ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್

Last Updated 27 ಮಾರ್ಚ್ 2020, 15:13 IST
ಅಕ್ಷರ ಗಾತ್ರ

ಬೆಂಗಳೂರು: 'ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಆದೇಶವನ್ನು ಸರ್ಕಾರ ‌ಹಿಂಪಡೆಯುವರೆಗೂ ಬ್ಯಾಂಕುಗಳು ಸಾಲ‌ಗಾರರರಿಂದ‌ ಸಾಲ ವಸೂಲಿಹಾಗೂ ಅವರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲ'ಎಂದು ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ.

ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನವರು ತಮ್ಮ ಆಸ್ತಿ ಹರಾಜು ಹಾಕಲು ಮುಂದಾದ ಕ್ರಮ ಪ್ರಶ್ನಿಸಿ ಮುದ್ದಯ್ಯ ಅಮರಯ್ಯ ಹಿರೇಮಠ ಮತ್ತಿತರರು ಸಲ್ಲಿಸಿದ್ದ ಐದು ಪ್ರತ್ಯೇಕ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಬಹುದಾಗಿದೆಎಂದೂ ನ್ಯಾಯಪೀಠ ನಿರ್ದೇಶಿಸಿದೆ.

ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಈ ಸಂದರ್ಭದಲ್ಲಿ ಬ್ಯಾಂಕಿನವರು ನಮ್ಮ ಆಸ್ತಿ ಹರಾಜು ಮಾಡಲು ಮುಂದಾಗಿರುವುದು ಸಮಂಜಸವಲ್ಲ. ಹೀಗಾಗಿ ಹರಾಜು ಪ್ರಕ್ರಿಯೆಗೆ ತಡೆ ನೀಡಬೇಕುಎಂದು ಅರ್ಜಿದಾರರು ಕೋರಿದ್ದರು.

ಇದನ್ನು ಮಾನ್ಯ ಮಾಡಿರುವ ನ್ಯಾಯಪೀಠ, 'ಸರ್ಕಾರ ಕೆಲವೊಂದು ಅಗತ್ಯ ಸೇವೆ ಕಲ್ಪಿಸಲು ಅನುಮತಿ ನೀಡಿದೆ.‌ ಆದರೆ, ಸಾಲ ವಸೂಲಾತಿ ಮತ್ತು ಸಾಲಗಾರರ ಆಸ್ತಿ ಹರಾಜು ಹಾಕುವುದಕ್ಕೆ ಅನುಮತಿ ನೀಡಿಲ್ಲ. ‌ಇದರಿಂದಾಗಿ ಸಾಲ ವಸೂಲಾತಿ ಮತ್ತು‌ ಸಾಲಗಾರರ ಆಸ್ತಿ ಹರಾಜು ಪ್ರಕ್ರಿಯೆ‌ ನಡೆಸುವುದು ಆದೇಶದ ಉಲ್ಲಂಘನೆ'ಎಂದು ಅಭಿಪ್ರಾಯಪಟ್ಟಿದೆ.

ಲಾಕ್‌ಡೌನ್ ಆದೇಶ ಹಿಂಪಡೆಯುವವರೆಗೆ ಸಾಲ ವಸೂಲಾತಿ ಹಿನ್ನೆಲೆಯಲ್ಲಿ ಸಾಲಗಾರರ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತಿಲ್ಲಎಂದು ನಿರ್ದೇಶಿಸಿದೆ.

ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ,‌ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದೆ.

ನ್ಯಾಯಮೂರ್ತಿ ಎಸ್.ಎನ್‌. ಸತ್ಯನಾರಾಯಣ ವರ್ಗ
ಬೆಂಗಳೂರು:
ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರನ್ನು ಪಂಜಾಬ್ ಹರಿಯಾಣ ಹೈಕೋರ್ಟ್ ಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಈ ಕುರಿತಂತೆ ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.

**

ಮಾಧ್ಯಮ ಪ್ರತಿನಿಧಿಗಳ ನಿರ್ಬಂಧ ಕೋರಿ ಮನವಿ
ಬೆಂಗಳೂರು: ‘
ಮಾಧ್ಯಮ ಪ್ರತಿನಿಧಿಗಳು ವರದಿಗಾರಿಕೆ ದೃಷ್ಟಿಯಿಂದ ಕೊರೊನಾ ಸೋಂಕು ಶಂಕಿತರು, ಸೋಂಕಿತರು ಮತ್ತವರ ಕುಟುಂಬದ ಸದಸ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಿ ಸುಳಿಯದಂತೆ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು’ಎಂದು ಕೋರಿ ವಕೀಲ ಎಚ್. ಸುನೀಲ್ ಕುಮಾರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಬರೆದಿದ್ದಾರೆ.

ಪ್ರಸ್ತುತ ವಿದ್ಯಮಾನಗಳ ಬಗ್ಗೆ ಆರೋಗ್ಯ, ಗೃಹ ಇಲಾಖೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಆಸ್ಪತ್ರೆಗಳು ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳು ನಿಯಮಿತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸುತ್ತಿವೆ. ಡಿಜಿಟಲ್ ವೇದಿಕೆಗಳ ಮೂಲಕ ಇವುಗಳನ್ನೇ ಸುದ್ದಿಗಾಗಿ ಬಳಸಿಕೊಳ್ಳಬೇಕು. ಸುದ್ದಿಗಾಗಿ ಪ್ರತಿನಿಧಿಗಳು ಮನೆಯಿಂದ ಹೊರ ಹೋಗುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕುಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಈಗಾಗಲೇ ಪತ್ರಕರ್ತರು ಸುದ್ದಿಗಾಗಿ ದಿನನಿತ್ಯ ಸಾರ್ವಜನಿಕ ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದು ಮಾಧ್ಯಮದವರು ಹಾಗೂ ಕುಟುಂಬದವರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿಆತಂಕ ವ್ಯಕ್ತಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT