ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಇತಿಹಾಸಗಳ ಸಾರ್ಥಕ ಸಂಶೋಧಕ ಪ್ರೊ. ಶೆಟ್ಟರ್

Last Updated 28 ಫೆಬ್ರುವರಿ 2020, 19:31 IST
ಅಕ್ಷರ ಗಾತ್ರ

ಬಹುಶಿಸ್ತೀಯ ಅಧ್ಯಯನಕ್ಕೆ ಪ್ರೊ. ಶೆಟ್ಟರ್ ಅವರು ನೀಡಿರುವ ಫಲಿತಗಳು ಅಪಾರ.ಅವರು ತಮ್ಮ ಸಂಶೋಧನೆಗಳ ಮೂಲಕ ಕನ್ನಡದ ಅಸ್ಮಿತೆಯ ಬಗ್ಗೆ ಅಪಾರ ಅರಿವನ್ನು ಒದಗಿಸಿದವರು. ಅವರನ್ನು ಸನಿಹದಿಂದ ಬಲ್ಲವರಿಗೆ ಅವರು ಕನ್ನಡ, ಕರ್ನಾಟಕದ ಅನೇಕ ಆಯಾಮಗಳನ್ನು ಕುರಿತು ಮಾಡಬೇಕೆಂದಿದ್ದ ಕೆಲಸಗಳ ವಿಸ್ತಾರ ಮತ್ತು ಆಳವನ್ನು ಊಹಿಸಿಯೇ ಕುತೂಹಲ ಹೆಚ್ಚುತ್ತಿತ್ತು. ಕಳೆದ ಇಪ್ಪತ್ತು ವರ್ಷಗಳಲ್ಲಿ ಶೆಟ್ಟರ್ ಮಾಡಿದ್ದ ಮತ್ತು ಇನ್ನೂ ಹತ್ತು ವರ್ಷಗಳಿಗೆ ಗುರುತು ಮಾಡಿಕೊಂಡಿದ್ದ ಕೆಲಸಗಳ ಪ್ರಮಾಣವು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕಣ್ಣರಳಿಸುವಂತಿದ್ದವು.

1935 ಡಿಸೆಂಬರ್ 11ರಂದು ಬಳ್ಳಾರಿ ಜಿಲ್ಲೆಯ ಹಂಪಸಾಗರದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಷಡಕ್ಷರ ಶೆಟ್ಟರ್ ಅವರ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮೈಸೂರಿ
ನಲ್ಲಾಯಿತು. ಆಗ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಕನ್ನಡ ವಿಭಾಗಗಳು ಅತ್ಯಂತ ಶ್ರೇಷ್ಠ ವಿದ್ವಾಂಸರಿಂದ ವಿರಾಜಿಸುತ್ತಿತ್ತು. ಇತ್ತೀಚಿನ ದಿನಗಳಲ್ಲೂ ಶೆಟ್ಟರ್ ಅವರು ಎಸ್. ಶ್ರೀಕಂಠ ಶಾಸ್ತ್ರಿ, ತೀ.ನಂ.ಶ್ರೀ., ಡಿ.ಎಲ್.ಎನ್. ಅವರ ವ್ಯಕ್ತಿತ್ವ ಮತ್ತು ವಿದ್ವತ್ತನ್ನು ನೆನಪು ಮಾಡಿಕೊಳ್ಳುತ್ತಿದ್ದರು.

ಶೆಟ್ಟರ್‌ ಅವರ ಬಹುಶಿಸ್ತೀಯ ಅಧ್ಯಯನಕ್ಕೆ ಒಳ್ಳೆಯ ಅಡಿಪಾಯ ದೊರೆತದ್ದು ಮೈಸೂರು, ಧಾರವಾಡ ಮತ್ತು ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ; ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭಾರತೀಯ ಕಲೆ ಮತ್ತು ಇತಿಹಾಸ ವಿಷಯಗಳಲ್ಲಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಇತಿಹಾಸ, ಪ್ರಾಕ್ತನಶಾಸ್ತ್ರ ಮತ್ತು ದರ್ಶನಶಾಸ್ತ್ರಗಳನ್ನು ಕುರಿತ ಪಿಎಚ್.ಡಿ ಪದವಿ ಪಡೆದರು. ಆ ಸಂದರ್ಭದಲ್ಲೇ ಹಲವು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದ ಅವರು 1970ರಿಂದ 1996ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ಇಲಾಖೆಯ ಮುಖ್ಯಸ್ಥರಾಗಿದ್ದರು. 1970ರಿಂದ 1995ರವರೆಗೆ ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರು.

ಶೆಟ್ಟರ್‌ ಇಂಗ್ಲಿಷ್‌ನಲ್ಲಿ 1981ರಲ್ಲಿ ಪ್ರಕಟಿಸಿದ ಶ್ರವಣಬೆಳಗೊಳದ ಅಧ್ಯಯನ ಕುರಿತ ಕೃತಿ ಮತ್ತು ನಂತರ1989ರಲ್ಲಿ ಪ್ರಕಟಿಸಿದ ‘ಇನ್‌ವೈಟಿಂಗ್ ಡೆತ್’ (ಸಾವಿಗೆ ಸ್ವಾಗತಿಸಿ) ಮತ್ತು1990ರಲ್ಲಿ ಪ್ರಕಟಿಸಿದ ‘ಪರ್‌ಸ್ಯೂಯಿಂಗ್ ಡೆತ್’ (ಸಾವನ್ನು ಅರಸಿ) ಕೃತಿಗಳು ಅವರ ದರ್ಶನಶಾಸ್ತ್ರದ ಅರಿವಿನ ವಿಸ್ತಾರವನ್ನು ತಿಳಿಸಿಕೊಟ್ಟವು. ಅವರ ಕನ್ನಡ ಭಾಷೆ ಮತ್ತು ವಿಸ್ತಾರಗಳ ಆಳವನ್ನು ತಿಳಿಸಿಕೊಟ್ಟದ್ದು
‘ಶಂಗಂ ತಮಿಳಗಂ’ ಕೃತಿ. ತಮಿಳು ವಿದ್ವಾಂಸರ ಹಮ್ಮನ್ನು ಆ ಮೊದಲೂ ಬಿ.ಜಿ.ಎಲ್. ಸ್ವಾಮಿ ಅನಾವರಣ ಮಾಡುವ ಪ್ರಯತ್ನ ಮಾಡಿದ್ದರು. ಅದನ್ನು ನಿಜಗೊಳಿಸಿದವರು ಶೆಟ್ಟರ್. ಭಾಷಿಕವಾಗಿ ತಮಿಳು ಮೊದಲಾದರೂ, ಲಿಪಿಯ ಕಾರಣದಿಂದ ಕನ್ನಡವೇ ಮೊದಲೆನ್ನುವುದು ಶೆಟ್ಟರ್ ಅವರ ಅಧ್ಯಯನದಿಂದ ಸಾಬೀತಾಯಿತು.

1996ರಿಂದ 1999ರವರೆಗೆ ನವದೆಹಲಿಯ ಐಸಿಎಚ್‌ಆರ್ ಸಂಸ್ಥೆಯನಿರ್ದೇಶಕರಾಗಿದ್ದಾಗ, ದಕ್ಷಿಣದ ಕೇಂದ್ರವು ಬೆಂಗಳೂರಿನಲ್ಲಿ ನೆಲೆಗೊಳ್ಳಲು ಶೆಟ್ಟರ್ ಅವಕಾಶ ಕಲ್ಪಿಸಿದರು. 2006ರಿಂದ 2014ರ ಅವಧಿಗೆ ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಾದೇಶಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ನ ಪ್ರೊ. ರಾಧಾಕೃಷ್ಣನ್‌ ಪೀಠದಲ್ಲಿ ಪ್ರೊಫೆಸರ್‌ ಆಗಿದ್ದರು. ತಾವು ಕಾರ್ಯನಿರ್ವಹಿಸಿದ ಸ್ಥಾನಗಳಲ್ಲಿ ಮೊದಲಿಗೆ ಕಾರಣಾಂತರಗಳಿಂದ ಆಗುತ್ತಿದ್ದ ವಿಳಂಬಗಳನ್ನು ತಪ್ಪಿಸಿ, ಕಟ್ಟುನಿಟ್ಟಾಗಿ ಬಾಕಿ ಇದ್ದ ಕೆಲಸಗಳು ಪೂರ್ಣಗೊಳ್ಳಲು ಕ್ರಮ ತೆಗೆದುಕೊಂಡರು. ಈ ಕಟ್ಟುನಿಟ್ಟಿನಿಂದಾಗಿಯೇ ಅವರನ್ನು ದೂರವಿಟ್ಟವರು ಹಲವರು.

ಇಂಗ್ಲಿಷ್‌ನಲ್ಲಿ ಒಂಬತ್ತು ಮತ್ತು ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಶೆಟ್ಟರ್ ಅವರ ಪ್ರಮುಖವಾದ ಮೂರು ಕೃತಿಗಳು ಪ್ರಕಟಣೆಯ ಹಾದಿಯಲ್ಲಿವೆ. ಮೊದಲ ಸಹಸ್ರಮಾನದ ಕನ್ನಡ ಶಾಸನಗಳನ್ನು ಕುರಿತ ಅಧ್ಯಯನ ಏಳು ಸಂಪುಟಗಳಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ಅವುಗಳ ಪ್ರತಿಪದಾರ್ಥಕೋಶ ಮತ್ತು ಕವಿರಾಜಮಾರ್ಗ ನಿಘಂಟು ಕೂಡ ಮುದ್ರಣಕ್ಕೆ ಸಿದ್ಧವಾಗಿವೆ. ಈಚಿನ ದಿನಗಳಲ್ಲಿ ಅವರ ‘ಹಳಗನ್ನಡ–ಲಿಪಿ, ಲಿಪಿಕಾರ, ಲಿಪಿವ್ಯವಸಾಯ’ ಹಾಗೂ ‘ಹಳಗನ್ನಡ-ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ’ ಹಾಗೂ ‘ಪ್ರಾಕೃತ ಜಗದ್ವಲಯ’ ಕೃತಿಗಳು ಹೆಚ್ಚು ವಿದ್ವಾಂಸರ ವಿಶ್ವಾಸವನ್ನು ಗಳಿಸಿದ್ದವು. ಅವರ ‘ವೈಷ್ಣವದಿಂದ ಶ್ರೀವೈಷ್ಣವ’ಕ್ಕೆ ಎಂಬ ಕಿರುಕೃತಿಯ (ಇಂಗ್ಲಿಷ್ ಲೇಖನದ ಅನುವಾದ) ಕರಡನ್ನು ನೆನ್ನೆಯಷ್ಟೆ ತಿದ್ದುವ ಅವಕಾಶ ನನ್ನ ಪಾಲಿನದಾಗಿತ್ತು.

ಇತಿಹಾಸವೆಂದರೆ ಕೇವಲ ರಾಜಕೀಯ ಇತಿಹಾಸವಷ್ಟೇ ಅಲ್ಲ; ಸಮಾಜ ಮತ್ತು ಸಂಸ್ಕೃತಿಗಳೂ ಇತಿಹಾಸದ ಅಭಿನ್ನ ಅಂಗಗಳು; ಸಂಸ್ಕೃತಿ ಎಂದಾಗ ಅದರಲ್ಲಿ ಭಾಷೆ, ಧರ್ಮ, ಜಾನಪದ, ವಾಸ್ತು ಮತ್ತು ಶಿಲ್ಪಕಲೆ ಮುಂತಾದವೂ ಸೇರುತ್ತವೆ ಎಂಬುದನ್ನು ತೋರಿಸಿಕೊಟ್ಟವರು ಶೆಟ್ಟರ್‌. ತಮ್ಮ ಆತ್ಮಕಥೆಯ ಕೆಲವು ಪುಟಗಳನ್ನೂ ಶೆಟ್ಟರ್ ಬರೆದಿದ್ದಾರೆ. (ಅದರ ಕೆಲವು ಭಾಗಗಳು ‘ಪ್ರಜಾವಾಣಿ’ಯ ’ಮುಕ್ತಛಂದ’ದಲ್ಲಿ ಪ್ರಕಟವಾಗಿತ್ತು.)ಸಾಕಷ್ಟು ಕೆಲಸ ಬಾಕಿ ಇರುವಾಗಲೇ ನಿಷ್ಕ್ರಮಿಸಿದ ಶೆಟ್ಟರ್ ಕಾಯಕಜೀವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT