ಬುಧವಾರ, ನವೆಂಬರ್ 20, 2019
26 °C

ಹೈಕೋರ್ಟ್ ಕಟ್ಟಡ ಸ್ಫೋಟ: ಬೆದರಿಕೆ ಪತ್ರ

Published:
Updated:

ಬೆಂಗಳೂರು: ಹೈಕೋರ್ಟ್ ಕಟ್ಟಡ ಸ್ಫೋಟಿಸುವುದಾಗಿ ದೆಹಲಿಯ ವ್ಯಕ್ತಿಯೊಬ್ಬ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದು ಆತಂಕ ಸೃಷ್ಟಿಸಿದ್ದಾನೆ.

ದೆಹಲಿಯ ಹದರ್ಶನ ಸಿಂಗ್ ನಾಗಪಾಲ್ ಎಂಬಾತ ಕೆಲವು ದಿನಗಳ ಹಿಂದೆ ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾನೆ. ಈ ಸಂಬಂಧ ಸೆ. 18ರಂದು ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು, ಸಬ್‍ ಇನ್‍ಸ್ಪೆಕ್ಟರ್ ನೇತೃತ್ವದ ತಂಡವನ್ನು ದೆಹಲಿಗೆ ಕಳುಹಿಸಿದ್ದಾರೆ.

ತಾನು ಇಂಟರ್‌ ನ್ಯಾಷನಲ್‌ ಖಲಿಸ್ತಾನ ಬೆಂಬಲಿಗ ಗ್ರೂಪ್‌ನ ಸದಸ್ಯನಾಗಿದ್ದು, ಇದೇ ಸೆ. 30ರಂದು ಮಗನೊಂದಿಗೆ ಸೇರಿ ಹೈಕೋರ್ಟ್ ಕಟ್ಟಡದ ಹಲವು ಕಡೆಗಳಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹೈಕೋರ್ಟ್ ಭದ್ರತಾ ವಿಭಾಗದ ಎನ್. ಕುಮಾರ್ ಪ್ರಕರಣ ದಾಖಲಿಸಿದ್ದಾರೆ.

ಪತ್ರದಲ್ಲಿ ಆರೋಪಿ ವಿಳಾಸ ಬರೆದಿದ್ದು, ಪಶ್ಚಿಮ ದೆಹಲಿಯ ಮೋತಿನಗರದಲ್ಲಿ ವಾಸವಾಗಿದ್ದಾನೆ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಶನಿವಾರವೇ ವಿಧಾನಸೌಧ ಠಾಣೆಯ ಸಬ್‍ ಇನ್‍ಸ್ಪೆಕ್ಟರ್ ನೇತೃತ್ವದ ತಂಡ ದೆಹಲಿಗೆ ತೆರಳಿ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಹದರ್ಶನ್ ಸಿಂಗ್ ನಾಗಪಾಲ್ ಎಂಬಾತ ಮನೆಯಲ್ಲಿ ತಿಂಡಿ ತಿನಿಸು ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಅಪರಿಚಿತ ವ್ಯಕ್ತಿ ಪತ್ರ ಬರೆದಿರುವುದು ಗೊತ್ತಾಗಿದೆ. ಅಲ್ಲದೆ, ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಗಪಾಲ್ ವಿರುದ್ಧ ಷಡ್ಯಂತ್ರ ರೂಪಿಸಿರುವ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

‘ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಹೈಕೋರ್ಟ್‌ನ ಎಲ್ಲ ದ್ವಾರಗಳಲ್ಲಿಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದೂ ಹೇಳಿದರು.

*
ನಕಲಿ ಪತ್ರ ಬಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪತ್ರ ಬರೆದಿರುವ ವ್ಯಕ್ತಿಯ ಬಂಧನಕ್ಕೆ ವಿಶೇಷ ತಂಡವನ್ನು ದೆಹಲಿಗೆ ಕಳುಹಿಸಲಾಗಿದೆ, ಚೇತನ್ ಸಿಂಗ್ ರಾಥೋಡ್ ಡಿಸಿಪಿ, 

ಪ್ರತಿಕ್ರಿಯಿಸಿ (+)