ರಕ್ತ ಹೀರುವ ಅಧಿಕಾರಿಗಳು: ಹೈಕೋರ್ಟ್ ಕೆಂಡಾಮಂಡಲ

7
ಪಂಚಾಯಿತಿ ಅಧಿಕಾರಿಗಳಿಗೆ ಮಹಾ ಮಂಗಳಾರತಿ

ರಕ್ತ ಹೀರುವ ಅಧಿಕಾರಿಗಳು: ಹೈಕೋರ್ಟ್ ಕೆಂಡಾಮಂಡಲ

Published:
Updated:

ಬೆಂಗಳೂರು: ‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಮ್ಮ ರಕ್ತ ಹೀರುತ್ತಿದ್ದರು. ಈಗ ಸರ್ಕಾರದ ಹೆಸರಲ್ಲಿ ಅಧಿಕಾರಿಗಳು ಬಡವರ ರಕ್ತ ಹೀರುತ್ತಿದ್ದಾರೆ. . .’

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ–ನರೇಗಾ) ಅಡಿ ಕೆಲಸ ಮಾಡಿದ ಕಾರ್ಮಿಕರಿಗೆ ಮೂರು ವರ್ಷ ಕಳೆದರೂ ಕೂಲಿ ನೀಡಿಲ್ಲ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪಂಚಾಯತ್ ರಾಜ್‌ ಇಲಾಖೆ ಅಧಿಕಾರಿಗಳನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿ ಇದು.

‘ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದ ಪಂಚಾಯ್ತಿ ವ್ಯಾಪ್ತಿಯಲ್ಲಿ  ಕೂಲಿ ಮಾಡಿದ್ದೇವೆ. ಆದರೆ, ನಮಗಿನ್ನೂ ಕೂಲಿ ಕೊಟ್ಟಿಲ್ಲ’ ಎಂದು ಆರೋಪಿಸಿ ಕದರಣ್ಣ ಸೇರಿದಂತೆ 60 ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಇದಕ್ಕೆ ಕೆರಳಿ ಕೆಂಡವಾದ ವೀರಪ್ಪ, ‘ಏನ್ರೀ, ಅರ್ಜಿದಾರರೆಲ್ಲಾ ನಿರಕ್ಷರಿಗಳು. ಅವರಿಗೇನ್ರೀ ಗೊತ್ತಾಗುತ್ತೆ. ಹೆಬ್ಬೆಟ್ಟು ಒತ್ತುವ ಅವರ ಮನವಿಗಳನ್ನು ನೀವು ಇಷ್ಟು ದಿನ ಯಾಕೆ ಪರಿಗಣಿಸಲಿಲ್ಲ. ನಿಮ್ಮಂಥವರಿಂದಾಗಿ ಮಹಾತ್ಮ ಗಾಂಧಿ ಹೆಸರು ಇಟ್ಟಿರುವ ಯೋಜನೆಗೇ ಅವಮಾನವಾಗುತ್ತಿದೆ’ ಎಂದು ಕಿಡಿ ಕಾರಿದರು.

‘ಒಂದು ವೇಳೆ ಹಣ ಬಿಡುಗಡೆ ಮಾಡದೇ ಹೋದರೆ ಅಧಿಕಾರಿಗಳ ಜೇಬಿನಿಂದ ಕಕ್ಕಿಸುವೆ. ಅವರ ಆಸ್ತಿ ಮಾರಾಟ ಮಾಡಿಸಿಯಾದರೂ ನ್ಯಾಯಬದ್ಧವಾಗಿ ದಕ್ಕಬೇಕಾದ ಕೂಲಿ ಹಣ ನೀಡುವಂತೆ ಆದೇಶಿಸುತ್ತೇನೆ. ಅಧಿಕಾರಿಗಳ ಈ ಪ್ರವೃತ್ತಿಯನ್ನು ನಾನು ಕ್ಷಮಿಸುವುದಿಲ್ಲ’ ಎಂದು ಗುಡುಗಿದರು.

‘ಎಲ್ಲ ವಿಷಯಗಳಿಗೂ ಕೋರ್ಟ್‌ಗಳೇ ತಿವಿದು ಅಧಿಕಾರಿಗಳನ್ನು ನಿದ್ರೆಯಿಂದ ಎಬ್ಬಿಸಬೇಕೇ’ ಎಂದು ಚಾಟಿ ಬೀಸಿದ ಅವರು, ‘ಒಬ್ಬ ಕಾರ್ಮಿಕನಿಗೆ ಸಿಗುವ ಕೂಲಿ ₹ 200. ಅದರಲ್ಲಿ ಗುತ್ತಿಗೆದಾರ ಕಾರ್ಮಿಕರಿಗೆ ಕೊಡುವುದೇ ₹ 100. ಇಂತಹುದರಲ್ಲಿ ಈ ಬಡವರು, ನಮ್ಮ ಕೂಲಿ ಹಣ ಕೊಡಿಸಿಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಬೇಕೇ‘ ಎಂದು ವೀರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.

ಕೆಲಸ ಮಾಡಿದ್ದರೆ ಕೂಲಿ ಕೊಡುತ್ತಿದ್ದೆವು: ಪೊನ್ನಣ್ಣ

‘ಅರ್ಜಿದಾರರು ಕೆಲಸ ಮಾಡಿದ್ದಾರೆ ಎಂಬುದಕ್ಕೆ ಹಾಜರಿ ಪುಸ್ತಕದಲ್ಲಿ ಸಹಿಯೇ ಇಲ್ಲ. ಕೆಲಸ ಮಾಡಿದ್ದರೆ ಅವರ ಕೂಲಿ ಕೊಡುವುದು ನಮ್ಮ ಆದ್ಯ ಕರ್ತವ್ಯ’ ಎಂದು ನ್ಯಾಯಪೀಠಕ್ಕೆ ಎ.ಎಸ್‌.ಪೊನ್ನಣ್ಣ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.

‘ಕಾಮಗಾರಿ ನಡೆದಿರುವುದು 2013–14ರಲ್ಲಿ. ಆದರೆ, ಕೋರ್ಟ್‌ಗೆ ಬಂದಿರುವುದು 2016ರಲ್ಲಿ. ಕೆಲಸ ಮಾಡಿದ್ದರೆ ಅವರನ್ನು ಇಷ್ಟು ದಿನ ಕಾಯಿಸುತ್ತಿರಲಿಲ್ಲ. ಅರ್ಜಿದಾರರು ಹೇಳುವಂತೆ ಇಲ್ಲಿ ಆ ರೀತಿಯ ಕೆಲಸವೇ ನಡೆದಿಲ್ಲ’ ಎಂದರು.

ಆದರೆ, ಇದನ್ನು ಒಪ್ಪದ ನ್ಯಾಯಮೂರ್ತಿಗಳು, ‘ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷ್ಯಗಳಿದ್ದರೆ ಹಾಜರುಪಡಿಸಿ’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

* ಜನರು ದಂಗೆ ಎದ್ದು ಸರ್ಕಾರದ ವಿರುದ್ಧ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪರಿಸ್ಥಿತಿ ಬಂದಿದೆ.
–ಬಿ.ವೀರಪ್ಪ, ನ್ಯಾಯಮೂರ್ತಿ

Tags: 

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !