ನಮ್ಮೂರು, ನಮ್ಮ ಹೆಮ್ಮೆ

7

ನಮ್ಮೂರು, ನಮ್ಮ ಹೆಮ್ಮೆ

Published:
Updated:
Deccan Herald

ಸಿಂಗಾಪುರ, ಇದು ವಿದ್ಯಾರಣ್ಯಪುರ ಬಳಿಯ ಗ್ರಾಮ. ಸುಮಾರು 600 ವರ್ಷಕ್ಕೂ ಹಿಂದಿನ ಇತಿಹಾಸ ಗ್ರಾಮಕ್ಕಿದೆ  ಎಂಬುದು ಇತ್ತೀಚೆಗೆ ಈ ಗ್ರಾಮಸ್ಥರಿಗೆ ಗೊತ್ತಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲಕ್ಕೂ ಹಿಂದಿನಿಂದ ಈ ಗ್ರಾಮ ಇತ್ತು ಎಂಬುದು ಈ ಗ್ರಾಮದ ಜನರ ಹೆಮ್ಮೆಗೂ ಕಾರಣವಾಗಿದೆ.

ಈ ಸಂಬಂಧ ಕೂತುಹಲದಿಂದ ಮಾಹಿತಿ ಸಂಗ್ರಹಿಸುತ್ತಿರುವ ಗ್ರಾಮದವರು ಈಗ ‘ನಮ್ಮ ಊರು ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.

ಗಣೇಶ ಉತ್ಸವದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಿರುವ ಗ್ರಾಮದವರು ಸಿಂಗಾಪುರ ಗ್ರಾಮ ಮತ್ತು ಇಲ್ಲಿರುವ ವರದರಾಜಸ್ವಾಮಿ ದೇವಾಲಯದ ಇತಿಹಾಸವನ್ನು ವಿಡಿಯೊ ಮಾಡಿಸಿದ್ದು, ಅದನ್ನು ಇದೇ 16ರಂದು (ಭಾನುವಾರ) ಗ್ರಾಮದಲ್ಲಿ ಪರದೆಯ ಮೇಲೆ ತೋರಿಸುವ ಕಾರ್ಯಕ್ರಮ ರೂಪಿಸಿದ್ದಾರೆ.

ಪ್ರತಿ ಗ್ರಾಮಕ್ಕೂ ತನ್ನದೇ ಆದ ಇತಿಹಾಸ ಇರುತ್ತದೆ. ಅದು ಅಲ್ಲಿನ ಸ್ಮಾರಕಗಳು, ಶಾಸನಗಳು, ಕೆರೆ, ಕಟ್ಟೆ ಮತ್ತಿತರ ನೆಲೆಗಳನ್ನು ಆಧರಿಸಿರುತ್ತದೆ. ಆದರೆ ಅವುಗಳ ಬಗ್ಗೆಗಿನ ಅರಿವಿನ ಕೊರತೆಯಿಂದಾಗಿ ಗ್ರಾಮದ ಇತಿಹಾಸ ಅಷ್ಟಾಗಿ ಜನರಿಗೆ ಗೊತ್ತಿರುವುದಿಲ್ಲ. ಸಿಂಗಾಪುರ ಗ್ರಾಮದವರು ತಮ್ಮ ಗ್ರಾಮದ ಇತಿಹಾಸ ಕಂಡುಕೊಳ್ಳಲು ಅನುಸರಿಸಿದ ಮಾರ್ಗ ಕುತೂಹಲದಿಂದ ಕೂಡಿದೆ.

ಬೆಂಗಳೂರಿನೊಂದಿಗೆ ಬೆಸೆದುಕೊಂಡಿರುವ ಸಿಂಗಾಪುರಕ್ಕೂ ನಗರೀಕರಣದ ಅಭಿವೃದ್ಧಿಯ ಹೊಡೆತ ತಾಕಿದೆ. ಆದರೂ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿರುವ ಈ ಗ್ರಾಮದಲ್ಲಿ ವರದರಾಜ ಸ್ವಾಮಿ ದೇವಾಲಯವೂ ಇದೆ. ಗ್ರಾಮದ ಬಹುತೇಕರಿಗೆ ದೇವಾಲಯದ ಹಿನ್ನೆಲೆ ಅಷ್ಟಾಗಿ ಗೊತ್ತಿರಲಿಲ್ಲ. ಇದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಗ್ರಾಮದ ಫ್ಲಂಬರ್‌ ಮೋಹನ್‌ ಮತ್ತು ಆಟೊ ಚಾಲಕ ಶ್ರೀನಿವಾಸ್‌ ಅವರಿಗೆ ಬಂದಿತ್ತು.

