ಕಾಣದ ಕೈಗಳ ಕೆಲಸ–ಆಕ್ಷೇಪ

ಬುಧವಾರ, ಏಪ್ರಿಲ್ 24, 2019
27 °C
ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಕಾಣದ ಕೈಗಳ ಕೆಲಸ–ಆಕ್ಷೇಪ

Published:
Updated:
Prajavani

ಬೆಂಗಳೂರು: ‘ರಾಜ್ಯ ಸರ್ಕಾರವು, ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ತಂದಿರುವ ತಿದ್ದುಪಡಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ವಕೀಲೆ ಸುಮನಾ ಹೆಗಡೆ ಹೈಕೋರ್ಟ್‌ಗೆ ದೂರಿದರು.

‘ವಾಸ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದಲ್ಲಿ ಅಂತಹ ಕಡೆ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆಯಲು ಖಾಸಗಿ ಅನುದಾನರಹಿತ ಶಾಲೆಗಳನ್ನು ಗುರುತಿಸತಕ್ಕದ್ದಲ್ಲ’ ಎಂಬ ಅಧಿಸೂಚನೆ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಹಾಗೂ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಸುಮನಾ ಹೆಗಡೆ, ‘ಸರ್ಕಾರಕ್ಕೆ ಆರ್‌ಟಿಇ ಕಾಯ್ದೆಯನ್ನು ಕಟಿಬದ್ಧವಾಗಿ ಜಾರಿಗೆ ತರುವ ಮನಸ್ಸಿಲ್ಲ. ಇಚ್ಛಾಶಕ್ತಿಯೂ ಇಲ್ಲ. ಇದರಿಂದಾಗಿ ಬಡ, ಶೋಷಿತ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರು ತಮ್ಮ ಮಕ್ಕಳಿಗೆ ಮಂಗಳಸೂತ್ರ ಮಾರಿಯಾದರೂ ಸರಿಯೇ ಖಾಸಗಿ ಶಾಲೆಗಳಲ್ಲೇ ಶಿಕ್ಷಣ ಕೊಡಿಸುತ್ತೇವೆ ಎಂಬ ನಿರ್ಧಾರಕ್ಕೆ ಬರುವಂತಾಗಿರುವುದು ವಿಷಾದನೀಯ’ ಎಂದು ತಿಳಿಸಿದರು.

‘ಸರ್ಕಾರದ ಈ ನಡೆಯಿಂದ ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುವಂತಹ ಪರಿಸ್ಥಿತಿ ಬರಲಿದೆ. ಹೀಗಾದರೆ ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂಬ ಸುಪ್ರಿಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ. ಕಾನೂನು ಎಂಬುದು ಪುಸ್ತಕದ ಬದನೆಕಾಯಿ ಆಗಿದೆ. ಈ ಬಗ್ಗೆ ಕೋರ್ಟ್‌ ಗಂಭೀರವಾಗಿ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರು, ‘ಕೆಲವೆಡೆ ಸರ್ಕಾರಿ ಶಾಲೆಗಳ ಪ್ರವೇಶದಲ್ಲಿ 2012ರಿಂದ ಈಚೆಗೆ ಭಾರಿ ಕುಸಿತ ಕಂಡು ಬರುತ್ತಿದ್ದು ಅದನ್ನು ತಡೆಯಲು ಸರ್ಕಾರ ಈ ಹೆಜ್ಜೆಯಿಟ್ಟಿದೆ. ಸರ್ಕಾರಿ ಶಾಲೆಗಳನ್ನು ಬಲಿಷ್ಠಗೊಳಿಸಬೇಕೆಂಬುದೇ ಸರ್ಕಾರದ ಮುಖ್ಯ ಉದ್ದೇಶ. ಅದಕ್ಕೆಂದೇ ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ’ ಎಂದು ಪ್ರತಿಪಾದಿಸಿದರು.

ವಾದ–ಪ್ರತಿವಾದ ಅಪೂರ್ಣವಾಗಿದ್ದು ವಿಚಾರಣೆಯನ್ನು ಗುರುವಾರಕ್ಕೆ (ಏ.4) ಮುಂದೂಡಲಾಗಿದೆ.

ಪ್ರಕರಣವೇನು?: ‘ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಅಂತಹ ಕಡೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ರಾಜ್ಯ ಸರ್ಕಾರ, ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012’ರ ನಿಯಮ 4ಕ್ಕೆ ತಿದ್ದುಪಡಿ ತಂದಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

‘ತಿದ್ದುಪಡಿ ಕುರಿತಂತೆ 2019ರ ಜನವರಿ 30ರಂದು ಹೊರಡಿಸಿರುವ ಅಧಿಸೂಚನೆ ಕೇಂದ್ರದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಮೂಲ ಕಾಯ್ದೆ-2009’ಕ್ಕೆ ತದ್ವಿರುದ್ಧವಾಗಿದೆ. ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಈ ಅಧಿಸೂಚನೆ ರದ್ದುಗೊಳಿಸಬೇಕು’’ ಎಂಬುದು ಅರ್ಜಿದಾರರ ಮನವಿ.

ನಗರದ ಕುರುಬರಹಳ್ಳಿಯ ‘ಎಜುಕೇಷನ್‌ ರೈಟ್ಸ್‌ ಟ್ರಸ್ಟ್‌’ನ ಟ್ರಸ್ಟಿ ಸಿ.ಸುರೇಶ್‌ ಕುಮಾರ್ ಸೇರಿದಂತೆ ಐವರು ಹಾಗೂ ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ಅವರು ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳು ಇವಾಗಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !