ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಲೋಕದ ಹೊಸ ಚಿಗುರು ‘ಪೃಥ್ವಿ‘

Last Updated 3 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹದಿನೈದು ವರ್ಷಗಳ ಹಿಂದೆ ಮುಂಬೈನ ವಿರಾರ್‌ ಪ್ರದೇಶದ ಗಲ್ಲಿಗಳಲ್ಲಿ ಮೂರು ವರ್ಷದ ಬಾಲಕನೊಬ್ಬ ಬ್ಯಾಟ್ ಹಿಡಿದು ಅಂಗಳಕ್ಕಿಳಿದಿದ್ದ. ಆತನ ಆಟ ನೋಡಲು ಸುತ್ತಮುತ್ತಲಿನವರೆಲ್ಲ ಸೇರಿದ್ದರು. ಚೋಟುದ್ದ ಹುಡುಗ ತನಗಿಂತ ಹಿರಿಯ ಆಟಗಾರರ ಎಸೆತಗಳನ್ನು ಲೀಲಾಜಾಲವಾಗಿ ಹೊಡೆಯುತ್ತಿದ್ದ ರೀತಿಗೆ ನೋಡಿದವರು ಮನಸೋತಿದ್ದರು. ‘ಏ ತೋ ಔರ್ ಏಕ್ ತೇಂಡ್ಲ್ಯಾ ಬನೇಗಾ ರೇ..’ ಎಂದು ಕೂಗಿದ್ದರು.

ಮುಂಬೈ ಕ್ರಿಕೆಟ್‌ಪ್ರೇಮಿಗಳ ನಿರೀಕ್ಷೆಯ ಭಾರ ಹೊತ್ತು ಬೆಳೆಯುತ್ತಿರುವ ಪ್ರತಿಭೆ ಪೃಥ್ವಿ ಶಾ. ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಪರಂಪರೆಯನ್ನು ಮುಂದುವರಿಸುವ ಎಲ್ಲ ಲಕ್ಷಣಗಳೂ ಪೃಥ್ವಿಯಲ್ಲಿವೆ. ಶನಿವಾರ ನ್ಯೂಜಿಲೆಂಡ್‌ನಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದರು ಪೃಥ್ವಿ. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಮುಂಬೈನ ಜೂನಿಯರ್ ತಂಡಗಳಲ್ಲಿ ಸ್ಥಾನ ಪಡೆಯುವುದೇ ದೊಡ್ಡ ಸಾಹಸ ಎಂಬಷ್ಟು ಪೈಪೋಟಿ ಇದೆ. ಅಂತಹ ಪರಿಸ್ಥಿತಿಯಲ್ಲಿಯೂ ಪೃಥ್ವಿ ವಿಶ್ವಕಪ್ ಗೆದ್ದ  ಯುವತಂಡದ ನಾಯಕನಾಗಿ ಬೆಳೆದಿದ್ದರ ಹಿಂದಿನ ಶ್ರಮ ಸಣ್ಣದಲ್ಲ. ಜೊತೆಗೆ ಅವರ ತಂದೆ ಪಂಕಜ್ ಶಾ ಅವರ ತ್ಯಾಗವೂ ಇದೆ.

ಅಮ್ಮನ ಅಗಲಿಕೆ; ಅಪ್ಪನ ಆರೈಕೆ

ಪೃಥ್ವಿ ನಾಲ್ಕು  ವರ್ಷದವರಾಗಿದ್ದಾಗಲೇ ಅಮ್ಮ ನಿಧನರಾದರು. ಸಿದ್ಧ ಉಡುಪುಗಳ ವ್ಯಾಪಾರ ನಡೆಸುತ್ತಿದ್ದ ತಂದೆ ಪಂಕಜ್ ಶಾ ಅವರ ಮುಂದೆ ದೊಡ್ಡ ಸವಾಲು ಎದುರಾಗಿತ್ತು. ತಮ್ಮ ಸಣ್ಣ ಅಂಗಡಿಯನ್ನು ನಿರ್ವಹಿಸುತ್ತಲೇ ಮಗನನ್ನು ತರಬೇತಿ ಮತ್ತು ಶಾಲೆಗೆ ಕರೆದುಕೊಂಡು ಹೋಗಿ ಬರುವುದು ಸವಾಲಿನ ಕೆಲಸವಾಯಿತು.  ಎಳೆಯ ಹುಡುಗ ಚೆನ್ನಾಗಿ ಆಡುವುದನ್ನು ನೋಡುತ್ತಿದ್ದ ಅವರು ಕಣ್ಣಂಚುಗಳು ಜಿನುಗುತ್ತಿದ್ದವು. ಮನಸ್ಸು ವೇದನೆಯಲ್ಲಿ ಮುಳುಗುತ್ತಿತ್ತು.

‘ನನ್ನ  ಕಷ್ಟಗಳಿಗೆ ಮಗನ ಭವಿಷ್ಯ ಬಲಿ ಕೊಡಲು ಮನಸ್ಸಾಗಲಿಲ್ಲ. ಅದಕ್ಕಾಗಿ ವ್ಯಾಪಾರ ನಿಲ್ಲಿಸಿಬಿಟ್ಟೆ. ಪೃಥ್ವಿಯ ಹಿಂದೆ ನಿಂತೆ’ ಎಂದು ಮೂರು ವರ್ಷಗಳ ಹಿಂದೆ ಪಂಕಜ್ ಕ್ರೀಡಾ ಜಾಲತಾಣಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

ಫೃಥ್ವಿಯನ್ನು ಬಾಂದ್ರಾದಲ್ಲಿದ್ದ ಮಿಡ್ಲ್ ಇನ್‌ಕಮ್ ಗ್ರೂಪ್ (ಎಂ.ಐ.ಜಿ) ಕ್ರಿಕೆಟ್‌ ಕ್ಲಬ್‌ಗೆ ಸೇರಿಸಿದರು. ಪ್ರತಿದಿನ ಬೆಳಿಗ್ಗೆ ವಿರಾರ್‌ನಿಂದ 6.09ಕ್ಕೆ ಹೊರಡುತ್ತಿದ್ದ ಲೋಕಲ್ ಟ್ರೇನ್‌ನಲ್ಲಿ ಮಗನನ್ನು ಕರೆದುಕೊಂಡು ಬಾಂದ್ರಾಗೆ ಬರುತ್ತಿದ್ದರು. ಅದಕ್ಕಾಗಿ ಬೆಳಗಿನ ಜಾವ 4.30ಕ್ಕೆ ಎದ್ದು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದರು. ಪೃಥ್ವಿಯನ್ನು ಮರಳಿ ಮನೆಗೆ ಕರೆದುಕೊಂಡು ಬಂದು ಶಾಲೆಗೆ ಕಳಿಸುತ್ತಿದ್ದರು.

ಪಂಕಜ್ ಅವರು ಅದೆಷ್ಟೋ ಹಗಲುಗಳನ್ನು ಶಾಲೆಯ ಹೊರಗಿನ ಕಟ್ಟೆಯ ಮೇಲೆ ಮತ್ತು ಸಂಜೆಗಳನ್ನು ತರಬೇತಿ ಅಕಾಡೆಮಿಯ ಮೈದಾನದ ಮೆಟ್ಟಿಲುಗಳ ಮೇಲೆ ಕಳೆದರು. ಅಪ್ಪನ ಶ್ರಮ ವ್ಯರ್ಥವಾಗಲು ಪೃಥ್ವಿ ಬಿಡಲಿಲ್ಲ. ದಿನದಿಂದ ದಿನಕ್ಕೆ ಅವರ ಆಟ ರಂಗೇರಿತು. ಶಾಲಾಮಟ್ಟದ ಟೂರ್ನಿಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ರನ್‌ಗಳ ಹೊಳೆ ಹರಿಸಿದರು.

2010ರಲ್ಲಿ ಹಿರಿಯ ಎಡಗೈ ಸ್ಪಿನ್ನರ್  ನೀಲೇಶ್ ಕುಲಕರ್ಣಿ ಅವರ ಕಣ್ಣಿಗೆ ಬಿದ್ದ ಪೃಥ್ವಿಯ ಜೀವನಕ್ಕೆ ಹೊಸ ತಿರುವು ಲಭಿಸಿತ್ತು. ನೀಲೇಶ್ ಮಾಲೀಕತ್ವದ ಕ್ರೀಡಾ ಮ್ಯಾನೇಜ್‌ಮೆಂಟ್ ಗ್ರೂಪ್ ಪೃಥ್ವಿಗೆ ಪ್ರಾಯೋಕತ್ವ ನೀಡಿತು. ವಾರ್ಷಿಕ ಮೂರು ಲಕ್ಷ ರೂಪಾಯಿ ನೀಡುವ ಒಪ್ಪಂದ ಮಾಡಿಕೊಂಡಿತು. ಅದೇ ವರ್ಷ ಆಪ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯೂ ಸಹಾಯಹಸ್ತ ಚಾಚಿತು. ಇದರಿಂದಾಗಿ ಪೃಥ್ವಿ ಮತ್ತು ಪಂಕಜ್ ಅವರು ಮುಂಬೈನ ಸಾಂತಾಕ್ರೂಜ್‌ಗೆ ಬಂದು ನೆಲೆಸಿದರು. ಇದರಿಂದ ಅಭ್ಯಾಸಕ್ಕೆ ಹೆಚ್ಚಿನ ಸಮಯ ವಿನಿಯೋಗಿಸಲು ಸಾಧ್ಯವಾಯಿತು.

2012 ರಿಂದ ಎಂ.ಐ.ಜಿ ಮತ್ತು ರಿಜ್ವಿ ಸ್ಪ್ರಿಂಗ್‌ಫೀಲ್ಡ್‌ ಶಾಲೆ ತಂಡಗಳಿಗೆ ಪೃಥ್ವಿ ನಾಯಕತ್ವ ವಹಿಸಿಕೊಂಡರು. 16 ವರ್ಷದೊಳಗಿನವರ ಮುಂಬೈ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ಅವರಿಗೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ ಶೀಡ್ಲ್ ಹಲ್ಮ್ ಶಾಲೆಯ ಪರ ಆಡುವ ಆಹ್ವಾನ ಸಿಕ್ಕಿತು.ಅಲ್ಲಿ ಎರಡು ತಿಂಗಳು ಆಡಿದ ಅವರು 1446 ರನ್‌ ಪೇರಿಸಿದರು. ಆಫ್‌ಸ್ಪಿನ್ನರ್ ಕೂಡ ಆಗಿರುವ ಪೃಥ್ವಿ 68 ವಿಕೆಟ್‌ಗಳನ್ನೂ ಕಬಳಿಸಿದರು. ಅಲ್ಲಿಯ ಅನುಭವದಿಂದ ಅವರ ಆಟ ಮತ್ತಷ್ಟು ಹುರಿಗೊಂಡಿತು.

2013ರ ನವೆಂಬರ್‌ನಲ್ಲಿ ಹ್ಯಾರಿಸ್ ಶೀಲ್ಡ್‌ ಎಲೈಟ್ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ರಿಜ್ವಿ ಸ್ಪ್ರಿಂಗ್‌ಫೀಲ್ಡ್‌ ಶಾಲೆ ತಂಡದ ಪರ  546 (336 ಎಸೆತ) ರನ್‌ಗಳನ್ನು ಹೊಡೆದು ದಾಖಲೆ ಬರೆದರು.ತಂಡವು 991 ರನ್ ಗಳಿಸಿತ್ತು. ಎದುರಾಳಿ ತಂಡ ಸೇಂಟ್ ಫ್ರಾನ್ಸಿಸ್‌ ಡಿ ಆಸ್ಸಿಸ್ 93 ರನ್‌ಗಳಿಗೆ ಆಲೌಟ್‌ ಅಗಿತ್ತು. 1899ರಲ್ಲಿ ಎ.ಇ.ಜೆ. ಕಾಲಿನ್ಸ್‌ (ಔಟಾಗದೆ 628) ಮತ್ತು 1901ರಲ್ಲಿ  ಚಾರ್ಲ್ಸ್‌ ಈಡಿಸ್ (566 ) ಅವರ ನಂತರ ದಾಖಲಾದ ಅತ್ಯಧಿಕ ಸ್ಕೋರ್ ಇದಾಗಿತ್ತು. 500 ರನ್‌ಗಳ ವೈಯಕ್ತಿಕ ಸ್ಕೋರ್ ದಾಟಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿತ್ತು.1933ರಲ್ಲಿ ದಾದಾಭಾಯಿ ಹವೇವಾಲಾ ಅವರು ಬಾಂಬೆ ತಂಡದ ಪರ 515 ರನ್‌ ಹೊಡೆದಿದ್ದರು. 2016ರಲ್ಲಿ ಮುಂಬೈನವರೇ ಆದ ಪ್ರಣವ್ ಧನವಾಡೆ (1009 ರನ್) ಈ ಎಲ್ಲ ದಾಖಲೆಗಳನ್ನು ಮೀರಿ ನಿಂತಿದ್ದು ಈಗ ಇತಿಹಾಸ.

