಿ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಸಮಾವೇಶ ನಡೆದವು.

* ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ಕುರಿತು ಅಧ್ಯಯನ ನಡೆಸಲು 2017ರ ಡಿಸೆಂಬರ್‌ 10ರಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ ಮಾಡಿತು.

* ನಾಗಮೋಹನ ದಾಸ್‌ (ಅಧ್ಯಕ್ಷರು), ಪುರುಷೋತ್ತಮ ಬಿಳಿಮಲೆ, ಸಿ.ಎಸ್.ದ್ವಾರಕನಾಥ್‌, ಸರಜೂ ಕಾಟ್ಕರ್‌, ರಾಮಕೃಷ್ಣ ಮರಾಠೆ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಮುಜಾಫರ್‌ ಅಸಾದಿ, ಹನುಮಾಕ್ಷಿ ಗೋಗಿ ಸಮಿತಿಯಲ್ಲಿ ಇದ್ದರು.

* ಈ ಸಮಿತಿ 2018 ಮಾರ್ಚ್‌ 2ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು.

* ವರದಿ ಆಧರಿಸಿ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲು ಮಾರ್ಚ್ 21ರಂದು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

* ಎಲ್ಲಾ ಬೆಳವಣಿಗೆ ನಂತರ ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಧಾರವನ್ನು ಆಕ್ಷೇಪಿಸಿ 
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಯಿತು.

ಪ್ರತ್ಯೇಕ ಪಕ್ಷ ಸ್ಥಾಪನೆಗೆ ಆಗ್ರಹ

ನವದೆಹಲಿ: ಪಂಜಾಬ್‌ನಲ್ಲಿ ಸಿಖ್‌ ಧರ್ಮೀಯರು ತಮಗಾಗಿ ಪ್ರತ್ಯೇಕ ರಾಜಕೀಯ ಪಕ್ಷ ಇರಲಿ ಎಂಬ ಉದ್ದೇಶದಿಂದ ಶಿರೋಮಣಿ ಅಕಾಲಿದಳ ಪಕ್ಷ ಹುಟ್ಟು ಹಾಕಿದಂತೆಯೇ, ಕರ್ನಾಟಕದಲ್ಲಿ ಲಿಂಗಾಯತರು ಪ್ರತ್ಯೇಕ ಪಕ್ಷ ಸ್ಥಾಪಿಸುವ ಅಗತ್ಯವಿದೆ ಎಂದು ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷೆ ಮಾತೆ ಮಹಾದೇವಿ ಅಭಿಪ್ರಾಯಪಟ್ಟರು.

‘ಕಳೆದ ವರ್ಷ ರಾಜ್ಯದಲ್ಲಿ ನಡೆದ ಹೋರಾಟವನ್ನು ರಾಜಕಾರಣಿಗಳೂ ಬೆಂಬಲಿಸಿದರು. ಆಗ ಧಾರ್ಮಿಕ ಶಕ್ತಿಯೊಂದಿಗೆ ರಾಜಕೀಯ ಶಕ್ತಿಯೂ ಸೇರಿದ್ದರಿಂದ ನಮ್ಮ ಬೇಡಿಕೆಗೆ ಮನ್ನಣೆ ದೊರೆತಿತ್ತು. ಈಗ ಎಂ.ಬಿ. ಪಾಟೀಲ, ವಿನಯ್‌ ಕುಲಕರ್ಣಿ, ಬಸವರಾಜ ಹೊರಟ್ಟಿ, ಶರಣ ಪ್ರಕಾಶ ಪಾಟೀಲ ಮತ್ತಿತರರು ಪ್ರತ್ಯೇಕ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

***

ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಹಿಂದಿನ ಸರ್ಕಾರ ವೀರಶೈವ-ಲಿಂಗಾಯತ ಧರ್ಮ ವಿಭಜನೆ ಯತ್ನಕ್ಕೆ ಕೈ ಹಾಕಿತ್ತು. ಅದರಲ್ಲಿ ಫಲ ಸಿಗಲಿಲ್ಲ

–ಬಿ.ಎಸ್, ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)