ಅಪಾರ ನಿರೀಕ್ಷೆ: ಕುಮಾರಗೆ ಪರೀಕ್ಷೆ

7

ಅಪಾರ ನಿರೀಕ್ಷೆ: ಕುಮಾರಗೆ ಪರೀಕ್ಷೆ

Published:
Updated:
ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ದೋಸ್ತಿ ಸರ್ಕಾರದ ‘ಸಮನ್ವಯ’ ಗೊಂದಲಗಳ ಮಧ್ಯೆಯೇ ವಿಧಾನಮಂಡಲ ಅಧಿವೇಶನ ಸೋಮವಾರ ಆರಂಭವಾಗಲಿದೆ.

ಮಧ್ಯಾಹ್ನ 12.30ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೇ 5ರಂದು ಬಜೆಟ್‌ ಮಂಡಿಸಲಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕುಮಾರಸ್ವಾಮಿ ಅವರಿಗೆ ಇದು ಎರಡನೇ ಅಧಿವೇಶನ. ಸದನದಲ್ಲಿ ಅವರು ವಿಶ್ವಾಸಮತ ಯಾಚಿಸಲು ಮೇ 25ರಂದು ಮೊದಲ ಅಧಿವೇಶನ ಸಮಾವೇಶಗೊಂಡಿತ್ತು.

ಉಭಯ ಸದನಗಳಲ್ಲಿ ಅಣ್ಣ-ತಮ್ಮಂದಿರೂ ಇದ್ದಾರೆ. ವಿಧಾನಸಭೆಯಲ್ಲಿ ಸೋದರರು ಹಾಗೂ ಅಪ್ಪ–ಮಕ್ಕಳೂ ಇದ್ದಾರೆ. ಸಂಪುಟದಲ್ಲಿರುವ 25 ಸಚಿವರಲ್ಲಿ ಅರ್ಧಕ್ಕೂ ಹೆಚ್ಚು ಸಚಿವರು ಹೊಸಬರು.

ಮೈತ್ರಿ ಸರ್ಕಾರದ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಮುಂದಿಡುವ, ‘ಜನರಿಂದ, ಜನರಿಗಾಗಿ ಜನರಿಗೋಸ್ಕರ ಸರ್ಕಾರ’ ಎಂಬ ಚುನಾವಣಾ ಪ್ರಣಾಳಿಕೆಯಲ್ಲಿರುವ ತಮ್ಮ ಭರವಸೆಗೆ ಅಧಿವೇಶನದಲ್ಲೇ ಇಂಬು ನೀಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ.

ಜಗದೀಶ ಶೆಟ್ಟರ್‌, ಗೋವಿಂದ ಕಾರಜೋಳ, ಕೆ.ಎಸ್‌. ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಕೆ.ಜಿ. ಬೋಪಯ್ಯ.. ಹೀಗೆ ಅನುಭವಿ ಸಂಸದೀಯಪಟುಗಳನ್ನು ಸದನದಲ್ಲಿ ಬೆನ್ನಿಗೆ ಕಟ್ಟಿಕೊಂಡಿರುವ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಲು ಸಜ್ಜಾಗಿದ್ದಾರೆ.

ಸಂಪುಟ ರಚನೆಯಾದ ಬೆನ್ನಲ್ಲೆ ಬಜೆಟ್‌ ಮಂಡಿಸುವುದಾಗಿ ಕುಮಾರಸ್ವಾಮಿ ಘೋಷಿಸಿದ್ದರು. ಉಜಿರೆ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದರಾಮಯ್ಯ, ‘ಹೊಸತಾಗಿ ಬಜೆಟ್‌ ಮಂಡಿಸುವ ಅಗತ್ಯವೇನಿದೆ. ಬೇಕಿದ್ದರೆ ಪೂರಕ ಬಜೆಟ್‌ ಮಂಡಿಸಲಿ’ ಎಂದು ಆ‍ಪ್ತರ ಬಳಿ ಹೇಳಿಕೊಂಡಿದ್ದ ಮಾತುಗಳು ಇತ್ತ ಸಮ್ಮಿಶ್ರ ಸರ್ಕಾರಲ್ಲಿ ಅಶಾಂತಿಗೆ ಕಾರಣವಾಗಿತ್ತು.

ಸಮ್ಮಿಶ್ರ ಸರ್ಕಾರದ ಆಯುಸ್ಸಿನ ಬಗ್ಗೆಯೇ ಅವರು ಸಂಶಯ ವ್ಯಕ್ತಪಡಿಸಿದ್ದು ಸಂಚಲನ ಉಂಟು ಮಾಡಿತ್ತು. ಅಲ್ಲದೆ, ಉಭಯ ಪಕ್ಷಗಳ ಆಂತರಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಜೊತೆಗೆ, ಸಚಿವಾಕಾಂಕ್ಷಿಗಳ ಒತ್ತಡ ಎರಡೂ ಪಕ್ಷಗಳ ಒಳಗೆ ಭಿನ್ನಮತ ಹೆಪ್ಪುಗಟ್ಟುವಂತೆ ಮಾಡಿದೆ. ಈ ಎಲ್ಲ ವಿಷಯಗಳು ಅಧಿವೇಶನದಲ್ಲಿ ಪ್ರತಿಧ್ವನಿಸುವುದು ಖಚಿತ.

ಬಜೆಟ್‌ ಮಂಡನೆ ಸವಾಲನ್ನು ಕುಮಾರಸ್ವಾಮಿ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ. ಬಜೆಟ್‌ ಮಂಡನೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿರುವುದು ಬಿಜೆಪಿ ಕೈಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ರೈತರ ಸಾಲಮನ್ನಾ ಮಾಡದಿದ್ದರೆ ಸದನದ ಒಳಗೆ ಮತ್ತು ಹೊರಗೆ ಸಮರ ಸಾರುವ ಎಚ್ಚರಿಕೆಯನ್ನು ಈಗಾಗಲೇ ನೀಡಿರುವ ಕಮಲ ಪಕ್ಷ, ಅಧಿವೇಶನದುದ್ದಕ್ಕೂ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ.

ಸಾಲ ಮನ್ನಾ ಘೋಷಿಸಲು ಕುಮಾರಸ್ವಾಮಿ ಸಿದ್ಧವಾಗಿಯೇ ನಿಂತಿದ್ದಾರೆ. ಅದಕ್ಕೆ ಕಾಂಗ್ರೆಸ್‌ ಕೂಡಾ ಸಹಮತ ವ್ಯಕ್ತಪಡಿಸಿದೆ. ಆದರೆ, ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಜೊತೆಗೆ ಸಿದ್ದರಾಮಯ್ಯ ಬಜೆಟ್‌ನಲ್ಲಿ (ಲೇಖಾನುದಾನ) ಘೋಷಿಸಿದ್ದ ಹಲವು ಯೋಜನೆಗಳನ್ನು ಕೈಬಿಡುವ ಸ್ಥಿತಿಯಲ್ಲೂ ಕುಮಾರಸ್ವಾಮಿ ಸರ್ಕಾರ ಇಲ್ಲ.

ವಿರೋಧ ಪಕ್ಷದ ಅಸ್ತ್ರಗಳಿಗೆ ‘ಪ್ರತ್ಯಸ್ತ್ರ’ ಪ್ರಯೋಗಿಸುವ ಜೊತೆಗೆ ಮಿತ್ರಪಕ್ಷವನ್ನು ಸಂಭಾಳಿಸಿಕೊಂಡು ಸದನ ನಿರ್ವಹಿಸುವುದು ಮುಖ್ಯಮಂತ್ರಿಯ ಅನಿವಾರ್ಯತೆಯೂ ಹೌದು. ಎಂ.ಬಿ. ಪಾಟೀಲ, ಎಚ್‌.ಕೆ. ಪಾಟೀಲ, ರಾಮಲಿಂಗಾರೆಡ್ಡಿ... ಹೀಗೆ ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗದ ಹಿರೀಕರ ಅತೃಪ್ತಿ, ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ನಿಗಮ–ಮಂಡಳಿಗಳಿಗೆ ನೇಮಕ ವಿಳಂಬ ಅಸಹಕಾರಕ್ಕೆ ಕಾರಣ ಆಗಬಹುದೇ ಎಂಬ ಅಳುಕು ಇದೆ.

ಎರಡು ದಶಕಗಳ ಬಳಿಕ ಮತ್ತೆ ಸಭಾಧ್ಯಕ್ಷ ಪೀಠದಲ್ಲಿ ಕೆ.ಆರ್‌. ರಮೇಶ್‌ಕುಮಾರ್‌ ಆಸೀನರಾಗಿದ್ದಾರೆ. ಗಂಭೀರ ಚರ್ಚೆಯ ಮಧ್ಯೆಯೂ ರಸವತ್ತಾದ ಗಳಿಗೆಗಳನ್ನು ನೆನಪಿಸಿ ಸಂದರ್ಭವನ್ನು ತಿಳಿಯಾಗಿಸುವ, ಮಧ್ಯೆ ಮಧ್ಯೆ ಹಾಸ್ಯದ ಹೊನಲು ಉಕ್ಕಿಸುವ ಛಾತಿ ಹೊಂದಿರುವ ಅವರ ಅನುಭವ, ಇಡೀ ಸದನವನ್ನು ಸುಲಲಿತವಾಗಿ ಮುನ್ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !