ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಸಂತ್ರಸ್ತರಿಗೆ ಪರಿಹಾರ ಪ್ರಕ್ರಿಯೆ ಆರಂಭ

ಕೇಂದ್ರದ ನಿಯಮ ಪ್ರಕಾರ ನಿಗದಿ, ಶೇ 12 ಹೆಚ್ಚುವರಿ ಸೇರ್ಪಡೆ
Last Updated 31 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಹಾದು ಹೋಗಿರುವ ನೂತನ ರಾಷ್ಟ್ರೀಯ ಹೆದ್ದಾರಿ 150 'ಎ' ವಿಸ್ತರಣೆ ಆರಂಭವಾಗಿದ್ದು, ಭೂಮಿ ಕಳೆದುಕೊಳ್ಳುತ್ತಿರುವವರಿಗೆ ಪರಿಹಾರ ನೀಡಿಕೆ ಪ್ರಕ್ರಿಯೆ ಆರಂಭವಾಗಿದೆ.

ಜೇವರ್ಗಿ- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ-65 ಅನ್ನು ಜೇವರ್ಗಿಯಿಂದ ಚಾಮರಾಜನಗರವರೆಗೆ ವಿಸ್ತರಿಸಿ ರಾಷ್ಟ್ರೀಯ '150- ಎ' ಎಂದು ಮರು ನಾಮಕರಣ ಮಾಡಲಾಗಿದೆ. ಜಿಲ್ಲೆ ಮಟ್ಟಿಗೆ ಹಿರಿಯೂರಿನಿಂದ ಬಳ್ಳಾರಿವರೆಗೆ ಕಾಮಗಾರಿ ಮಂಜೂರಾಗಿದ್ದು, ಅಲ್ಲಲ್ಲಿ ಆರಂಭವೂ ಆಗಿದೆ.

‘ಚಳ್ಳಕೆರೆಯಿಂದ ಭೈರಾಪುರ ದವರೆಗೆ ಒಂದು ಭಾಗವಾಗಿ ವಿಂಗಡಿಸಿ ಕೆಲಸ ಆರಂಭಿಸಲಾಗಿದೆ. ಇದರಲ್ಲಿ ಒಟ್ಟು 54 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ರಸ್ತೆ ಎರಡು ಕಡೆ ಒಟ್ಟು 200 ಮೀಟರ್ ಪ್ರದೇಶವನ್ನು ವಶಕ್ಕೆ ಪಡೆಯಲಾಗುತ್ತಿದೆ. ಈಗಾಗಲೇ ಎಲ್ಲಾ ಜಮೀನು, ಗ್ರಾಮಗಳ ವಿಸ್ತರಣೆ ಪ್ರದೇಶ ಗುರುತಿಸಿ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದರು.

‘ಭೈರಾಪುರದಿಂದ- ಚಳ್ಳಕೆರೆವರೆಗೆ ಭೈರಾಪುರ, ಅಮಕುಂದಿ, ಕೆಳಗಳಹಟ್ಟಿ, ಹಾನಗಲ್, ರಾಯಾಫುರ, ರಾಯಾಪುರ ಮ್ಯಾಸರಹಟ್ಟಿ, ಬಿ.ಜಿ.ಕೆರೆ, ಹಿರೇಹಳ್ಳಿ, ಗರಣಿ ಕ್ರಾಸ್, ತಳಕು, ಚಿಕ್ಕಮ್ಮನಹಳ್ಳಿ, ಬುಡ್ನಹಟ್ಟಿ ಸೇರಿ 16 ಗ್ರಾಮಗಳು ಬರುತ್ತವೆ. ಈ ಪೈಕಿ ಹಿರೇಹಳ್ಳಿ, ಬುಡ್ನಹಟ್ಟಿಯಲ್ಲಿ ಹೊರತುಪಡಿಸಿದಲ್ಲಿ ಎಲ್ಲಾ ಕಡೆ ನೋಟಿಸ್‌ ನೀಡಲಾಗಿದೆ. ರೈತರ ಮನೆ ಬಾಗಿಲಿಗೆ ಹೋಗಿ ಪರಿಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಪರಿಹಾರದಲ್ಲಿ ಕೇಂದ್ರಸರ್ಕಾರದ ನೂತನ ಭೂಸ್ವಾಧೀನ ಕಾಯ್ದೆ ದರ ಅನ್ವಯ ನಿಗದಿ ಮಾಡಲಾಗಿದೆ’ ಎಂದು ಅಧಿಕಾರಿ ಬಸವರಾಜ್ 'ಪ್ರಜಾವಾಣಿ' ಗೆ ತಿಳಿಸಿದರು.

‘ನೀರಾವರಿ ಮತ್ತು ಮಳೆಯಾಶ್ರಿತ ಭೂಮಿಗೆ ಸಬ್ ರಿಜಿಸ್ಟರ್ ಕಚೇರಿ, ಮಾರುಕಟ್ಟೆ ಹಾಗೂ ಕಾಯ್ದೆ ದರ ಪೈಕಿ ಹೆಚ್ಚು ಬಾಳುವುದನ್ನೇ ನೀಡಲಾಗುತ್ತಿದೆ. ಇದರ ಪ್ರಕಾರ ಕನಿಷ್ಠ ಒಂದು ಚದರ ಮೀಟರ್ ₹124ಕ್ಕೂ ಹೆಚ್ಚು ಸಿಗಲಿದೆ. ಈ ದರ ಅನ್ವಯದಂತೆ ಪ್ರತಿ ಎಕರೆಗೆ ₹ 5 ಲಕ್ಷದಿಂದ ₹ 20 ಲಕ್ಷದವರೆಗೂ ದೊರೆಯಬಹುದು. ಜತೆಗೆ ಕಾಯ್ದೆಯಲ್ಲಿರುವಂತೆ ಶೇ 12 ರಷ್ಟು ಹೆಚ್ಚುವರಿ ಪರಿಹಾರ ನೀಡಲಾಗುತ್ತಿದೆ’ ಎಂದರು.

ವಿರೋಧವಿಲ್ಲ:

ಎಲ್ಲಿಯೂ ರೈತರು ವಿರೋಧ ವ್ಯಕ್ತಪಡಿಸಿಲ್ಲ. ಕಾಮಗಾರಿಗೆ ಸಹಕಾರ ನೀಡುತ್ತಿದ್ದಾರೆ. 2ರಿಂದ 3 ತಿಂಗಳ ಒಳಗಾಗಿ ಪರಿಹಾರ ವಿತರಣೆ ಪೂರ್ಣವಾಗಲಿದೆ. ರೈತರಿಗೆ ಆರ್‌ಟಿಜಿಎಸ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಪರಿಹಾರ ಜಮೆ ಮಾಡಲಾಗುತ್ತಿದೆ. ಸದ್ಯ ಭೂಸ್ವಾಧೀನಕ್ಕೆ ₹ 60 ಕೋಟಿ ಅನುದಾನ ಮಂಜೂರಾಗಿದ್ದು, ಅಂದಾಜು ₹100 ಕೋಟಿ ಅಗತ್ಯವಿದೆ. ಈಗಾಗಲೇ ₹10 ಕೋಟಿಯಷ್ಟು ಪರಿಹಾರವನ್ನು ರೈತರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

‘ಜಮೀನು ಕಳೆದುಕೊಳ್ಳುತ್ತಿ ರುವವರಿಗೆ ಪರಿಹಾರ ನೀಡಲಾಗುತ್ತಿದೆ. ಗ್ರಾಮ ವ್ಯಾಪ್ತಿಯಲ್ಲಿ ಮನೆ ಕಳೆದುಕೊಳ್ಳುವವರಿಗೆ ಪರಿಹಾರ ನೀಡಿಲ್ಲ. ನೆಲಸಮವಾಗಲಿರುವ ಆಸ್ತಿಗಳ ಮಾಹಿತಿ ಸಿದ್ಧವಿದೆ. ಹೆದ್ದಾರಿ ಸಿಬ್ಬಂದಿ ಸ್ಥಳ ಭೇಟಿ ನೀಡಿ ನಷ್ಟದ ಅಂದಾಜು ಕ್ರಿಯಾಯೋಜನೆ ಸಲ್ಲಿಸಿದ್ದಾರೆ. ಇದಕ್ಕೆ ಹೆದ್ದಾರಿ ಕಾಯ್ದೆಯಲ್ಲಿ ಪ್ರಕಾರ ಪರಿಹಾರ ನೀಡಲಾಗುವುದು.

ಇದರಲ್ಲೂ ಸಬ್ ರಿಜಿಸ್ಟರ್ ಕಚೇರಿ, ಮಾರುಕಟ್ಟೆ ದರ ಪರಿಗಣಿಸಲಾಗುವುದು. ಕಾಮಗಾರಿ ತ್ವರಿತವಾಗಿಆಗಬೇಕಿರುವ ಹಿನ್ನೆಲೆಯಲ್ಲಿ ಪರಿಹಾರವನ್ನು ಅದಷ್ಟು ಶೀಘ್ರ ನೀಡಲಾಗುವುದು’ ಎಂದು ಬಸವರಾಜ್ ಹೇಳಿದರು.

ಪರಿಹಾರದ್ದೇ ಮಾತು

ಹೆದ್ದಾರಿ ಇಕ್ಕೆಲೆ ಗ್ರಾಮಗಳಲ್ಲಿ ಪರಿಹಾರ ಎಷ್ಟು ಬರುತ್ತದೆ, ಅವರಿಗೆ ಇಷ್ಟು ಬಂತಂತೆ, ಇವರಿಗೆ ಇಷ್ಟು ಬರುತ್ತಂತೆ. ಹೋಟೆಲ್, ಬಸ್ ನಿಲ್ದಾಣಗಳಲ್ಲಿ ಈ ಮಾತುಗಳದ್ದೇ ಕಾರುಬಾರು. 5-7 ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿರುವ ರೈತರು ಭೂಮಿ ಕಳೆದು ಕೊಳ್ಳುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನ್ಯಾಯಯುತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಭೈರಾಫುರದಿಂದ ಚಳ್ಳಕೆರೆವರೆಗೆ ಒಂದು ಕಡೆ ಟೋಲ್ ಹಾಕಲಾಗುವುದು. ಇದಕ್ಕೆ ಇನ್ನೂ ಸ್ಥಳ ನಿಗದಿ ಮತ್ತು ಸ್ಥಳ ವಶ ಕಾರ್ಯ ಕೈಗೊಂಡಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT