ಸೋಮವಾರ, ನವೆಂಬರ್ 18, 2019
24 °C

ಟಿಪ್ಪು ಚರಿತ್ರೆ ಬದಲಿಸಲು ಅಸಾಧ್ಯ: ಸಂತೋಷ್‌ ಹೆಗ್ಡೆ

Published:
Updated:

ಬಳ್ಳಾರಿ: ‘ಇವತ್ತಿನ ಸರ್ಕಾರಕ್ಕೆ ಟಿಪ್ಪು ದೇಶದ್ರೋಹಿ ಎಂಬ ಅಭಿಪ್ರಾಯವಿದ್ದರೂ ಚರಿತ್ರೆಯಿಂದ ಅವರನ್ನು ಮರೆಮಾಡಲು ಸಾಧ್ಯವಿಲ್ಲ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ ಹೆಗ್ಡೆ ಪ್ರತಿಪಾದಿಸಿದರು.

ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘ತನ್ನ ನಿರ್ದಿಷ್ಟ ಅಭಿಪ್ರಾಯಕ್ಕಾಗಿ ಚರಿತ್ರೆಯನ್ನು ಬದಲಿಸಲು ಯಾವುದೇ ಸರ್ಕಾರ ಪ್ರಯತ್ನಿಸುವುದು ಸರಿಯಲ್ಲ’ ಎಂದರು.

‘ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಮೂವರು ಮುಖ್ಯಮಂತ್ರಿಗಳು, ಹಲವು ಸಚಿವರು, ನೂರಾರು ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದೇನೆ. ನಾನು ಪ್ರಾಮಾಣಿಕನಾಗಿ ಇರದೇ ಹೋಗಿದ್ದರೆ ಅವರೆಲ್ಲ ನನ್ನ ಬಟ್ಟೆ ಬಿಚ್ಚಿ ಬೀದಿಗೆ ಹಾಕುತ್ತಿದ್ದರು’ ಎಂದರು.

‘ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಯಾಗುವ ಕಾಲವೂ ಬರುತ್ತದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಕ. ಹೈದರಾಬಾದ್ ಕರ್ನಾಟಕ ಮುಖ್ಯಮಂತ್ರಿಗಳಾಗಲೂಬಹುದು. ಮಹಾರಾಜರನ್ನು ಸಿಂಹಾಸನದಿಂದ ಇಳಿಸಿದ ಬಳಿಕ ಅದನ್ನು ತೆಗೆಯಲಿಲ್ಲ. ಏಕೆಂದರೆ ಎಲ್ಲರೂ ಈಗ ಅದರ ಮೇಲೆ ಕುಳಿತುಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದರು. 

‘ಜೀರೋ ಟ್ರಾಫಿಕ್ ಎಂಬುದು ಪ್ರಜಾಪ್ರಭುತ್ವದ ಅತ್ಯಂತ ನೀಚ ರೂಪ. ಆಧುನಿಕ ಅಸ್ಪೃಶ್ಯತೆ. ನಮ್ಮಿಂದ ಚುನಾಯಿಸಲ್ಪಟ್ಟ ಪ್ರತಿನಿಧಿ ನಮ್ಮ ಮಾಲೀಕರೆ? ಅವರಿಗೇನು ಅವಸರ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರದಲ್ಲಿರುವವರ ಭ್ರಷ್ಟಾಚಾರದ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕು ಎಂಬ ನಿಯಮ ಜಾರಿಗೆ ಬರುತ್ತಿಲ್ಲ. ಇದು ಹೀಗೇ ಮುಂದುವರಿದರೆ ನ್ಯಾಯಾಂಗದ ಮೇಲೆಜನರ ವಿಶ್ವಾಸ ಕುಸಿಯುತ್ತದೆ’ ಎಂದರು.

ಪ್ರತಿಕ್ರಿಯಿಸಿ (+)