ಅಧಿಕಾರಿಗಳ ಉದ್ಧಟತನಕ್ಕೆ ಹೈಕೋರ್ಟ್‌ ಗರಂ

7
ಸಿ.ಎಂ.ತವರು ಜಿಲ್ಲೆ–ಯಥಾಸ್ಥಿತಿ ಆದೇಶ ಉಲ್ಲಂಘಿಸಿದ ಆರೋಪ

ಅಧಿಕಾರಿಗಳ ಉದ್ಧಟತನಕ್ಕೆ ಹೈಕೋರ್ಟ್‌ ಗರಂ

Published:
Updated:
Deccan Herald

ಬೆಂಗಳೂರು: ಸ್ಥಿರಾಸ್ತಿ ವಿಷಯಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಕೋರ್ಟ್‌ ಆದೇಶ ಉಲ್ಲಂಘಿಸಿದ ಆರೋಪದಡಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತವರು ಜಿಲ್ಲೆ ರಾಮನಗರದ ಐವರು ಅಧಿಕಾರಿಗಳಿಗೆ ಹೈಕೋರ್ಟ್‌ ಬೆವರಿಳಿಸಿದೆ.

‘ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಆದೇಶಿಸಿದ್ದರೂ ಅದನ್ನು ಲೆಕ್ಕಿಸದೆ ಕಾಂಪೌಂಡ್‌  ಕೆಡವಿದ ಆರೋಪ ಎದುರಿಸುತ್ತಿರುವ, ರಾಮನಗರ ಜಿಲ್ಲೆಯ ಚನ್ನಪಟ್ಟಣದ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯುಟೀವ್‌ ಎಂಜಿನಿಯರ್ ಹೇಮಲತಾ, ಸಹಾಯಕ ಎಂಜಿನಿಯರ್‌ಗಳಾದ ರಾಜಣ್ಣ, ಜಯಕುಮಾರ್, ಬಂಗಾರಸ್ವಾಮಿ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಚೈತನ್ಯ ಅವರು, ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಲ್ಲಿ ತಲಾ ₹ 50 ಸಾವಿರ ಠೇವಣಿ ಇರಿಸಬೇಕು’ ಎಂದು ಆದೇಶಿಸಲಾಗಿದೆ.

ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ರಾಜೇಂದ್ರ ಅವರನ್ನೂ ತರಾಟೆಗೆ ತೆಗೆದುಕೊಂಡಿರುವ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನಿಮ್ಮೆಲ್ಲರ ವಿರುದ್ಧ ಯಾಕೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬಾರದು’ ಎಂದು ಪ್ರಶ್ನಿಸಿದೆ.

‘ನೀವೆಲ್ಲರೂ ಇಚ್ಛಾಪೂರ್ವಕವಾಗಿ ಕೋರ್ಟ್‌ ಆದೇಶಕ್ಕೆ ಬೆಲೆ ನೀಡಿಲ್ಲ. ಈ ದುರ್ವರ್ತನೆಗಾಗಿ ನೀವು ಇರಿಸುವ ₹ 50 ಸಾವಿರ ಠೇವಣಿ ಮೊತ್ತವನ್ನು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬಾರದು’ ಎಂದೂ ನ್ಯಾಯಪೀಠ ಕೇಳಿದೆ.

ಪ್ರಕರಣವೇನು?: ಚನ್ನಪಟ್ಟಣದ ಕುವೆಂಪುನಗರದ ಮೊದಲನೇ ಕ್ರಾಸ್‌ನಲ್ಲಿರುವ ಜಿ.ಎಂ.ನಂದಿನಿ ಅವರ ಮನೆಯ ಕಾಂಪೌಂಡ್‌ ಅನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕೆಡವಲು ಅಧಿಕಾರಿಗಳು ಉದ್ದೇಶಿಸಿದ್ದರು. ಈ ಕ್ರಮ ಪ್ರಶ್ನಿಸಿ ನಂದಿನಿ ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕಳೆದ ತಿಂಗಳ 5ರಂದು, ‘ಕಟ್ಟಡ ಕೆಡವಬಾರದು. ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂದು ಆದೇಶಿಸಿದ್ದರು.

‘ಕೋರ್ಟ್‌ ಆದೇಶ ಲೆಕ್ಕಿಸದೆ, ಚನ್ನಪಟ್ಟಣ ನಗರಸಭೆ ಆಯುಕ್ತ ಸಿ.ಪುಟ್ಟಸ್ವಾಮಿ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡವು ರಸ್ತೆ ಅಗಲೀಕರಣದ ನೆಪದಲ್ಲಿ ಏಕಾಏಕಿ ನಮ್ಮ ಮನೆಯ ಕಾಂಪೌಂಡ್‌ ಕೆಡವಿದ್ದರಿಂದ 20 ಅಡಿ ಆಳದ ಗುಂಡಿ ಉಂಟಾಗಿದೆ. ಇದರಿಂದ ನಮಗೆ ಓಡಾಡಲು ಮಾರ್ಗ ಇಲ್ಲದಂತಾಗಿದೆ’ ಎಂಬುದು ಅರ್ಜಿದಾರರ ಅಹವಾಲು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !