ಗುರುವಾರ , ಡಿಸೆಂಬರ್ 12, 2019
25 °C

ದೈಹಿಕ ನ್ಯೂನತೆ : 21 ವಾರಗಳ ಗರ್ಭಪಾತಕ್ಕೆ ಹೈಕೋರ್ಟ್ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘21 ವಾರ ಮತ್ತು ಮೂರು ದಿನ ತುಂಬಿದ ಭ್ರೂಣದ ಬೆಳವಣಿಗೆ ದೈಹಿಕ ನ್ಯೂನ್ಯತೆಯಿಂದ ಕೂಡಿರುವ ಕಾರಣ ಗರ್ಭಪಾತಕ್ಕೆ ಅನುವು ಮಾಡಿಕೊಡಬೇಕು’ ಎಂಬ 29 ವರ್ಷದ ಮಹಿಳೆಯೊಬ್ಬರ ಕೋರಿಕೆಗೆ ಹೈಕೋರ್ಟ್‌ ಅಸ್ತು ಎಂದಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಜಯಕುಮಾರ್ ಎ. ಪಾಟೀಲ, ವಾಣಿ ವಿಲಾಸ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶುಕ್ರವಾರವಷ್ಟೇ (ಡಿ.14) ಮಹಿಳೆಯ ಪರೀಕ್ಷೆ ನಡೆಸಿದ್ದ ವರದಿಯನ್ನು ನ್ಯಾಯಪೀಠಕ್ಕೆ ನೀಡಿದರು.

‘ಈ ಪ್ರಕರಣದಲ್ಲಿ ಗರ್ಭಸ್ಥ ಶಿಶುವಿನ ಅನ್ನನಾಳದ ಬೆಳವಣಿಗೆಯೇ ಆಗಿಲ್ಲ. ಮಗು ಜನಿಸಿದ ಮೇಲೆ ಬೆಳೆಯಬಹುದು. ಆದರೆ, ಜನಿಸಿದ ಕೂಡಲೇ ಅದಕ್ಕೆ ಹಾಲು ಕುಡಿಯಲೂ ಆಗುವುದಿಲ್ಲ. ಹೀಗಾಗಿ ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಇದು ಕ್ಲಿಷ್ಟ ಮತ್ತು ವೆಚ್ಚದಾಯಕವೂ ಹೌದು’ ಎಂದರು.

‘ಮಗುವಿಗೆ ಬೆನ್ನುಮೂಳೆಯೂ ಇಲ್ಲ. ಹೀಗಾಗಿ ಅದು ಜನಿಸಿದ ನಂತರ ಮಲಗಿಕೊಂಡ ಸ್ಥಿತಿಯಲ್ಲೇ ಇರಬೇಕಾಗುತ್ತದೆ. ಈ ಕಾರಣಗಳಿಂದ ತಾಯಿಗೆ ಮಾನಸಿಕ ಆಘಾತಗಳಾಗುವ ಸಾಧ್ಯತೆಗಳೂ ಇವೆ. ಇಂತಹ ವಿಷಯಗಳಲ್ಲಿ ತಜ್ಞ ವೈದ್ಯರ ತಂಡದ ವರದಿಯೇ ಅಂತಿಮ’ ಎಂದು ಪಾಟೀಲ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಖಾಸಗಿ ವೈದ್ಯರು ಮತ್ತು ಕೋರ್ಟ್‌ ನಿರ್ದೇಶನದ ಮೇರೆಗೆ ನೇಮಕಗೊಂಡ ತಜ್ಞ ನೀಡಿರುವ ವೈದ್ಯರ ವರದಿಯಲ್ಲಿ ಸಾಮ್ಯತೆ ಇದೆ. ಆದ್ದರಿಂದ ಅರ್ಜಿದಾರ ಮಹಿಳೆ ಗರ್ಭಪಾತವನ್ನು ತಮ್ಮ ಸ್ವಂತ ವೆಚ್ಚದಲ್ಲಿ ಮಾಡಿಸಿಕೊಳ್ಳಬಹುದು’ ಎಂದು ಅವರು ಆದೇಶಿಸಿದರು.

‘ಒಂದು ವೇಳೆ ಅರ್ಜಿದಾರ ಮಹಿಳೆ ಗರ್ಭಪಾತದಿಂದ ಭವಿಷ್ಯದಲ್ಲಿ ಯಾವುದಾದರೂ ತೊಂದರೆ ಎದುರಿಸಬೇಕಾಗಿ ಬಂದರೆ; ಅದಕ್ಕೆ ತಜ್ಞ ವೈದ್ಯರ ತಂಡ ಹೊಣೆಯಾಗುವುದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಿಲೇವಾರಿ ಮಾಡಿದರು.

ಅರ್ಜಿದಾರ ಮಹಿಳೆಯ ಕೋರಿಕೆ ಏನಿತ್ತು ?
* ಗರ್ಭಸ್ಥ ಶಿಶುವಿನ ಅನ್ನನಾಳದ ಬೆಳವಣಿಗೆಯೇ ಆಗಿಲ್ಲ.
* ಈ ಕಾರಣಕ್ಕೆ ಮಗು ಜನಿಸಿದ ಮೇಲೆ ತೊಂದರೆಗೆ ಒಳಗಾಗಲಿದೆ.
* ಸದ್ಯದ ಸ್ಥಿತಿಯಲ್ಲಿ ಮಗು ಹುಟ್ಟಿದ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕಿದೆ.
* ಒಂದು ವೇಳೆ ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ಅದು ಬದುಕುಳಿಯುವ ಸಾಧ್ಯತೆ ಕಡಿಮೆ.
* ಹೆರಿಗೆ ಸಮಯದಲ್ಲಿ ತಾಯಿಗೂ ಅಪಾಯವಿದೆ ಎಂದು ಖಾಸಗಿವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು