ಶುಕ್ರವಾರ, ಡಿಸೆಂಬರ್ 6, 2019
18 °C

ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮುಜರಾಯಿ ಹಣ ವರ್ಗಾವಣೆ: ಹೈಕೋರ್ಟ್ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಮುಜರಾಯಿ ಇಲಾಖೆಯ ₹ 12.30 ಕೋಟಿ ಬಳಕೆ ಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ಕ್ರಮ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುವಂತಿದೆ' ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಈ ಸಂಬಂಧ ನಗರದ ಹಿರಿಯ ನಾಗರಿಕರಾದ ಹೇಮಾ ನಾಯ್ಡು ಮತ್ತು ವಿ.ಆರ್. ಸಂಪತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಪೀಠವು, ಸರ್ಕಾರದ ಪರ ವಕೀಲ ಎಸ್‌.ಎಚ್‌.ಪ್ರಶಾಂತ್‌ ಅವರಿಗೆ, 'ಸಾರ್ವಜನಿಕರು ಪ್ರಕೃತಿ ವಿಕೋಪ ಪರಿಹಾರ‌ ನಿಧಿಗೆ ಹಣ ಕೊಡಬೇಕೆಂದು ಸಲಹೆ ಮಾಡಿದ್ದೀರೊ ಅಥವಾ ಬಲವಂತಪಡಿಸಿದ್ದೀರೋ’ ಎಂದು ಪ್ರಶ್ನಿಸಿತು.

‘ರಾಜ್ಯದ ವಿವಿಧೆಡೆಯ 81 ಅಧಿಸೂಚಿತ ದೇವಸ್ಥಾನಗಳನ್ನು ಮಾತ್ರವೇ ಆಯ್ದುಕೊಂಡಿರಲು ಕಾರಣವೇನು, ಈ ರೀತಿಯ ಆಯ್ಕೆಗೆ ನೀವು ಆರಿಸಿಕೊಂಡ ಮಾನದಂಡಗಳೇನು, ಎಂಬುದನ್ನು ಸ್ಪಷ್ಟಪಡಿಸಿ. ಈ ರೀತಿ ಹಣ ಬಳಕೆಗೆ ಯಾವ ಕಾನೂನಿಡಿಯಲ್ಲಿ ಅವಕಾಶವಿದೆ ಎಂಬುದನ್ನು ತಿಳಿಸಿ' ಎಂದು ನಿರ್ದೇಶಿಸಿತು.

ಅರ್ಜಿದಾರರ ಮನವಿಯೇನು?: ಇತ್ತೀಚೆಗೆ ಸಂಭವಿಸಿದ ನೆರೆ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಕ್ರೂಢೀಕರಣಕ್ಕೆ ರಾಜ್ಯ ಸರ್ಕಾರ ಆಗಸ್ಟ್ 21ರಂದು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

‘ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ 81 ಅಧಿಸೂಚಿತ ದೇವಾಲಯಗಳು ಇಂತಿಷ್ಟು ಮೊತ್ತದ ಹಣವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕೆಂದು ನಿರ್ದೇಶಿಸಲಾಗಿದೆ. ಇದು ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಕಾಯ್ದೆ - 1997ರ ಉಲ್ಲಂಘನೆ’ ಎಂಬುದು ಅರ್ಜಿದಾರರ ಆರೋಪ.

‘ಮುಜರಾಯಿ ಕಾಯ್ದೆಯ ಅನುಸಾರ ಎಲ್ಲ ಧಾರ್ಮಿಕ ದತ್ತಿ ಸಂಸ್ಥೆಗಳೂ ಸಮಾನ. ಇದರಲ್ಲಿ ತಾರತಮ್ಯ ಎಸಗುವುದು ಸಲ್ಲದು. ಮುಜರಾಯಿ ಇಲಾಖೆಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದು ಕಾನೂನು ಬಾಹಿರ’ ಎಂದು ಆಕ್ಷೇಪಿಸಿದ್ದಾರೆ.

ನೀವೇನು ಕೊಡುಗೆ ಕೊಟ್ಟಿದ್ದೀರಿ?

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲರನ್ನು, ‘ನಿಮ್ಮ ಅರ್ಜಿದಾರರು ಯಾವ ದೇವಾಲಯಕ್ಕೆ ಎಷ್ಟು ಹಣವನ್ನು ಕಾಣಿಕೆ ನೀಡಿದ್ದಾರೆ, ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಏನಾದರೂ ದೇಣಿಗೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಅರ್ಜಿದಾರರ ಪರ ವಕೀಲ ಎಂ.ಆರ್. ವೆಂಕಟೇಶ್, ’ಸಂತ್ರಸ್ತರಿಗೆ ನೀರಿನ ಬಾಟಲಿ ಹಾಗೂ ಬಿಸ್ಕತ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ" ಎಂದರು.

ಪ್ರಕರಣದ ವಕಾಲತ್ತು ವಹಿಸಿರುವ ಎಚ್. ಪವನಚಂದ್ರ ಶೆಟ್ಟಿ ಅವರಿಗೆ, ’ನೀವೇನು ದೇಣಿಗೆ ಕೊಟ್ಟಿದ್ದೀರಿ’ ಎಂದು ಕೇಳಿದರು.

ಈ ಮಾತಿಗೆ ಉತ್ತರಿಸಿದ ಪವನಚಂದ್ರ ಶೆಟ್ಟಿ, ‘ನಾನು ಸಂಘ ಪರಿವಾರದ ಮೂಲಕ ವಿಕೋಪ ಸ್ಥಳಗಳಲ್ಲಿ ದೈಹಿಕ ಶ್ರಮದಾನ ಮಾಡಿದ್ದೇನೆ’ ಎಂದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, ‘ಹೌದೌದು, ಶ್ರಮದಾನವೂ ನೆರವಿನ ಒಂದು ಭಾಗವಲ್ಲವೇ’ ಎಂದು ತಲೆ ಅಲ್ಲಾಡಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು