ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯಮಿ ಸಚಿನ್‌ ಬಳಿ ಡಿ.ಕೆ.ಶಿ ಅಕ್ರಮ ಹಣ ಜಮಾ’

ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯ ವಾದ
Last Updated 11 ಮಾರ್ಚ್ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ಅಕ್ರಮ ಹಣವನ್ನು ಸಚಿನ್‌ ನಾರಾಯಣ್‌ ಒಡೆತನದ ಉದ್ಯಮಗಳಲ್ಲಿ ತೊಡಗಿಸಲಾಗುತ್ತಿದೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ತಿಳಿಸಿದೆ.

‘₹ 8.60 ಕೋಟಿ ಪತ್ತೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕು’ ಎಂದು ಇ.ಡಿ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರು ಆರೋಪಿಗಳು ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಇ.ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಪ್ರಕರಣದ ಒಂದನೇ ಆರೋಪಿಯಾದ ಶಿವಕುಮಾರ್ ಅವರ ಲೆಕ್ಕವಿಲ್ಲದ ಹಣಕ್ಕೆ ಎರಡನೇ ಆರೋಪಿ ಸಚಿನ್‌ ನಾರಾಯಣ್‌ ಅಗ್ರೇಸರನಾಗಿದ್ದಾರೆ’ ಎಂದರು.

‘2017ರ ಆ.2ರಂದು ಡಿ.ಕೆ.ಶಿ ಅವರಿಗೆ ಸೇರಿದ ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಮತ್ತು ಆರ್‌.ಕೆ. ಪುರಂ ಫ್ಲ್ಯಾಟ್‌ಗಳಲ್ಲಿ ದೊರೆತ ಹಣವನ್ನು ಅಕ್ರಮವಾಗಿ ಹವಾಲಾ ಮುಖಾಂತರ ಸಾಗಿಸಲಾಗಿತ್ತು. ಈ ಪ್ರಕರಣದ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 120–ಬಿ ಅನುಸಾರ ಪ್ರಕರಣ ದಾಖಲಿಸಿರುವುದು ಸರಿಯಾಗಿಯೇ ಇದೆ. ಅಕ್ರಮ ಹಣ ಸಾಗಣೆ ಮಾಡಲು, ಸಂಗ್ರಹಿಸಲು ಷಡ್ಯಂತ್ರ ಹೂಡಿರುವುದು ಸ್ಪಷ್ಟವಾಗಿದೆ’ ಎಂದು ಪ್ರತಿಪಾದಿಸಿದರು.

ವಾದ ಅಪೂರ್ಣವಾಗಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ (ಮಾರ್ಚ್ 12) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT