ಮಳೆಹಾನಿಯಿಂದ ಅಪಾರ ಹಾನಿ: ಬೆಟ್ಟದಲ್ಲಿ ಯಶಸ್ವಿ ಕಾರ್ಯಾಚರಣೆ

7
ಜಿಲ್ಲಾಡಳಿತಕ್ಕೆ ಪುನರ್ವಸತಿಯೇ ದೊಡ್ಡ ಸವಾಲು

ಮಳೆಹಾನಿಯಿಂದ ಅಪಾರ ಹಾನಿ: ಬೆಟ್ಟದಲ್ಲಿ ಯಶಸ್ವಿ ಕಾರ್ಯಾಚರಣೆ

Published:
Updated:
Deccan Herald

ಮಡಿಕೇರಿ: ಮನೆ, ಆಸ್ತಿ, ದಾಖಲೆ, ವಾಹನ, ಪ್ರೀತಿಯಿಂದ ಸಾಕಿದ ಪ್ರಾಣಿಗಳನ್ನು ಕಳೆದುಕೊಂಡಿರುವ ಸಂತ್ರಸ್ತರಲ್ಲಿ ಆತಂಕದ ಭಾವ ಮಡುಗಟ್ಟಿದೆ. ಅಪಾಯದ ಸ್ಥಳಗಳಲ್ಲಿದ್ದ ಹಲವರನ್ನು ಭಾನುವಾರವೂ ಸ್ಥಳಾಂತರ ಮಾಡಲಾಗಿದ್ದು, ಪರಿಹಾರ ಕೇಂದ್ರಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇನ್ನೂ ಕೆಲವು ಅಪಾಯದ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಅಲ್ಲಿದ್ದ ಜನರನ್ನು ಸೋಮವಾರ ಸ್ಥಳಾಂತರಿಸುವ ಸಾಧ್ಯತೆಯಿದೆ.

ಮುಕ್ಕೊಡ್ಲು ಬೆಟ್ಟದ ಎರಡು ಸ್ಥಳಗಳಲ್ಲಿ ನಾಲ್ಕು ದಿನಗಳಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ 90 ಮಂದಿಯನ್ನು ಯೋಧರು ಭಾನುವಾರ ಯಶಸ್ವಿಯಾಗಿ ರಕ್ಷಣೆ ಮಾಡಿದರು. ಮಕ್ಕಂದೂರು ಬೆಟ್ಟದಲ್ಲೂ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಮಂಗಳೂರು ರಸ್ತೆಯ ಕಾಟಕೇರಿ ಭಾಗದಲ್ಲೂ ಅಪಾಯದಲ್ಲಿದ್ದವರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಕಣ್ಮುಂದೆಯೇ ನಡೆದ ಭೀಕರ ಸನ್ನಿವೇಶನವನ್ನು ಸ್ಮರಿಸಿಕೊಂಡು ಸಂತ್ರಸ್ತರು ಕಣ್ಣೀರು ಸುರಿಸುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ಆತಂಕದ ಛಾಯೆ. ಜಿಲ್ಲೆಯಲ್ಲಿ ಮತ್ತೆ ಮಳೆ ಸುರಿಯುತ್ತಿರುವುದು ಆ ದುಗುಡವನ್ನು ಹೆಚ್ಚಿಸಿದೆ.

ರಾಜ್ಯದ ವಿವಿಧೆಡೆಯಿಂದ ಆಹಾರ, ಬಟ್ಟೆ ಮತ್ತಿತರ ಸಾಮಗ್ರಿಗಳು ಟನ್‌ಗಟ್ಟಲೆ ಹರಿದು ಬರುತ್ತಿದೆ. ‘ಎಲ್ಲಕ್ಕಿಂತಲೂ ಮೊದಲು ನಮಗೆ ನೆಲೆ ಬೇಕು’ ಎಂದು ಸಂತ್ರಸ್ತರು ಆಗ್ರಹಿಸುತ್ತಿದ್ದಾರೆ. ಸಂತ್ರಸ್ತರ ರಕ್ಷಣೆ ಬಳಿಕ ಪುನರ್ವಸತಿಯೂ ದೊಡ್ಡ ಸವಾಲಾಗಿದೆ. ಕುಸಿದ ಸ್ಥಳದಲ್ಲಿ ಮತ್ತೆ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಸಾವಿರಾರು ಸಂಖ್ಯೆಯಲ್ಲಿರುವ ನಿರಾಶ್ರಿತರಿಗೆ ಪರ್ಯಾಯ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಬೇಕು. ಕಾವೇರಿ ನಾಡಿನ ರಸ್ತೆಗಳು, ಪ್ರಕೃತಿ ಸೌಂದರ್ಯವು ಸಹಜ ಸ್ಥಿತಿಗೆ ಮರಳಲು ಕೆಲವು ವರ್ಷಗಳೇ ಬೇಕಾಗಲಿದೆ.

ಮನೆಗಳಲ್ಲಿ ಕಳವು: ಬೆಟ್ಟ ಕುಸಿತದ ಆತಂಕದಿಂದ ರಾತ್ರೋರಾತ್ರಿ ಎಲ್ಲವನ್ನೂ ಬಿಟ್ಟು ಬಂದಿದ್ದ ಸಂತ್ರಸ್ತರ ಮನೆಗಳಲ್ಲಿ ಕಳವು
ನಡೆಯುತ್ತಿದ್ದು ಅದು ಸಂಕಷ್ಟ ಹೆಚ್ಚಿಸಿದೆ. ಕಳ್ಳರು ಚಿನ್ನಾಭರಣ, ಹಣಕ್ಕಾಗಿ ಹುಡುಕಾಟ ನಡೆಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಬೆಲೆ ಬಾಳುವ ವಸ್ತುಗಳನ್ನು ತಂದುಕೊಡಿ ಎಂದು ಸಂತ್ರಸ್ತರು ರಕ್ಷಣಾ ಸಿಬ್ಬಂದಿಯಲ್ಲಿ ಮೊರೆಯಿಡುತ್ತಿದ್ದಾರೆ.

ಹೋಂ ಸ್ಟೇ ತಂದ ದುರಂತ: ಕೊಡಗು ಜಿಲ್ಲೆಗೆ ಪ್ರವಾಸೋದ್ಯಮವೇ ಆಧಾರ. ಪ್ರವಾಸಿಗರನ್ನು ತೃಪ್ತಿಪಡಿಸಲು ಬೆಟ್ಟವನ್ನೇ ಕಡಿದು ನಿರ್ಮಿಸಿದ್ದ ಹೋಂಸ್ಟೇಗಳೇ ಬದುಕಿಗೆ ಮುಳುವಾಗಿವೆ. ಮರ ತೆರವುಗೊಳಿಸಿ, ಎಲ್ಲೆಂದರಲ್ಲಿ ಹೋಂಸ್ಟೇ ನಿರ್ಮಿಸಲಾಗಿತ್ತು. ಬೆಟ್ಟದ ತುದಿಯೇ ಸಮತಟ್ಟಾದ ಕಾರಣ ತೇವಾಂಶ ಹೆಚ್ಚಾಗಿ ಕುಸಿಯಲು ಆರಂಭಿಸಿತು ಎಂದು ಸ್ಥಳೀಯರು ಹೇಳುತ್ತಾರೆ.

ಮಳೆಯಿಂದ ಬದುಕು ನಲುಗಿದ್ದು, ಹಬ್ಬುತ್ತಿರುವ ವದಂತಿಗಳು ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಭೂಕಂಪನವಾಗಲಿದೆ ಎಂದು ಹೆದರಿ ಕೆಲವು ಗ್ರಾಮಗಳ ಜನರು ಊರನ್ನೇ ತೊರೆಯುತ್ತಿದ್ದಾರೆ. ಜಿಲ್ಲಾಡಳಿತ ಮನವಿ ಮಾಡಿದ್ದರೂ ಅಪ್ಪಂಗಳ, ಮೂರ್ನಾಡು, ಚೆಟ್ಟಿಮಾನಿ ವ್ಯಾಪ್ತಿಯಲ್ಲಿ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು.

ಭೂಕುಸಿತದಿಂದ ರಸ್ತೆ ಸಂಪರ್ಕ ಕಳೆದುಕೊಂಡಿರುವ ಹಲವು ಹಳ್ಳಿಗಳ ಅಂಗಡಿಗಳಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ ಸಾಧ್ಯವಾಗಿಲ್ಲ. ಕರಿಕೆ, ಭಾಗಮಂಡಲ, ಮೂರ್ನಾಡು, ಬೇತ್ರಿ, ಕೊಟ್ಟಂಮುಡಿ, ನಾಪೋಕ್ಲು ಜನರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಆಗ್ಗಾಗ್ಗೆ ಸುರಿಯುತ್ತಿರುವ ಮಳೆ ಹಾಗೂ ಅಂತರ್ಜಲ ಹೆಚ್ಚಳದಿಂದ ಕಾವೇರಿ ನದಿಯಲ್ಲಿ ಪ್ರವಾಹ ತಗ್ಗುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !