ಮಂಗಳವಾರ, ನವೆಂಬರ್ 12, 2019
25 °C

ಹಿಂಬಡ್ತಿ ತೂಗುಗತ್ತಿ: 11 ಐಎಎಸ್‌ ಅಧಿಕಾರಿಗಳಿಗೆ ಆಘಾತ

Published:
Updated:

ಬೆಂಗಳೂರು: ಕೇಂದ್ರೀಯ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಮೊರೆ ಹೋಗಿ ಹಿಂಬಡ್ತಿಯ ತೂಗುಗತ್ತಿಯಿಂದ ರಕ್ಷಣೆ ಪಡೆದಿದ್ದ 11 ಐಎಎಸ್‌ ಅಧಿಕಾರಿಗಳಿಗೆ ಹೈಕೋರ್ಟ್‌ ಚುರುಕು ಮುಟ್ಟಿಸಿದೆ.

ಕೆಪಿಎಸ್‌ಸಿ ಪರಿಷ್ಕರಿಸಿದ 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ಪಟ್ಟಿ ವಿರುದ್ಧ 11 ಅಧಿಕಾರಿಗಳು ಸಿಎಟಿಯಿಂದ ತಡೆಯಾಜ್ಞೆ ತಂದಿದ್ದರು. ಇದೀಗ, ಸಿಎಟಿ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆ ನೀಡಿರುವುದರಿಂದ, ರಾಜ್ಯ ಸರ್ಕಾರದ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. 

2016ರ ಜೂನ್‌ 21ರಂದು ಹೈಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ 1998ನೇ ಸಾಲಿನ 383 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಪರಿಷ್ಕರಿಸಿತ್ತು. ಪರಿಷ್ಕೃತ ಪಟ್ಟಿ ಪ್ರಕಾರ, ಈ 11 ಅಧಿಕಾರಿಗಳು ಉಪ ವಿಭಾಗಾಧಿಕಾರಿ ಹುದ್ದೆಯಿಂದ ಸ್ಥಾನಪಲ್ಲಟಗೊಳ್ಳುತ್ತಾರೆ. ಅಷ್ಟೇ ಅಲ್ಲ, ಐಎಎಸ್‌ಗೆ ಬಡ್ತಿ ಪಡೆದಿದ್ದ ಈ ಅಧಿಕಾರಿಗಳು, ಈ ಹುದ್ದೆ ಕಳೆದುಕೊಂಡಿದ್ದರು. ತೀರ್ಪು ಪಾಲನೆ ಆಗಿಲ್ಲವೆಂದು ದೂರಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರ್ಕಾರ, ತೀರ್ಪು ಪಾಲಿಸುವ ಬಗ್ಗೆ ಮತ್ತು ಪರಿಷ್ಕೃತ ಪಟ್ಟಿಯಂತೆ ಸ್ಥಾನಪಲ್ಲಟಗೊಳ್ಳುವ 115 ಅಧಿಕಾರಿಗಳಿಗೆ ಹುದ್ದೆ ತೋರಿಸಿದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆ ಪಟ್ಟಿಯಲ್ಲಿ ಈ 11 ಅಧಿಕಾರಿಗಳು ಸ್ಥಾನಪಲ್ಲಟಗೊಂಡಿರುವುದನ್ನು ಉಲ್ಲೇಖಿಸಿತ್ತು.

ಆದರೆ, ಐಎಎಸ್‌ಗೆ ಬಡ್ತಿ ಪಡೆದಿದ್ದ 11 ಅಧಿಕಾರಿಗಳು ಪರಿಷ್ಕೃತ ಪಟ್ಟಿಯ ವಿರುದ್ಧ ಸಿಎಟಿ ಮೆಟ್ಟಿಲೇರಿದ್ದರು. ಪಟ್ಟಿಗೆ ತಡೆಯಾಜ್ಞೆ ನೀಡಿದ್ದ ಸಿಎಟಿ, ಕೆಪಿಎಸ್‌ಸಿ, ರಾಜ್ಯ ಸರ್ಕಾರ, ಯುಪಿಎಸ್‌ಸಿಗೆ ನೋಟಿಸ್‌ ಜಾರಿ ಮಾಡಿತ್ತು.

ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಮತ್ತೊಮ್ಮೆ ಪ್ರಮಾಣ ಪತ್ರ ಸಲ್ಲಿಸಿದ ರಾಜ್ಯ ಸರ್ಕಾರ, 11 ಅಧಿಕಾರಿಗಳು ಸಿಎಟಿಯಿಂದ ತಡೆಯಾಜ್ಞೆ ತಂದಿರುವುದನ್ನು ಹೈಕೋರ್ಟ್‌ ಗಮನಕ್ಕೆ ತಂದಿತ್ತು. ಆಗ, ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾಯಪೀಠ, ‘ತಡೆಯಾಜ್ಞೆ ಕಾರ್ಯಸಾಧುವಲ್ಲ’ ಎಂದೂ ಅಭಿಪ್ರಾಯಪಟ್ಟಿತ್ತು.

‌ಈ ಮಧ್ಯೆ, ಪರಿಷ್ಕೃತ ಪಟ್ಟಿಯಂತೆ ಉಪ ವಿಭಾಗಾಧಿಕಾರಿ ಹುದ್ದೆಗೆ ಸ್ಥಾನಪಲ್ಲಟಗೊಂಡು ಐಎಎಸ್‌ ಬಡ್ತಿಗೆ ಅರ್ಹತೆ ಪಡೆದಿದ್ದ ರಾಮಪ್ಪ ಹಟ್ಟಿ, ಸಿಎಟಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಮತ್ತು ನ್ಯಾಯಮೂರ್ತಿ ಸಚಿನ್ ಎಸ್‌. ಮಗದುಂ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ,  ಸಿಎಟಿ ಪ್ರಕ್ರಿಯೆಗೆ ಇದೇ 5ರಂದು ತಡೆ ನೀಡಿದೆ.

ಪ್ರತಿವಾದಿಗಳಾದ, ಕೇಂದ್ರ ಸರ್ಕಾರದ ಡಿಒಪಿಟಿ (ಸಿಬ್ಬಂದಿ ಮತ್ತು ತರಬೇತಿ ವಿಭಾಗ) ಕಾರ್ಯದರ್ಶಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಪಿಎಆರ್‌ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪ್ರಧಾನ ಕಾರ್ಯದರ್ಶಿ, ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಕಾರ್ಯದರ್ಶಿಗಳು ಹಾಗೂ 11 ಐಎಎಸ್‌ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ಪರಿಷ್ಕೃತ ಪಟ್ಟಿಯಂತೆ ಸ್ಥಾನಪಲ್ಲಟಗೊಂಡಿರುವ ರಾಮಪ್ಪ ಹಟ್ಟಿ ಅವರು, ಐದು ತಿಂಗಳುಗಳಿಂದ ಉಪ ವಿಭಾಗಾಧಿಕಾರಿ ಹುದ್ದೆಯಲ್ಲಿದ್ದು, ಮೇ 31ರಂದು ನಿವೃತ್ತಿ ಆಗಲಿದ್ದಾರೆ. ರಾಮಪ್ಪ ಹಟ್ಟಿ ಅವರಂತೆ ಹೊಸ ಇಲಾಖೆಗಳಿಗೆ ಸ್ಥಾನಪಲ್ಲಟದ ಆದೇಶ ಪಡೆದಿರುವ ವಿವಿಧ ಇಲಾಖೆಗಳ ಸುಮಾರು 40 ಅಧಿಕಾರಿಗಳಿಗೆ ಸರ್ಕಾರ ಯಾವುದೇ ಹುದ್ದೆ ತೋರಿಸಿಲ್ಲ. ಸೇವಾ ಜ್ಯೇಷ್ಠತೆಯನ್ನೂ ನೀಡಿಲ್ಲ. ವೇತನವನ್ನೂ ಬಿಡುಗಡೆ ಮಾಡಿಲ್ಲ!

ಅಧಿಕಾರಿಗಳು
ಎಚ್‌. ಬಸವರಾಜೇಂದ್ರ, ಶಿವಾನಂದ ಕಾಪಸಿ, ಕವಿತಾ ಮಣ್ಣಿಕೇರಿ, ಎಚ್‌.ಎನ್‌. ಗೋಪಾಲಕೃಷ್ಣ, ಜಿ.ಸಿ. ವೃಷಭೇಂದ್ರ ಮೂರ್ತಿ, ಕರಿಗೌಡ, ಪಿ. ವಸಂತಕುಮಾರ್‌, ಎನ್‌. ಶಿವಶಂಕರ್‌, ಮೀನಾ ನಾಗರಾಜ, ಆರ್‌.ಎಸ್‌. ಪೆದ್ದಪ್ಪಯ್ಯ, ಅಕ್ರಂ ಪಾಷ.

ಪ್ರತಿಕ್ರಿಯಿಸಿ (+)