ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ತತ್ವ ಸಾರ್ವಕಾಲೀಕ’

ಡಾ.ಬಾಬಾಸಾಹೇಬ್ ಅಂಬೇಡ್ಕರ್ 127ನೇ ಜನ್ಮದಿನಾಚರಣೆ: ಎಲ್ಲೆಡೆ ಸಂಭ್ರಮ
Last Updated 15 ಏಪ್ರಿಲ್ 2018, 5:35 IST
ಅಕ್ಷರ ಗಾತ್ರ

ಬೆಳಗಾವಿ: ‘ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಧಾರ್ಮಿಕ ಸ್ವಾತಂತ್ರ್ಯಮತ್ತು ಬದುಕಿನ ಹಕ್ಕು ಸರ್ವಕಾಲಕ್ಕೂ ಪ್ರಸ್ತುತವಾಗಿವೆ’ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂಬೇಡ್ಕರ್ ಅವರ 127ನೇ  ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ತೀವ್ರ ಸಾಮಾಜಿಕ ವಿರೋಧದ ನಡುವೆಯೂ ಶಿಕ್ಷಣ ಪಡೆದು ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅವರ ಸಾಧನೆ. ಇಡೀ ವಿಶ್ವವೇ ಮೆಚ್ಚುವಂತಹ ಹಾಗೂ ದೇಶಕ್ಕೆ ಹೊಂದುವಂತಹ ಸಂವಿಧಾನ ನೀಡಿರುವುದು ಅದ್ಭುತ ಸಾಧನೆ’ ಎಂದು ಹೇಳಿದರು.

‘ಅಸ್ಪೃಶ್ಯತೆ ಇನ್ನೂ ಜೀವಂತ ಇರುವುದು ಅಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಆಚರಣೆ ಮಾಡುವವರ ವಿರುದ್ಧ ರೌಡಿಶೀಟರ್ ತೆರೆಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಮಾತನಾಡಿ, ‘ಹಕ್ಕುಗಳಿಗಾಗಿ ಹೋರಾಟ ಅಗತ್ಯ ಎಂಬುವುದನ್ನು ಸಂವಿಧಾನದ ಮೂಲಕ ತೋರಿಸಿಕೊಟ್ಟವರು ಅಂಬೇಡ್ಕರ್. ಅವರ ಆಶಯದಂತೆ ಸಮಾನತೆಯ ದೃಷ್ಟಿಕೋನ ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ರಾಮಚಂದ್ರನ್ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಮೇ 12ರಂದು ಕಡ್ಡಾಯ ಮತದಾನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟರಿಗೆ ಮೀಸಲಾದ ವ್ಯಕ್ತಿ ಅಲ್ಲ. ಸಮಾಜದ ಎಲ್ಲ ಜನರಿಗೂ ನ್ಯಾಯ ಒದಗಿಸಿದ ನಿಜವಾದ ಜನನಾಯಕ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅವರ ರೀತಿ ನಮ್ಮ ಮಕ್ಕಳಲ್ಲಿ ಸ್ವಾಭಿಮಾನ ಬೆಳೆಸಬೇಕು. ಸರ್ಕಾರ ನೀಡಿರುವ ಸೌಲಭ್ಯ ಬೆಳೆಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೋಕಾಕ ತಾಲ್ಲೂಕಿನ ಯಾದವಾಡ ಗ್ರಾಮದ ಜೆ.ಎನ್.ಎಸ್ ಪಪೂ ಕಾಲೇಜಿನ ಉಪನ್ಯಾಸಕರಾದ ಪ್ರಭಾವತಿ.ಪಿ. ಕಣವಿ ಉಪನ್ಯಾಸ ನೀಡಿ, ಅಪಾರ ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರು ನಡೆದಾಡುವ ವಿಶ್ವವಿದ್ಯಾಲಯವಾಗಿದ್ದರು ಎಂದು ಬಣ್ಣಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಎನ್. ಮುನಿರಾಜು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ 5 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ, ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಟಗೌಡ ತಾಯಣ್ಣವರ, ಪರಿಶಿಷ್ಟ ಪಂಗಡಗಳ ಜಿಲ್ಲಾ ಕಲ್ಯಾಣಾಧಿಕಾರಿಗಳಾದ ಉಮಾ ಸಾಲಿಗೌಡರ ಇತರರು ಉಪಸ್ಥಿತರಿದ್ದರು.

ಮೆರವಣಿಗೆ:

ಜಯಂತಿ ಕಾರ್ಯಕ್ರಮದ ನಿಮಿತ್ತ ಬೆಳಿಗ್ಗೆ ನಗರದ ಬೋಗಾರ್‌ವೇಸ್‌ನಿಂದ ವಿವಿಧ ಪ್ರದೇಶಗಳಲ್ಲಿ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಡಾ. ಬಾಬಾಸಾಹೇಬ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ಕಿರ್ಲೊಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೇಬಜಾರ್, ಕಾಕತಿ ವೇಸ್ ಚನ್ನಮ್ಮ ವೃತ್ತ ಮಾರ್ಗವಾಗಿ ಅಂಬೇಡ್ಕರ್ ಉದ್ಯಾನವನ ತಲುಪಿತು.

ಅಂಬೇಡ್ಕರ್ ಅವರ ಜೀವನ ಸಾಧನೆ ಸಾರುವ ರೂಪಕ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಿ ನೋಡುಗರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT