ಅಧಿಕಾರಿಗಳ ಮೈಚಳಿ ಬಿಡಿಸಿದ ಹೈಕೋರ್ಟ್‌

7
ಫ್ಲೆಕ್ಸ್, ಬ್ಯಾನರ್‌, ಹೋರ್ಡಿಂಗ್ಸ್‌ ತೆರವು ಕೋರಿದ ಪಿಐಎಲ್‌

ಅಧಿಕಾರಿಗಳ ಮೈಚಳಿ ಬಿಡಿಸಿದ ಹೈಕೋರ್ಟ್‌

Published:
Updated:
Deccan Herald

ಬೆಂಗಳೂರು: ’ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ದಾಕ್ಷಿಣ್ಯ ತೋರುವ ಪ್ರಮೇಯವೇ ಇಲ್ಲ’ ಎಂದು ಹೈಕೋರ್ಟ್ ಮತ್ತೊಮ್ಮೆ ಗುಡುಗಿದೆ.

‘ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ ತೆರವುಗೊಳಿಸಬೇಕು’ ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು, ‘ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ನೀತಿಯ ಅನುಷ್ಠಾನಕ್ಕೆ ಇನ್ನೂ ಯಾಕೆ ಆಖೈರು ತೀರ್ಮಾನ ಕೈಗೊಂಡಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

‘2016 ರಲ್ಲೇ ಈ ನೀತಿ ರೂಪಿಸಿರುವುದಾಗಿ ಹೇಳುತ್ತಿದ್ದೀರಿ. ಆದರೆ, ಇಷ್ಟು ದಿನ ಕಳೆದರೂ ಕಡತ ನಿಶ್ಚಲವಾಗಿ ಬಿದ್ದಿದೆಯಲ್ಲಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ನಿರ್ಲಕ್ಷ್ಯದ ಪರಮಾವಧಿ. ಅಧಿಕಾರಿಗಳು ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ಈ ರೀತಿಯ ನಿರ್ಲಕ್ಷ್ಯಕ್ಕೆ ಅಧೀನ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ಬದಲು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಹೊಣೆ ಮಾಡುತ್ತೇನೆ’ ಎಂದು ಗಂಭೀರ ಎಚ್ಚರಿಕೆ ನೀಡಿದರು.

‘ಜಾಹೀರಾತು ನೀತಿ ಕುರಿತಂತೆ ಸಮಗ್ರ ಮತ್ತು ಸ್ಪಷ್ಟವಾದ ರೂಪುರೇಷೆಯೊಂದಿಗೆ ಕೋರ್ಟ್‌ಗೆ ವರದಿ ಒಪ್ಪಿಸಿ’ ಎಂದು ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರಿಗೆ ನಿರ್ದೇಶಿಸಿದರು.

ಏಳು ಬಂಧನ: ‘ಫ್ಲೆಕ್ಸ್ ತೆರವು ವೇಳೆ ಹಲ್ಲೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆವಿಗೆ ಏಳು ಜನ ಆರೋಪಿಗಳ ಬಂಧಿಸಲಾಗಿದೆ. ಶೀಘ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಹೊಳ್ಳ ಅವರು ನ್ಯಾಯಪೀಠಕ್ಕೆ ವಿವರಿಸಿದರು.

ವಿಚಾರಣೆಯನ್ನು ಇದೇ 10 ಕ್ಕೆ ಮುಂದೂಡಲಾಗಿದೆ.

ನೈಜ ಸೌಂದರ್ಯ ಸವಿಯಿರಿ...

‘ಬೆಂಗಳೂರನ್ನು ಫ್ಲೆಕ್ಸ್‌ಗಳ ಮುಖಾಂತರ ಜಾಹೀರಾತುಗಳಲ್ಲಿ ನೋಡುವ ಅವಶ್ಯಕತೆ ಇಲ್ಲ. ಅದರ ನೈಜ ಆದ ಸೌಂದರ್ಯವನ್ನು ಸ್ವಾಭಾವಿಕವಾಗಿ ಕಾಣಲು ಬಿಡಿ’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ಕಿವಿಮಾತು ಹೇಳಿದೆ.

ಒಂದು ವರ್ಷ ಫ್ಲೆಕ್ಸ್‌ ನಿಷೇಧ

‘ಒಂದು ವರ್ಷ ಕಾಲ ಬಿಬಿಎಂಪಿಎಯ ಎಂಟೂ ವಲಯಗಳಲ್ಲಿ ಯಾವುದೇ ರೀತಿಯ ಫ್ಲೆಕ್ಸ್‌, ಬ್ಯಾನರ್ಸ್‌, ಬಂಟಿಂಗ್ಸ್‌ ಹಾಕುವುದಕ್ಕೆ ನಿರ್ಬಂಧ ಹೇರಿ ಠರಾವು ಪಾಸು ಮಾಡಲಾಗಿದೆ’ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್‌ ಪ್ರಸಾದ್ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

* ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನಾನು ನಿತ್ಯವೂ ವಿಚಾರಣೆ ನಡೆಸಲು ತಯಾರಿದ್ದೇನೆ.  
–ದಿನೇಶ್ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ

 

ಬರಹ ಇಷ್ಟವಾಯಿತೆ?

 • 23

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !