ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಬಾಗೇವಾಡಿ, ಬೆಳಗುಂದಿ, ಕಸಾಯಿಗಲ್ಲಿ ಕಂಟೈನ್ಮೆಂಟ್ ಝೋನ್

ಮೂವರಿಗೆ ಕೋವಿಡ್-19 ಹಿನ್ನೆಲೆ
Last Updated 4 ಏಪ್ರಿಲ್ 2020, 14:12 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹಿರೇಬಾಗೇವಾಡಿ, ಬೆಳಗುಂದಿ ಮತ್ತು ನಗರದ ಕ್ಯಾಂಪ್‌ನ ಕಸಾಯಿಗಲ್ಲಿಯ ತಲಾ ಒಬ್ಬರಿಗೆ ಕೊರೊನಾ ವೈರಾಣು ಸೋಂಕು ದೃಢಪಟ್ಟಿರುವುದರಿಂದ ಆ ಪ್ರದೇಶಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದರೆಗೆ ನಿಷೇಧಿತ (ಕಂಟೈನ್ಮೆಂಟ್ ಝೋನ್) ವಲಯ ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.

ಈ ಮೂರೂ ಪ್ರದೇಶಗಳ ನಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಬಂಧಿಸಿದ ಗ್ರಾಮ ಮತ್ತು ಪ್ರದೇಶದ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪ್ರದೇಶದ 3 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಜನರು ನಡೆದುಕೊಂಡು ಅಥವಾ ವಾಹನಗಳ ಮೂಲಕ ಒಳ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ. ಕರ್ತವ್ಯನಿರತ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ತುರ್ತು ಸಂದರ್ಭದಲ್ಲಿ ಪ್ರವೇಶಿಸುವ ಹಾಗೂ ಹೊರಬರುವ ವಾಹನಗಳಿಗೆ ಹಾಗೂ ಅದರಲ್ಲಿರುವವರಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಈ ನಿಷೇಧಿತ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳು ಮುಂದಿನ ಆದೇಶವಾಗುವರೆಗೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಈ ನಿಷೇಧಿತ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿರುವ ನಿವಾಸಿಗಳು ತಮ್ಮ ಬಡಾವಣಿಯ ಓಣಿಯ ಗಲ್ಲಿಯಲ್ಲಿ ಶುಚಿತ್ವವನ್ನು ತಪ್ಪದೆ ಕಾಪಾಡಿಕೊಂಡು ಬರಬೇಕು. ನಿಷೇಧಿತ ಪ್ರದೇಶಗಳ 3 ಕಿ..ಮೀ. ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಧಾರ್ಮಿಕ ಉತ್ಸವ, ಉರುಸ್, ಮದುವೆ, ಕ್ರೀಡೆ, ಸಂತೆ, ಜಾತ್ರೆ, ಸಮ್ಮೇಳನ, ನಾಟಕೋತ್ಸವ, ವಿಚಾರ ಗೋಷ್ಠಿ ಮೊದಲಾದವುಗಳನ್ನು ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಷೇಧಿತ ಪ್ರದೇಶದಲ್ಲಿನ ಎಲ್ಲಾ ಕಚೇರಿಗಳು (ಸರಕಾರಿ ಕಚೇರಿಗಳನ್ನು ಹೊರತುಪಡಿಸಿ), ಅಂಗಡಿ, ಮಳಿಗೆ, ದಾಸ್ತಾನು ಕೇಂದ್ರಗಳನ್ನು (ದಿನಸಿ, ಹಾಲು, ಹಣ್ಣು, ತರಕಾರಿ ಮತ್ತು ಔಷಧಿ ಅಂಗಡಿಗಳು ಹೊರತುಪಡಿಸಿ) ಮುಚ್ಚಬೇಕು. ಅಗತ್ಯ ವಸ್ತುಗಳಾದ (ದಿನಸಿ, ಹಾಲು, ಹಣ್ಣು ಮತ್ತು ತರಕಾರಿಗಳನ್ನು ಪ್ರತಿದಿನ ಬೆಳಿಗ್ಗೆ 8ರಿಂದ 10ರವರೆಗೆ ಮಾತ್ರ ಖರೀದಿಸಲು ಅವಕಾಶ ಇರುತ್ತದೆ. ಆಗತ್ಯ ವಸ್ತುಗಳನ್ನು ಖರೀದಿ ಸ್ಥಳದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.

ಈ ಪ್ರದೇಶದಲ್ಲಿರುವ ಎಲ್ಲಾ ಮನೆಗಳಲ್ಲಿ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ. ಆ ಪ್ರದೇಶದಲ್ಲಿರುವ ಎಲ್ಲಾ ಮನೆಗಳ ಸದಸ್ಯರು ಗೃಹ ಸಂಪರ್ಕ ತಡೆಯಲ್ಲಿ (ಹೋಂ ಕ್ವಾರಂಟೈನ್) ಇರಬೇಕು.

ಗ್ರಾಮದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯವನ್ನು ಆರೋಗ್ಯ ಇಲಾಖೆಯು ತಂಡಗಳನ್ನು ರಚಿಸಿಕೊಂಡು ಪರಿಶೀಲಿಸಬೇಕು. ಈ ಆದೇಶವನ್ನು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಲು ಹಿರೇಬಾಗೇವಾಡಿ ಹಾಗಾ ಬೆಳಗುಂದಿ ಪಿಡಿಒಗಳನ್ನು ನೋಡಲ್ ಅಧಿಕಾರಿ ಎಂದು ಜಿಲ್ಲಾಧಿಕಾರಿ ನೇಮಿಸಿದ್ದಾರೆ. ಅದೇ ರೀತಿ ಕ್ಯಾಂಪ್ ಪ್ರದೇಶದ ಕಸಾಯಿಗಲ್ಲಿ ನೋಡಲ್ ಅಧಿಕಾರಿಗಳಾಗಿ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲಾಗಿದೆ.

ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಈ ಆದೇಶ ಜಾರಿಗೆ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ‌ 144ರ ಪ್ರಕಾರ ಕ್ರಮ‌ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT