ದಾವಣಗೆರೆ: ಹೈಟೆಕ್‌ ಗೋ ಸಂತೆಗೆ ‘ರಕ್ಷಕರ’ ಭಯ

7
ರಾಜ್ಯದಲ್ಲೇ ಮಾದರಿ ಮಾರುಕಟ್ಟೆ ಈಗ ಕಳಾಹೀನ

ದಾವಣಗೆರೆ: ಹೈಟೆಕ್‌ ಗೋ ಸಂತೆಗೆ ‘ರಕ್ಷಕರ’ ಭಯ

Published:
Updated:
Deccan Herald

ದಾವಣಗೆರೆ: ಗೋರಕ್ಷಕರ ಭೀತಿ ಇಲ್ಲಿನ ಹೈಟೆಕ್‌ ದನದ ಸಂತೆಗೂ ತಟ್ಟಿದೆ. ರಾಜ್ಯದಲ್ಲೇ ಮಾದರಿ ಮಾರುಕಟ್ಟೆ ಕಳಾಹೀನವಾಗಿದೆ.

ಎಸ್‌.ಎಸ್‌. ಮಲ್ಲಿಕಾರ್ಜುನ ಎಪಿಎಂಸಿ ಸಚಿವರಾಗಿದ್ದಾಗ ದೇಶದಲ್ಲೇ ದೊಡ್ಡ ಮತ್ತು ಹೈಟೆಕ್ ಜಾನುವಾರು ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. 200 ಅಡಿ ಅಗಲ ಮತ್ತು 400 ಅಡಿ ಉದ್ದ ವಿಸ್ತೀರ್ಣದಲ್ಲಿ ನಿರ್ಮಾಣವಾದ ಎಪಿಎಂಸಿ ಮಾರುಕಟ್ಟೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಆರಂಭದಲ್ಲಿ ರೈತರು, ದನದ ವ್ಯಾಪಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ದನಗಳು ಮಾರಕಟ್ಟೆಗೆ ಬರುವ ಪ್ರಮಾಣ ದಿನೇದಿನೇ ಇಳಿಮುಖವಾಗುತ್ತಿದೆ.

ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಇರುವ ನಡುನಾಡಿನಲ್ಲಿ ದನದ ಸಂತೆಗೆ ಬೇಕಾದ ಪೂರಕ ವಾತಾವರಣವಿದೆ. ರೈತರು ಉಳಿಯಲು ವ್ಯವಸ್ಥೆ, ಜಾನುವಾರಿಗೆ ನೀರು, ನೆರಳು, ಮೇವು, ಪಶುವೈದ್ಯಕೀಯ ಸೇವೆ... ಹೀಗೆ ಅಗತ್ಯ ಸೌಲಭ್ಯಗಳನ್ನೆಲ್ಲಾ ಹೈಟೆಕ್‌ ದನದ ಸಂತೆ ಒಳಗೊಂಡಿದೆ. ಆದರೂ ರೈತರು, ವ್ಯಾಪಾರಿಗಳು ದನದ ಸಂತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಇದಕ್ಕೆ ಕಾರಣ ಹುಡುಕಿದಾಗ ರೈತರು ಆತಂಕಕಾರಿ ಸಂಗತಿಯನ್ನು ಬಿಚ್ಚಿಟ್ಟರು.