ಫೇಸ್‌ಬುಕ್‌ ಮೂಲಕ ಗೊತ್ತಾಯಿತು: ಸಿಂಗಾಪುರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಚಿಕ್ಕಬೆಟ್ಟಹಳ್ಳಿ ಗ್ರಾಮದಲ್ಲಿ ಕ್ರಿ.ಶ 1524ರ ಕಾಲದ ಶಾಸನವೊಂದು ಪತ್ತೆಯಾಗಿತ್ತು. ಅದು ವಿಜಯನಗರ ಸಾಮ್ರಾಜ್ಯ ಕಾಲದ ಶಾಸನ. ಇದರಲ್ಲಿ ಸಿಂಗಾಪುರದ ವರದರಾಜ ದೇವಾಲಯಕ್ಕೆ ದಾನವಾಗಿ ನೀಡಿದುದರ ಉಲ್ಲೇಖವಿತ್ತು. ಅದೇ ರೀತಿ ಯಲಹಂಕ ಬಳಿಯ ಹಾರೋಹಳ್ಳಿಯಲ್ಲಿ ಪತ್ತೆಯಾದ ಕ್ರಿ.ಶ 1530 ಶಾಸನದಲ್ಲಿಯೂ ಸಿಂಗಾಪುರದ ಪ್ರಸ್ತಾಪವಿತ್ತು. ಎರಡೂ ಶಾಸನಗಳನ್ನು ‘ಇನ್‌ಸ್ಕ್ರಿಪ್‌ಷನ್‌ ಸ್ಟೋನ್ಸ್‌ ಆಫ್‌ ಬೆಂಗಳೂರು’ನ ಇತಿಹಾಸಕ್ತ ಪಿ.ಎಲ್‌. ಉದಯ ಕುಮಾರ್‌ ನೇತೃತ್ವದ ತಂಡ ಪತ್ತೆ ಹಚ್ಚಿತ್ತು.

ಈ ಎರಡೂ ಶಾಸನಗಳಲ್ಲಿನ ಸಾರಾಂಶವನ್ನು ಈ ತಂಡ ವಿಡಿಯೊ ಮಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿತ್ತು. ಅದನ್ನು ಗಮನಿಸಿದ ಸಿಂಗಾಪುರದ ನಿವಾಸಿ, ಫ್ಲಂಬರ್‌ ಮೋಹನ್‌ ನಾಯಕ್‌ ಅವರು, ಉದಯ್‌ ಕುಮಾರ್‌ ಅವರನ್ನು ಸಂಪರ್ಕಿಸಿ ತಮ್ಮೂರಿಗೆ ಕರೆತಂದರು.

ಸಿಂಗಾಪುರದಲ್ಲಿ ಪರಿಶೀಲಿಸಿದಾಗ ಎರಡು ಶಾಸನಗಳನ್ನು ಈ ತಂಡ ಪತ್ತೆ ಮಾಡಿತ್ತು. ಅದರಲ್ಲಿ ಒಂದು ಗ್ರಾಮದ ತೋಟವೊಂದರಲ್ಲಿ ಇದ್ದರೆ, ಮತ್ತೊಂದು ಕೆರೆಯ ಬಳಿಯ ಬಂಡೆಯಲ್ಲಿತ್ತು. ಕೆರೆ ಬಳಿಯ ಬಂಡೆಯ ಶಾಸನ ಪತ್ತೆಗೆ ಗ್ರಾಮದವರು ಹರಸಾಹಸ ನಡೆಸಿದರು. ಬಾಡಿಗೆಗೆ ಜೆಸಿಬಿ ತರಿಸಿ ಕೆರೆ ಪಕ್ಕದಲ್ಲಿ ನೆಲವನ್ನು ಅಗಿಸಿದರು. ಅಲ್ಲಿ ಇಳಿಜಾರಿನಂತಿದ್ದ ಬಂಡೆ
ಯಲ್ಲಿ ಬರಹಗಳನ್ನು ಕಂಡು ಅವರು ಹೆಮ್ಮೆಯಿಂದ ಬೀಗಿದರು.