ಸಚಿನ್ ದಾಖಲೆ ಸಮ

ಒಂದೆಡೆ ಕ್ರಿಕೆಟ್ ಲೋಕದಲ್ಲಿ ಸಾಧನೆಗಳು ದಾಖಲಾಗುತ್ತಿದ್ದರೆ, ಇನ್ನೊಂದೆಡೆ ಪೃಥ್ವಿ ಕೂಡ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದ್ದರು. 2016ರಲ್ಲಿ ಅವರು 19 ವರ್ಷದೊಳಗಿನವರ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಆ ವರ್ಷ ತಂಡವು ಶ್ರೀಲಂಕಾದಲ್ಲಿ ನಡೆದಿದ್ದ ಯೂತ್ ಏಷ್ಯಾ ಕಪ್ ಗೆದ್ದಿತ್ತು. ಅದೇ ವರ್ಷ ಅವರು ಮುಂಬೈ ರಣಜಿ ತಂಡದಲ್ಲಿ ಸ್ಥಾನ ಪಡೆದರು. ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ  ಎರಡನೇ ಇನಿಂಗ್ಸ್‌ನಲ್ಲಿ ಅವರು ಗಳಿಸಿದ ಶತಕದಿಂದ ತಂಡವು ಜಯಿಸಿತು.  ಇಲ್ಲಿಯವರೆಗೆ ಒಟ್ಟು ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು ಐದು ಶತಕಗಳನ್ನು ಗಳಿಸಿದ್ದಾರೆ.

2017ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ದುಲೀಪ್ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಪೃಥ್ವಿ ಶತಕ ಹೊಡೆದರು. ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ಅದರ ನಂತರ 19 ವರ್ಷದೊಳಗಿನವರ ತಂಡದ ನಾಯಕತ್ವದ ಪಟ್ಟಕ್ಕೇರಿದರು. ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಕಠಿಣ ಎದುರಾಳಿಗಳು ಇರಲಿಲ್ಲ. ಆದರೆ ನಾಕೌಟ್ ಹಂತದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನ ತಂಡಗಳ ಸವಾಲು ಮೀರಿ ನಿಲ್ಲುವಲ್ಲಿ ಪೃಥ್ವಿ ಬಳಗ ಯಶಸ್ವಿಯಾಗಿತ್ತು. ಫೈನಲ್‌ನಲ್ಲಿಯೂ ತಂಡವು ಆಮೋಘ ಆಟವಾಡಿತು. ಈ ಟೂರ್ನಿಯಲ್ಲಿ ಪೃಥ್ವಿ ಬ್ಯಾಟ್‌ನಿಂದ ಶತಕ ದಾಖಲಾಗಲಿಲ್ಲ. ಆದರೆ ಲೀಗ್ ನ ಮೊದಲ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ಎದುರು 94 ರನ್ ಗಳಿಸಿ ತಂಡದ ಜಯಕ್ಕೆ ಮುನ್ನುಡಿ ಬರೆದಿದ್ದರು.

‘ಪೃಥ್ವಿ ಶಾ ಪ್ರತಿಭಾನ್ವಿತ ಆಟಗಾರ. ಆದರೆ ಸಾಗಬೇಕಾದ ಹಾದಿ ಬಹುದೂರ ಇದೆ. ಇಂದಿನ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಹೆಚ್ಚು ಎತ್ತರಕ್ಕೆ ಬೆಳೆಯಲು ನಿರಂತರ ಶ್ರಮಿಸಬೇಕು. ಪೃಥ್ವಿ ಮತ್ತು ತಂಡದ ಇನ್ನುಳಿದ ಆಟಗಾರರಿಗೆ ಈ ಗೆಲುವು ಸಾಧನೆಯ ಆರಂಭವಷ್ಟೇ’ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳುತ್ತಾರೆ.

ಈಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಪೃಥ್ವಿ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ₹ 1.2 ಕೋಟಿ ಕೊಟ್ಟು ಖರೀದಿಸಿತ್ತು. ಇದರೊಂದಿಗೆ ಐಪಿಎಲ್‌ನಲ್ಲಿಯೂ ತಮ್ಮ ಕೈಚಳಕ ಮೆರೆಯುವ ಅವಕಾಶ ಪಡೆದುಕೊಂಡಿದ್ದಾರೆ.  ಎಲ್ಲ ಸವಾಲುಗಳನ್ನೂ ಮೀರಿ ಮತ್ತೊಬ್ಬ ‘ಮುಂಬೈಕರ್’ ಆಗುವ ಗುಣ ಪೃಥ್ವಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT