ನಾಮಫಲಕಗಳಲ್ಲಿ ಕನ್ನಡ ಭಾಷೆ ವಿಚಾರ: ಬಿಬಿಎಂಪಿಗೆ ನೋಟಿಸ್‌

7

ನಾಮಫಲಕಗಳಲ್ಲಿ ಕನ್ನಡ ಭಾಷೆ ವಿಚಾರ: ಬಿಬಿಎಂಪಿಗೆ ನೋಟಿಸ್‌

Published:
Updated:

ಬೆಂಗಳೂರು: ‘ಭಾಷೆಯನ್ನು ಶಾಲಾ ಕಾಲೇಜುಗಳ ಮೂಲಕ ಪ್ರಚುರಪಡಿಸಿ ಅದರ ಶ್ರೀಮಂತಿಕೆ ಹೆಚ್ಚಿಸಬೇಕೇ ಹೊರತು, ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರಿದರೆ ಏನು ಪ್ರಯೋಜನ’ ಎಂದು ಹೈಕೋರ್ಟ್‌ ಸರ್ಕಾರವನ್ನು ಪ್ರಶ್ನಿಸಿದೆ.

‘ನಗರ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ‘ಭಾಷೆಯ ಬಳಕೆಗೆ ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಹಾಗೂ ನಾಮಫಲಕಗಳಲ್ಲಿ ಭಾಷೆಯ ಆದ್ಯತೆ ಗುರುತಿಸುವ ವಿಧಾನ ಎಷ್ಟು ಸರಿ’ ಎಂದು ಮೌಖಿಕವಾಗಿ ಪ್ರಶ್ನಿಸಿದರು.

‘ಯಾವ ಕಾನೂನಿನ ಆಧಾರದ ಮೇಲೆ ಇಂತಹ ಸುತ್ತೋಲೆ ಹೊರಡಿಸಿದ್ದೀರಿ ಎಂಬ ಬಗ್ಗೆ ವಿವರಣೆ ನೀಡಿ’ ಎಂದು ಬಿಬಿಎಂಪಿಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

‘ಪಾಲಿಕೆಯ ಆರೋಗ್ಯ ವಿಭಾಗದಿಂದ ವಾಣಿಜ್ಯ ಪರವಾನಗಿ ನೀಡುವಾಗ ಅಂಗಡಿ, ಹೋಟೆಲ್‌, ಕಂಪನಿಗಳು ತಮ್ಮ ಶಾಖೆಯ ಮುಂದೆ ಅಳವಡಿಸುವ ಮತ್ತು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಪ್ರಧಾನವಾಗಿ ಇರುವಂತೆ ನೋಡಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ವಾಣಿಜ್ಯ ಸಂಸ್ಥೆ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಬಿಬಿಎಂಪಿ 2017ರ ಜುಲೈ 27ರಂದು ಸುತ್ತೋಲೆ ಹೊರಡಿಸಿತ್ತು.

ಈ ಸುತ್ತೋಲೆ ರದ್ದುಪಡಿಸಬೇಕು ಎಂದು ಕೋರಿ ‘ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ’ ಹಾಗೂ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರೀಟೇಲ್ ಲಿಮಿಟೆಡ್ ರಿಟ್‌ ಅರ್ಜಿ ಸಲ್ಲಿಸಿವೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 9

  Angry

Comments:

0 comments

Write the first review for this !