ಈ ಗ್ರಾಮದಲ್ಲಿ ದೊರೆತ ಶಾಸನಗಳ ಅಚ್ಚು ತೆಗೆದು, ಅವುಗಳಲ್ಲಿ ಓದಬಲ್ಲ ಅಕ್ಷರಗಳನ್ನು ಆಧರಿಸಿ ಶಾಸನ ತಜ್ಞ ಪ್ರೊ. ಆರ್‌.ನರಸಿಂಹನ್‌ ಅವರು ಶಾಸನದ ಪಾಠವನ್ನು ಗ್ರಾಮದವರಿಗೆ ತಿಳಿಸಿದರು. ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ ಮತ್ತು ಸಿಂಗಾಪುರದಲ್ಲಿ ದೊರೆತಿರುವ ಶಾಸನಗಳಿಂದ ಈ ಮೂರು ಗ್ರಾಮಗಳ ಇತಿಹಾಸ ಇಲ್ಲಿನ ಜನರಿಗೆ ತಿಳಿಯುವಂತಾಗಿದೆ. 

* * * *

ನಮ್ಮೂರಿನಲ್ಲಿರುವ ವರದರಾಜ ಸ್ವಾಮಿ ದೇವಾಲಯ ಚೋಳರ ಕಾಲದ್ದು ಎಂದು ಹೇಳಲಾಗುತ್ತಿದೆ. ಆದರೆ ಕೆಲ ವಿದ್ವಾಂಸರು ಇದು ಹೊಯ್ಸಳರ ಕಾಲದ ಶೈಲಿಯನ್ನು ಹೊಂದಿದೆ ಎಂದು ಹೇಳುತ್ತಾರೆ. ಅಲ್ಲದೆ ಕೆಳದಿ ಅರಸರು ಸಿಂಗಾಪುರದ 66 ಎಕರೆ ಜಮೀನನ್ನು ದಾನ ಮಾಡಿದ್ದರ ಉಲ್ಲೇಖದ ದಾಖಲೆಯಿದೆಯಂತೆ. ಇವುಗಳ ಬಗ್ಗೆ ಅರೆ ಬರೆ ಮಾಹಿತಿ ತಿಳಿದಿದ್ದ ನಮ್ಮೂರಿನವರಿಗೆ ಗ್ರಾಮದ ಇತಿಹಾಸದ ಬಗ್ಗೆ ಸಮಗ್ರ ಮಾಹಿತಿಯೇ ಇರಲಿಲ್ಲ. ಪಿ.ಎಲ್‌.ಉದಯ ಕುಮಾರ್‌ ಅವರ ತಂಡದವರು ಪತ್ತೆ ಮಾಡಿದ ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ ಶಾಸನಗಳಲ್ಲಿ ನಮ್ಮೂರಿನ ಉಲ್ಲೇಖ ಇರುವುದನ್ನು ಫೇಸ್‌ಬುಕ್‌ ಮೂಲಕ ತಿಳಿದುಕೊಂಡೆವು. ಲಿಪಿ ತಜ್ಞರು, ಶಾಸನ ತಜ್ಞರು ಹಾಗೂ ಇತಿಹಾಸಕಾರರು ನಮ್ಮೂರಿಗೆ ಬಂದು ನಮ್ಮೂರಿನ ಇತಿಹಾಸವನ್ನು ಗ್ರಾಮಸ್ಥರಿಗೆ ಪರಿಚಯಿಸಲಿದ್ದಾರೆ. ಈ ಮೂಲಕ ನಮ್ಮೂರಿನ ಹೆಮ್ಮಯ ಸಂಗತಿಗಳನ್ನು ನಾವು ಅರಿಯಲಿದ್ದೇವೆ ಎನ್ನುತ್ತಾರೆ ಗ್ರಾಮದ ನಿವಾಸಿ ಮೋಹನ್‌.

* * * *

ಶಾಸನಗಳನ್ನು ಪತ್ತೆ ಹಚ್ಚಲು ಸಿಂಗಾಪುರದ ಗ್ರಾಮಸ್ಥರು ನೀಡಿದ ಸಹಕಾರ ಅಭೂತಪೂರ್ವವಾದದ್ದು. ನಮ್ಮೂರಿನ ಇತಿಹಾಸ ತಿಳಿದುಕೊಳ್ಳಬೇಕು ಎಂಬ ಹಂಬಲ ಈ ಗ್ರಾಮದ ಬಹುತೇಕರಿಗಿದೆ. ಅವರಿಗಾಗಿ ಶಾಸನಗಳನ್ನು ಆಧರಿಸಿ ವಿಡಿಯೊ ಸಿದ್ಧಪಡಿಸಿದ್ದು, ಅದನ್ನು ಭಾನುವಾರ ಪ್ರದರ್ಶಿಸುತ್ತೇವೆ

-ಪಿ.ಎಲ್‌.ಉದಯ ಕುಮಾರ್‌, ಇತಿಹಾಸ ಪ್ರೇಮಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !