ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ವಿಷಯವೇ ಇಲ್ಲ: ರಾಹುಲ್‌ ಗಾಂಧಿ ವ್ಯಂಗ್ಯ

Last Updated 6 ಮೇ 2018, 10:43 IST
ಅಕ್ಷರ ಗಾತ್ರ

ಗದಗ: ‘ನುಡಿದಂತೆ ನಡೆಯುವ ಕನ್ನಡಿಗರ ಮುಂದೆ ನುಡಿದಂತೆ ನಡೆಯದ ಪ್ರಧಾನಿ ನರೇಂದ್ರ ಮೋದಿ ಯಾವ ವಿಷಯ ಇಟ್ಟುಕೊಂಡು ಮತಯಾಚನೆ ಮಾಡುತ್ತಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದರು.

ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ‘ಮೋದಿ ಅವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಆದರೆ, ಅವರಿಗೆ ಭಾಷಣ ಮಾಡಲು ವಿಷಯಗಳೇ ಇಲ್ಲವಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಆಗುತ್ತಿಲ್ಲ. ಯಾಕೆಂದರೆ ಅವರ ಪಕ್ಕದಲ್ಲೇ ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರು ಇದ್ದಾರೆ’ ಎಂದು ಕುಟುಕಿದರು.

‘ಮೋದಿ ಈ ದೇಶದ ಪ್ರಧಾನಿ, ಅವರ ಬಗ್ಗೆ ಗೌರವದಿಂದ ಮಾತನಾಡು ತ್ತೇನೆ. ಇದು ಕಾಂಗ್ರೆಸ್‌ ಸಂಸ್ಕೃತಿ. ಇದೇ ನಮಗೆ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ. ಆದರೆ, ಅವರನ್ನು ಪ್ರಶ್ನೆ ಮಾಡುತ್ತೇನೆ, ಈ ದೇಶದ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮಾ ಮಾಡುತ್ತೇನೆ ಅಂದಿದ್ದರಲ್ಲ, ಆ ₹15 ಲಕ್ಷ ಎಲ್ಲಿ ಹೋಯಿತು, 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುತ್ತೇನೆ ಎಂದಿದ್ದರಲ್ಲ ಒಬ್ಬರಿಗಾದರೂ ಉದ್ಯೋಗ ಲಭಿಸಿದೆಯಾ, ರೈತರ ಸಾಲ ಯಾಕೆ ಮನ್ನಾ ಮಾಡಲಿಲ್ಲ. ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ, ನಮಸ್ಕಾರ ಮಾಡುವ ನೀವು ಅವರು ಪ್ರತಿಪಾದಿಸಿದ್ದ ವಿಚಾರಧಾರೆಯಲ್ಲಿ ಒಂದನ್ನಾದರೂ ಪಾಲಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ಉರಿ ಬಿಸಿಲನ್ನೂ ಲೆಕ್ಕಿಸದೆ ನನ್ನ ಭಾಷಣ ಆಲಿಸಲು ಬಂದಿರುವ ನಿಮಗೆ ಧನ್ಯವಾದ ಎಂದು ಭಾಷಣ ಪ್ರಾರಂಭಿಸಿದ ರಾಹುಲ್‌, ಈ ಸಲದ ವಿಧಾನಸಭೆ ಚುನಾವಣೆ ಎರಡು ವಿಚಾರಧಾರೆಗಳ ಮೇಲೆ ನಡೆಯಲಿದೆ. ಒಂದು ಕಾಂಗ್ರೆಸ್‌ನ ವಿಚಾರಧಾರೆ. ಅಂದರೆ ಅದು ಕರ್ನಾಟಕದ ಮತ್ತು ಬಸವಣ್ಣ ಅವರ ವಿಚಾರಧಾರೆ. ಇನ್ನೊಂದು ಬಿಜೆಪಿಯ ವಿಚಾರಧಾರೆ. ಅದು ನಾಗಪುರದ ಆರ್‌ಎಸ್‌ಎಸ್‌ ಕೇಂದ್ರದ ವಿಚಾರಧಾರೆ’ ಎಂದರು.

‘ಅಕ್ರಮ ಗಣಿಗಾರಿಕೆ ಮೂಲಕ ₹35 ಸಾವಿರ ಕೋಟಿ ಲೂಟಿ ಮಾಡಿದ ಭ್ರಷ್ಟರನ್ನು ಕಾಂಗ್ರೆಸ್‌ ಜೈಲಿಗೆ ಕಳುಹಿಸಿತ್ತು. ಬಿಜೆಪಿ ಅವರೆಲ್ಲರನ್ನು ಹೊರತಂದಿದೆ. ಅಷ್ಟೇ ಅಲ್ಲ, ಈ ಗಬ್ಬರ್‌ ಸಿಂಗ್‌ ತಂಡವು ವಿಧಾನಸಭೆ ಒಳಗೂ ಬರಲಿ ಎಂದು 8 ಜನರಿಗೆ ಟಿಕೆಟ್‌ ಕೊಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎನ್ನುವ ಮೋದಿ, ಭ್ರಷ್ಟರನ್ನು ಏಕೆ ವಿಧಾನಸಭೆಗೆ ಕಳುಹಿಸುತ್ತೀರಿ ಎಂದು ಉತ್ತರಿಸಬೇಕು’ ಎಂದು ರಾಹುಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT