ಜಗದೀಶ ಶೆಟ್ಟರ್‌ಗೆ ಹೈಕೋರ್ಟ್‌ ನೋಟಿಸ್

7
ಚುನಾವಣಾ ತಕರಾರು ಅರ್ಜಿ

ಜಗದೀಶ ಶೆಟ್ಟರ್‌ಗೆ ಹೈಕೋರ್ಟ್‌ ನೋಟಿಸ್

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆ ಮತ್ತು ಮತಗಳ ತಪ್ಪು ಎಣಿಕೆ ಆರೋಪದ ಮೇಲೆ ಸಲ್ಲಿಕೆಯಾಗಿರುವ ಎರಡು ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳ ಸಂಬಂಧ ಶಾಸಕರಾದ ಜಗದೀಶ್ ಶೆಟ್ಟರ್ ಹಾಗೂ ತನ್ವೀರ್ ಸೇಠ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ತನ್ವೀರ್ ಸೇಠ್ ವಿರುದ್ಧ ಮೈಸೂರಿನ ನರಸಿಂಹರಾಜ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಬ್ದುಲ್ ಮಜೀದ್ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ.ಮಹೇಶ ನಾಲವಾಡ ಹೈಕೊರ್ಟ್‌ಗೆ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠವು ಜಗದೀಶ್ ಶೆಟ್ಟರ್ ಹಾಗೂ ತನ್ವೀರ್ ಸೇಠ್ ಸೇರಿ ಎರಡೂ ಪ್ರಕ್ಷೇತ್ರಗಳಲ್ಲಿ ಚನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಅವರು ಚುನಾವಣೆಯಲ್ಲಿ ಗಳಿಸಿರುವ ಮತಗಳಿಗೂ ಹಾಗೂ ಆ ಕ್ಷೇತ್ರದಲ್ಲಿ ಚಲಾವಣೆಯಾಗಿರುವ ಒಟ್ಟು ಮತಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇವಿಎಂ ಹಾಗೂ ವಿವಿ ಪ್ಯಾಟ್‌ಗಳಲ್ಲಿರುವ ಮತಗಳು ಒಂದಕ್ಕೊಂದು ತಾಳೆಯಾಗಿಲ್ಲ. ಹೀಗಾಗಿ ಆ ಕ್ಷೇತ್ರದ ಮತಗಳನ್ನು ಮರು ಮತ ಎಣಿಕೆ ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಪರಾಜಿತ ಅಭ್ಯರ್ಥಿ ಮಹೇಶ್ ನಾಲವಾಡ ಕೋರಿದ್ದಾರೆ.

ಇನ್ನು ಅಬ್ದುಲ್ ಮಜೀದ್ ಅವರು, ‘ನರಸಿಂಹರಾಜ ಕ್ಷೇತ್ರದ ಕೆಲ ಮತಗಟ್ಟೆಗಳಲ್ಲಿ ಚಲಾವಣೆಯಾದ ಮತಗಳು ಶೂನ್ಯ ಎಂಬುದಾಗಿ ಇವಿಎಂ ತಿಳಿಸಿದೆ. ಆದರೆ, ಆ ಮತಗಟ್ಟೆಗಳಲ್ಲಿ ಸಾಕಷ್ಟು ಜನ ನನಗೆ ಮತ ಹಾಕಿದ್ದಾರೆ. ಹೀಗಾಗಿ ಮತಗಳು ದುರ್ಬಳಕೆಯಾಗಿವೆ. ತನ್ವೀರ್ ಸೇಠ್ ಅವರು ಶಾಸಕ ಸ್ಥಾನಕ್ಕೆ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು‘ ಎಂದು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !