ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಿಎ ವಿದ್ಯಾರ್ಥಿಗಳಿಗೆ ಬೆಂಗಳೂರು ಮೆಚ್ಚು

Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು, ವ್ಯಾಪಾರ ನಿರ್ವಹಣೆ ಶಿಕ್ಷಣ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸಿದೆ. ಎಂಬಿಎ ಮಾಡಲು ಬಯಸುವವರ ಅತ್ಯಂತ ನೆಚ್ಚಿನ ತಾಣ ಬೆಂಗಳೂರು ಎಂದು ಕಾಲೇಜ್‌ ಸರ್ಚ್‌ ಸಂಸ್ಥೆಯ ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶದ ಯುವ ಜನರೇ ಈ ಕೋರ್ಸ್‌ಗೆ ಅರ್ಜಿ ಹಾಕುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಯುವತಿಯರಿಗಿಂತ ಯುವಕರಿಗೇ ಈ ಕೋರ್ಸ್‌ನಲ್ಲಿ ಆಸಕ್ತಿ ಹೆಚ್ಚು ಎಂದೂ ಸಮೀಕ್ಷೆ ತಿಳಿಸಿದೆ.

‘ಎಂಬಿಎ ಟ್ರೆಂಡ್ಸ್‌ ಅಂಡ್‌ ಅನಾಲಿಸಿಸ್‌ 2018’ ಎಂಬ ಹೆಸರಿನಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಂಬಿಎ ಆಕಾಂಕ್ಷಿಗಳಾಗಿರುವ ಐದು ಲಕ್ಷ ಯುವ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಉತ್ತರ ಪ್ರದೇಶದ ಬಳಿಕ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಅತಿ ಹೆಚ್ಚು ಜನರು ಎಂಬಿಎ ವ್ಯಾಸಂಗ ಮಾಡುವ ಆಸಕ್ತಿ ಹೊಂದಿದ್ದಾರೆ.

‘ಎಂಬಿಎ ಕೋರ್ಸ್‌ಗೆ ಸೇರಲು ಬಯಸುವ ಜನರ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿಯುವುದಕ್ಕಾಗಿ ಈ ಸಮೀಕ್ಷೆ ನಡೆಸಿದ್ದೇವೆ’ ಎಂದು ಕಾಲೇಜ್‌ ಸರ್ಚ್‌ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿರುದ್ಧ ಮೋಟ್ವಾನಿ ಹೇಳಿದ್ದಾರೆ. ಕಾಲೇಜ್‌ ಸರ್ಚ್‌ ಸಂಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡುವ ವೆಬ್‌ಸೈಟ್‌  ನಡೆಸುತ್ತಿದೆ.

‘ವಿದ್ಯಾರ್ಥಿಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದು ಸಮೀಕ್ಷೆಯ ಮುಖ್ಯ ಉದ್ದೇಶ ಆಗಿತ್ತು. ಹೊಸ ಯುಗದ ಕೋರ್ಸ್‌ಗಳು ಮತ್ತು ಸಾಂಪ್ರದಾಯಿಕ ಕೋರ್ಸ್‌ಗಳ ನಡುವಣ ವ್ಯತ್ಯಾಸದ ಬಗ್ಗೆ ವಿದ್ಯಾರ್ಥಿಗಳ ಭಾವನೆ ಏನು ಎಂಬುದನ್ನೂ ಸಮೀಕ್ಷೆಯಲ್ಲಿ ತಿಳಿದು
ಕೊಳ್ಳಲಾಗಿದೆ. ಹಾಗೆಯೇ ಕೋರ್ಸ್‌ಗೆ ಸೇರುವ ಮುನ್ನ ಕಾಲೇಜು ಆಯ್ಕೆಗೆ ಅವರು ಗಮನಿಸುವ ಅಂಶಗಳೇನು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ’ ಎಂದು ಮೋಟ್ವಾನಿ ಹೇಳಿದ್ದಾರೆ.

‘ಡಿಜಿಟಲ್‌ ಮಾರ್ಕೆಟಿಂಗ್‌’ ಯುವತಿಯರು ಅತಿ ಹೆಚ್ಚು ಇಷ್ಟಪಡುವ ವಿಷಯವಾದರೆ, ಹಣಕಾಸು ಯುವಕರ ನೆಚ್ಚಿನ ವಿಷಯವಾಗಿದೆ. ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮಾರ್ಕೆಟಿಂಗ್‌ ವಿಷಯಗಳು ನಂತರದ ಸ್ಥಾನಗಳಲ್ಲಿವೆ.

ಮಾನವ ಸಂಪನ್ಮೂಲ ನಿರ್ವಹಣೆಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಹಾಕುವವರಲ್ಲಿ ಯುವತಿಯರೇ ಹೆಚ್ಚು ಎಂಬುದು ಸಮೀಕ್ಷೆ ಕಂಡುಕೊಂಡ ಇನ್ನೊಂದು ಅಂಶ.

ನೆಚ್ಚಿನ ನಗರಗಳು

*ಬೆಂಗಳೂರು

*ಪುಣೆ

*ಮುಂಬೈ

*ಚೆನ್ನೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT