ಭಾನುವಾರ, ಡಿಸೆಂಬರ್ 8, 2019
21 °C

ಮಂತ್ರಾಲಯ–ಉತ್ತರಾದಿ ಮಠಗಳ ವಿವಾದ ಮಾತುಕತೆ ಮೂಲಕ ಇತ್ಯರ್ಥಕ್ಕೆ ಹೈಕೋರ್ಟ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಂತ್ರಾಲಯ ಮತ್ತು ಉತ್ತರಾದಿ ಮಠದ ಮಧ್ಯೆ ನಡೆಯುತ್ತಿರುವ ವ್ಯಾಜ್ಯವನ್ನು ಕೋರ್ಟ್‌ ಪರಿಧಿಯಿಂದ ಹೊರಗೆ, ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳಲು ಹೈಕೋರ್ಟ್‌ ಎರಡೂ ಮಠಗಳ ಮಠಾಧಿಪತಿಗಳಿಗೆ ಸಲಹೆ ನೀಡಿದೆ.

‘ವೃಂದಾವನ ಜಮೀನು ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದ ಮೂಲ ಕೇಸಿನ ವ್ಯಾಜ್ಯ ಮುಗಿಯುವ ತನಕ ನಮಗೇ ಮೊದಲ ಆರಾಧನೆಗೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸಲ್ಲಿಸಿರುವ ‘ನಿಯಮಿತ ಎರಡನೇ ಮನವಿ’ಯನ್ನು (ಆರ್‌ಎಸ್‌ಎ) ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ದೀಕ್ಷಿತ್‌ ಅವರು, ‘ಈ ವಿವಾದವನ್ನು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಮತ್ತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳಿಬ್ಬರೂ ಎಲ್ಲಾದರೂ ಒಂದೆಡೆ ಮರದ ಕೆಳಗೆ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಲ್ಲವೇ’ ಎಂದು ಅರ್ಜಿದಾರರ ಪರ ವಕೀಲ ಕೆ.ಸುಮನ್‌ ಮತ್ತು ಪ್ರತಿವಾದಿ ಪರ ಹಾಜರಿದ್ದ ಹಿರಿಯ ವಕೀಲ ಜಯವಿಠ್ಠಲ ರಾವ್‌ ಕೋಲಾರ ಅವರನ್ನು ಪ್ರಶ್ನಿಸಿದರು.

‘ಒಂದು ವೇಳೆ ಸ್ವಾಮೀಜಿಗಳು ಪರಸ್ಪರ ಭೇಟಿಯಾಗಲು ಸಾಧ್ಯವಾಗದೇ ಹೋದರೆ ಉಭಯ ಮಠಗಳ ಆಡಳಿತ ಮುಖ್ಯಸ್ಥರಾದರೂ ಪಾಲ್ಗೊಂಡು ಚರ್ಚಿಸಿ’ ಎಂದು ಮೌಖಿಕ ಸಲಹೆ ನೀಡಿದರು.

ಈ ಸಲಹೆಗೆ ಮಂತ್ರಾಲಯ ಮಠದ ಸ್ವಾಮೀಜಿ ಪರ ವಕೀಲರು ಸಮ್ಮತಿ ವ್ಯಕ್ತಪಡಿಸಿದರು. ಆದರೆ, ಉತ್ತರಾದಿ ಮಠದ ಪರ ವಕೀಲರು, ‘ನಮ್ಮ ಸ್ವಾಮೀಜಿ ಏಕಾದಶಿ ಉಪವಾಸ ವ್ರತದಲ್ಲಿರುವ ಕಾರಣ ಇವತ್ತೇ ಭೇಟಿ ಮಾಡಲು ಕಷ್ಟಸಾಧ್ಯ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದಾಗಿ ವಿಚಾರಣೆಯನ್ನು ಮಂಗಳವಾರಕ್ಕೆ (ಡಿ.4) ಮುಂದೂಡಲಾಗಿದೆ.

ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ಪದ್ಮನಾಭ ತೀರ್ಥರ 694ನೇ ಆರಾಧನಾ ಮಹೋತ್ಸವ ಇದೇ 5ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಮೊದಲನೇ ಶಿಷ್ಯರು.

‘ನಾನು ಎರಡೂ ಮಠಗಳ ಭಕ್ತ’

‘ನಾನು ಎರಡೂ ಮಠಗಳ ಭಕ್ತ. ಬಹಳ ಹಿಂದೆ ಎರಡೂ ಮಠದ ಸ್ವಾಮೀಜಿಗಳು ನಮ್ಮ ಮನೆಗೆ ಸೌಹಾರ್ದಯುತ ಭೇಟಿ ನೀಡಿ ಹೋಗಿದ್ದಾರೆ. ಹಾಗಾಗಿ, ನಾನು ಈ ಪ್ರಕರಣದ ವಿಚಾರಣೆ ನಡೆಸುವುದು ಎಷ್ಟು ಸೂಕ್ತ’ ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿ ದೀಕ್ಷಿತ್‌ ಅವರು, ಅರ್ಜಿದಾರರು ಮತ್ತು ಪ್ರತಿವಾದಿ ಪರ ವಕೀಲರ ಮುಂದಿಟ್ಟರು.

ಇದಕ್ಕೆ ಎರಡೂ ಮಠಗಳ ಪರ ವಕೀಲರು ಒಮ್ಮತದಿಂದ, ‘ತಾವು ಈ ಅರ್ಜಿ ವಿಚಾರಣೆ ನಡೆಸುವುದರಲ್ಲಿ ನಮಗೆ ಯಾವುದೇ ಅಭ್ಯಂತರವಿಲ್ಲ. ತಮ್ಮ ಮೇಲೆ ನಮಗೆ ಅತೀವ ವಿಶ್ವಾಸವಿದೆ. ಆದ್ದರಿಂದ ಇದನ್ನು ತಾವೇ ಇತ್ಯರ್ಥಪಡಿಸಬೇಕು’ ಎಂದು ಲಿಖಿತ ಒಪ್ಪಿಗೆ ನೀಡಿ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು