ಕೊಲೆ ಆರೋಪಿಗಳಿಗೆ ಜೈಕಾರ ಕೂಗಿದ ಎಚ್‌ಜೆಎಸ್

7
ಸನಾತನ ಸಂಸ್ಥೆ ಬೆಂಬಲಿಸಿ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ

ಕೊಲೆ ಆರೋಪಿಗಳಿಗೆ ಜೈಕಾರ ಕೂಗಿದ ಎಚ್‌ಜೆಎಸ್

Published:
Updated:

ಬೆಂಗಳೂರು: ಸನಾತನ ಸಂಸ್ಥೆಯನ್ನು ಬೆಂಬಲಿಸಿ ಬುಧವಾರ ಬೆಂಗಳೂರಿನ ಬನಪ್ಪ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ಸದಸ್ಯರು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೈಕಾರ ಕೂಗಿದರು.

‘ತನಿಖೆಯನ್ನು ತ್ವರಿತವಾಗಿ ಮುಗಿಸುವ ಧಾವಂತದಲ್ಲಿ ಎಸ್‌ಐಟಿ ಅಧಿಕಾರಿಗಳು ಅಮಾಯಕರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಲು ತಾಕತ್ತಿಲ್ಲದೆ, ಆರೋಪಿಗಳ ವಿರುದ್ಧ ಬೇಕಂತಲೇ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದ ಕಾರ್ಯಕರ್ತರು, ‘ಹಿಂದೂ ವಿರೋಧಿಗಳ ವಿರುದ್ಧ ದನಿ ಎತ್ತುವವರಿಗೆ ನಮ್ಮ ಜಿಂದಾಬಾದ್. ಪರಶುರಾಮ ವಾಘ್ಮೋರೆಗೆ ಜಿಂದಾಬಾದ್. ಕೆ.ಟಿ.ನವೀನ್‌ಕುಮಾರ್ ಜಿಂದಾಬಾದ್‌...’ ಎಂದೂ ಘೋಷಣೆ ಕೂಗಿದರು.

ಆರೋಪಿಗಳಿಗೆ ಜಿಂದಾಬಾದ್ ಎಂದ ಕಾರ್ಯಕರ್ತರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದನ್ನು ಸಮರ್ಥಿಸಿಕೊಂಡ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಘಟಕದ ವಕ್ತಾರ ಮೋಹನ್‌ಗೌಡ, ‘ನವೀನ್ ಹಾಗೂ ವಾಘ್ಮೋರೆ ಆರೋಪಿಗಳಷ್ಟೆ. ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸುವವರೆಗೂ ಅವರು ಅಪರಾಧಿಗಳಲ್ಲ. ಅಂದಮೇಲೆ ಜಿಂದಾಬಾದ್ ಎಂದಿದ್ದರಲ್ಲಿ ತಪ್ಪೇನು’ ಎಂದು ಕೇಳಿದರು.

‘ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ಕೆಲವರು ಸನಾತನ ಸಂಸ್ಥೆಯ ನಿಷೇಧಕ್ಕೆ ಆಗ್ರಹಿಸುತ್ತಿದ್ದಾರೆ. ಅದು ಅಧ್ಯಾತ್ಮ ಹಾಗೂ ಧರ್ಮ ರಕ್ಷಣೆಗಾಗಿ ಇರುವ ಸಂಸ್ಥೆ. ಯಾವುದೇ ಕಾರಣಕ್ಕೂ ನಿಷೇಧ ಮಾಡಲು ಬಿಡುವುದಿಲ್ಲ’ ಎಂದು ಹೇಳಿದರು.

ಆರೋಪಿಗಳ ಪರ ವಕೀಲ ಅಮೃತೇಶ್, ‘ಎಂಟು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಬಿದ್ ಪಾಷಾ ವಿರುದ್ಧ ಯಾಕೆ ಕೋಕಾ ಅಸ್ತ್ರ ಪ್ರಯೋಗಿಸಲಿಲ್ಲ. ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಪಿಎಫ್‌ಐನ ಕೈವಾಡವಿರುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸ್ಪಷ್ಟಪಡಿಸಿದರೂ, ಆ ಸಂಘಟನೆಯನ್ನೇಕೆ ನಿಷೇಧ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

‘ಗಾಂಧಿಯನ್ನು ಕೊಂದವರೇ ಗೌರಿಯನ್ನೂ ಕೊಂದರು ಎಂಬ ಘೋಷವಾಕ್ಯದಡಿ ವಿಚಾರವಾದಿಗಳೆಲ್ಲ ಹೋರಾಟ ಮಾಡುತ್ತ ಬಂದಿದ್ದಾರೆ. ಅದನ್ನು ನೋಡಿದರೆ ಹಾಸ್ಯಾಸ್ಪದ ಎನಿಸುತ್ತದೆ. ಅವರು ಮಾತನಾಡಿದರೆ ಅಭಿವ್ಯಕ್ತಿ ಸ್ವಾತಂತ್ರ್ಯವಂತೆ. ಹಿಂದುತ್ವವಾದಿಗಳು ಮಾತನಾಡಿದರೆ ಕೋಮುವಾದಿ ಹೇಳಿಕೆಯಂತೆ. ಇವರನ್ನೆಲ್ಲ ವಿಚಾರವಾದಿಗಳು ಎಂದು ಒಪ್ಪಿಕೊಳ್ಳಬೇಕೇ’ ಎಂದು ವ್ಯಂಗ್ಯವಾಡಿದರು.

‘ಎಸ್‌ಐಟಿ ಎಸ್ಪಿ ಅನುಚೇತ್ ಅವರೇ, ಈಗ ನೀವು ಆರೋಪಿಗಳನ್ನು ವಿಚಾರಣೆ ಮಾಡಿದ ರೀತಿಯಲ್ಲೇ ಗೌರಿ ಅವರ ಸೋದರ ಇಂದ್ರಜಿತ್ ಲಂಕೇಶ್ ಅವರನ್ನೂ ವಿಚಾರಣೆಗೆ ಒಳಪಡಿಸಿ. ಕುಟುಂಬದ ಒಳಗೆ ನಡೆದಿದ್ದಂತಹ ಕಲಹಗಳ ಬಗ್ಗೆ ಗೌರಿ ಸೋದರಿ ಕವಿತಾ ಲಂಕೇಶ್ ಹಾಗೂ ಅವರ ತಾಯಿಯನ್ನೂ ಕೇಳಿನೋಡಿ. ಕೊಲೆ ಸಂಬಂಧ ಇನ್ನಷ್ಟು ಮಾಹಿತಿಗಳು ನಿಮಗೆ ಸಿಗುತ್ತವೆ’ ಎಂದೂ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !