ಗುರುವಾರ , ಜೂಲೈ 9, 2020
28 °C
ವಿಜಯಪುರದ ಜಿಲ್ಲೆಯ ಆಲಮೇಲದಲ್ಲಿ 45.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲು

ಬಿಸಿಗಾಳಿಗೆ ಹೈರಾಣಾದ ಉತ್ತರ ಕರ್ನಾಟಕ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೊರೊನಾ ಭೀತಿಯಿಂದ ತತ್ತರಿಸಿ ಎರಡು ತಿಂಗಳಿಂದ ಮನೆಗಳಲ್ಲೇ ಬಂಧಿಯಾಗಿರುವ ಉತ್ತರ ಕರ್ನಾಟಕ ಭಾಗದ ಜನತೆಗೆ ಮೂರು ದಿನಗಳಿಂದ ಏರುತ್ತಿರುವ ತಾಪಮಾನ ಮತ್ತು ಬೀಸುತ್ತಿರುವ ಬಿಸಿಗಾಳಿ ಹೈರಾಣಾಗಿಸಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರದಿಂದ ಸತತ ಮೂರು ದಿನಗಳ ಕಾಲ 40ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾದ್ದು, ಪ್ರಸಕ್ತ ಬೇಸಿಗೆಯ ಗರಿಷ್ಠ ತಾಪಮಾನವಾಗಿದೆ.

ಲಾಕ್‌ಡೌನ್‌ನಿಂದ ವಿನಾಯ್ತಿ ಸಿಕ್ಕಿದ್ದರೂ ಸಹ ಬಿಸಿಲಿನ ಅಬ್ಬರಕ್ಕೆ ಅಂಜಿದ ಜನರು ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹೊರಬರಲು ಅಂಜುತ್ತಿದ್ದಾರೆ. ಹೀಗಾಗಿ ವ್ಯಾಪಾರ, ವಹಿವಾಟು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ನಗರ, ಹಳ್ಳಿಗಳು ಬಣಗುಡುತ್ತಿವೆ. ಬಿಸಿಗಾಳಿಗೆ ಜನರು ಮುಖವೊಡ್ಡಿ ಸಂಚರಿಸಲು ಸಾಧ್ಯವಾಗದೇ ಇರುವುದರಿಂದ ರಸ್ತೆಗಳು ಬಿಕೋ ಎನ್ನುತ್ತಿವೆ.

ಕಷ್ಟವಾಗುತ್ತಿದೆ: ‘ಅತಿಯಾದ ಉಷ್ಣಾಂಶದಿಂದಾಗಿ ಮಕ್ಕಳು, ವೃದ್ಧರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಮನೆಯಲ್ಲಿ ಎಸಿ, ಕೂಲರ್‌ ಬಳಸಿದರು ಬೆಂಕಿಯ ಮುಂದೆ ನಿಂತತೆ ಆಗುತ್ತಿದೆ. ಮನೆಬಿಟ್ಟು ಹೊರಗೆ ಹೋಗಲು ಆಗದೆ, ಒಳಗಿರಲು ಆಗದೆ ಕಷ್ಟ ಅನುಭವಿಸುವಂತಾಗಿದೆ’ ಎಂದು ಆಲಮೇಲದ ನಿವಾಸಿ ಸಂತೋಷ ಅಮರಗೊಂಡ ಹೇಳಿದರು.

ರಾತ್ರಿ ನಿದ್ರೆಯೂ ಬರುತ್ತಿಲ್ಲ: ‘ಒಂದೆಡೆ ಕೊರೊನಾ ಲಾಕ್‌ಡೌನ್‌, ಇನ್ನೊಂದೆಡೆ ಬಿಸಿಲಿ ಅಬ್ಬರದಿಂದ ಮನೆಯೊಳಗೆ ಕೂರಲು ಆಗದಂತಾಗಿದೆ. ಮುಂಜಾನೆಯಿಂದಲೇ ಬಿಸಿಲಿನ ಶಾಖ ಅಧಿಕ ಇರುವುದರಿಂದ ಮೈಯಲ್ಲಿ ಬೆವರಿಳಿಯುತ್ತಿದೆ. ಮನೆ ಛಾವಣಿ, ಗೋಡೆಗಳು ಕಾದು ಕಬ್ಬಿಣದಂತಾಗಿರುವುದರಿಂದ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯಪುರದ ನಿವಾಸಿ ಹಾಜಿಲಾಲ್‌ ಸಾಂಗ್ಲೀಕರ ಹೇಳಿದರು.

ಜನರಿಗೆ ಸೂಚನೆ: ಮುಂದಿನ ನಾಲ್ಕು ದಿನಗಳ ಕಾಲ ಉಷ್ಣಾಂಶದಲ್ಲಿ ಭಾರೀ ಏರಿಕೆಯೊಂದಿಗೆ ಬಿಸಿಗಾಳಿ ಬೀಸಲಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿರುವುದರಿಂದ ಜನರು ಬೆಳಿಗ್ಗೆ 11ರಿಂದ ಮಧ್ಯಾಹ್ನ 4ರ ವರೆಗೆ ಮನೆಗಳಿಂದ ಹೊರಬರಬಾರದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚನೆ ನೀಡಿದೆ.

ಆಲಮೇಲ ಗರಿಷ್ಠ ಉಷ್ಣಾಂಶ ದಾಖಲು: ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ 45.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಮತ್ತು ಮದನ ಹಿಪ್ಪರಗಿಯಲ್ಲಿ 45.2, ವಿಜಯಪುರ ನಗರ 44.60, ಬಾಗಲಕೋಟೆ 41.40, ರಾಯಚೂರು 43.80, ಬೀದರ್‌ 44, ಗದಗ 40, ಧಾರವಾಡ 39.50 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಉಳಿದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ 1.6 ರಿಂದ 3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿಯಲ್ಲಿ ತಿಳಿಸಿದೆ.

ಮಕ್ಕಳು, ವೃದ್ಧರು ಬಿಸಿಲಲ್ಲಿ ಹೊರ ಬಾರದೇ ಮನೆಯಲ್ಲೇ ಇರಬೇಕು. ಶುದ್ಧ ನೀರು, ಎಳನೀರು, ಶರಬತ್‌, ಜ್ಯೂಸ್‌ ಹೆಚ್ಚು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಾಪಸೆ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.