‘ದನದ ಮಾರುಕಟ್ಟೆಗೆ ಬರುವಾಗ ಗ್ರಾಮ ಪಂಚಾಯಿತಿ ಇಲ್ಲವೇ ಸ್ಥಳೀಯ ಸಂಸ್ಥೆಯಿಂದ ಪ್ರಮಾಣಪತ್ರ ತರಬೇಕು. ದನದ ಮಾರುಕಟ್ಟೆಯಿಂದ ರಾಸು ಖರೀದಿಸಿ ಒಯ್ಯುವಾಗಲೂ ಎಪಿಎಂಸಿಯಿಂದ ಅನುಮತಿ ಪತ್ರ ಪಡೆಯಬೇಕು. ಈ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಗೋ ರಕ್ಷಕರ ಹೆಸರಿನಲ್ಲಿ ದಾಳಿ ನಡೆಸಿ, ಪೊಲೀಸರಿಗೆ ದೂರು ನೀಡಿ ಕಿರಿಕಿರಿ ಉಂಟು ಮಾಡುವುದು ಹೆಚ್ಚಾಗಿದೆ. ರೈತರು ದಲ್ಲಾಳಿಗಳಿಗೇ ಮನೆ ಬಾಗಿಲಲ್ಲೇ ದನಗಳನ್ನು ಮಾರುತ್ತಿದ್ದಾರೆ’ ಎನ್ನುತ್ತಾರೆ ರೈತ ಕಾಂತರಾಜ್.

‘ದಾವಣಗೆರೆಯ ಮಾರುಕಟ್ಟೆಗೆ ತಮಿಳುನಾಡಿನಿಂದಲೂ ಲಾರಿಗಳಲ್ಲಿ ಹಸುಗಳನ್ನು ತಂದು ಮಾರಾಟ ಮಾಡಿದ್ದೂ ಇದೆ. ಬೆಳಗಾವಿ, ಮಹಾರಾಷ್ಟ್ರದ ಗಡಿ ಜಿಲ್ಲೆಗಳ ರೈತರು ಇಲ್ಲಿಗೆ ಬಂದು ಗುಣಮಟ್ಟದ ಹೋರಿಗಳು, ಹೈಬ್ರೀಡ್‌ ಹಸುಗಳನ್ನು ಕೊಂಡು ಹೋಗಿದ್ದಾರೆ. ಆದರೆ, ಗೋ ರಕ್ಷಕರ ಸಮಸ್ಯೆ ಹೆಚ್ಚಾದ ನಂತರ ಆ ಭಾಗದ ರೈತರು ಇತ್ತ ಬರುವುದು ಕಡಿಮೆಯಾಗಿದೆ’ ಎಂದು ನಿಟುವಳ್ಳಿಯ ದನದ ವ್ಯಾಪಾರಿ ವೆಂಕಟೇಶ ದನಿಗೂಡಿಸಿದರು.

‘ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ಹಾಗೆಯೇ ಅವರಿಗೆ ಒಳ್ಳೆಯ ಜಾನುವಾರು ಸಿಗಬೇಕು ಎಂಬ ಸದುದ್ದೇಶದಿಂದ ಹೈಟೆಕ್‌ ಜಾನುವಾರು ಮಾರುಕಟ್ಟೆ ನಿರ್ಮಿಸಲಾಗಿದೆ. ವ್ಯಾಪಾರಸ್ಥರಿಗೆ ಪರವಾನಗಿ, ರೈತರಿಗೆ ದನದ ವ್ಯಾಪಾರ ನಡೆಸಿದಕ್ಕೆ ರಸೀದಿ... ಹೀಗೆ ಪ್ರಮುಖ ದಾಖಲೆಗಳನ್ನು ನೀಡುತ್ತೇವೆ. ಆದರೆ, ಗೋ ರಕ್ಷಕರ ಬೆದರಿಕೆಯಿಂದಾಗಿ ಜಾನುವಾರು ವ್ಯಾಪಾರ ಕುಂಠಿತಗೊಂಡಿದೆ. ನಿಜವಾದ ಪಶುಸಂಗೋಪಕರು, ವ್ಯಾಪಾರಿಗಳಿಗೂ ತೊಂದರೆಯಾಗುತ್ತಿರುವುದು ರೈತರಿಂದ ತಿಳಿದುಬಂದಿದೆ’ ಎನ್ನುತ್ತಾರೆ ದಾವಣಗೆರೆ ಎಪಿಎಂಸಿ ಕಾರ್ಯದರ್ಶಿ ಬಿ. ಆನಂದ್‌.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !