ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಪ್ರಿ ಫ್ಯಾಬ್ರಿಕೇಟೆಡ್‌ ಮನೆ: ಎಚ್‌ಕೆಪಿ ಸಲಹೆ

Last Updated 11 ಅಕ್ಟೋಬರ್ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಪ್ರಿ ಫ್ಯಾಬ್ರಿಕೇಟೆಡ್‌ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಸಲಹೆ ನೀಡಿದರು.

ನೆರೆ ಪೀಡಿತ ಪ್ರದೇಶಗಳ ಸಂಕಷ್ಟದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷ್ಣಗಿರಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಈ ರೀತಿಯ ಮೂಲಸೌಕರ್ಯವನ್ನು ನಿರ್ಮಿಸಿಕೊಡಲಾಗಿದೆ. ಅಲ್ಲಿಯ ಮಾದರಿಯನ್ನು ಇಲ್ಲೂ ಪಾಲಿಸಬಹುದಾಗಿದೆ ಎಂದರು.

ಸಂತ್ರಸ್ತರಲ್ಲಿ ಬಹುತೇಕರು ದುರ್ಬಲ ವರ್ಗದವರಾಗಿದ್ದಾರೆ. ಇವರು ನದಿ ಪಾತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದ ಕಾರಣ, ಪ್ರವಾಹದ ವೇಳೆ ಇವರಿಗೇ ಹೆಚ್ಚಿನ ಹಾನಿ ಆಗಿದೆ. ಪುನರ್ವಸತಿ ಸಂದರ್ಭದಲ್ಲಿ ಎತ್ತರ ಪ್ರದೇಶವನ್ನು ಆಯ್ಕೆ ಮಾಡಿ ಮನೆ ನಿರ್ಮಿಸಿಕೊಡಬೇಕು ಎಂದೂ ಅವರು ಸಲಹೆ ನೀಡಿದರು.

ಪರಿಹಾರ ನಿರ್ವಹಿಸುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ವಿಫಲವಾಗಿವೆ. ಆದ್ದರಿಂದ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ವಿಧಾನಸಭೆಯೇ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಪಾಟೀಲ ಒತ್ತಾಯಿಸಿದರು.

ಮನೆ ಮಾತ್ರವಲ್ಲ, ಅಲ್ಲಿನ ಜನರ ಬದುಕು ಕಟ್ಟಿಕೊಡುವ ಕೆಲಸವೂ ಆಗಬೇಕು. ಪ್ರವಾಹ ಬಂದು ಹೋಗಿ 70 ದಿನಗಳು ಕಳೆದಿವೆ. ಅವರಲ್ಲಿ ಬಹಳಷ್ಟು ಜನರು ಉದ್ಯೋಗ ಇಲ್ಲದೆ ಮನೆಯಲ್ಲೇ ಉಳಿಯುವಂತಾಗಿದೆ ಎಂದರು.

ಕಾಂಗ್ರೆಸ್‌ನ ಎಂ.ಬಿ.ಪಾಟೀಲ ಮಾತನಾಡಿ, ಪ್ರವಾಹ ಯಾವ ಮಟ್ಟಕ್ಕೆ ಬರುತ್ತದೆ ಎಂಬುದು ಗೊತ್ತಾಗಿದೆ. ಆದ್ದರಿಂದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವಾಗ ಎತ್ತರದ ಪ್ರದೇಶವನ್ನೇ ಆಯ್ಕೆ ಮಾಡಬೇಕು. ಸ್ಥಳಾಂತರಕ್ಕೆ ಗ್ರಾಮಸ್ಥರೂ ಈಗ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಅಡಿಕೆಗೆ ಪ್ಯಾಕೇಜ್‌ ಘೋಷಿಸಿ: ಭಾರಿ ಮಳೆಯಿಂದ ಕೊಳೆ ರೋಗದಿಂದ ಅಡಿಕೆ ಬೆಳೆ ನಾಶವಾಗಿದೆ. ಇದಕ್ಕೆ ಪ್ಯಾಕೇಜ್‌ ಘೋಷಿಸಬೇಕು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ಚರ್ಚೆಯಲ್ಲಿ ಈಶ್ವರಖಂಡ್ರೆ, ರೂಪಾಲಿ ನಾಯ್ಕ, ಯು.ಟಿ.ಖಾದರ್‌, ಹರೀಶ್‌ ಪೂಂಜಾ ಮುಂತಾದವರು ಮಾತನಾಡಿದರು.

ರಸ್ತೆಗೆ ಮಣ್ಣು ಹಾಕಲು ಹಣ ಸಾಲಲ್ಲ

ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ, 1 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹60 ಸಾವಿರ ನೀಡಲಾಗುತ್ತದೆ. ಮಲೆನಾಡು ಪ್ರದೇಶದಲ್ಲಿ ಹಾಳಾದ ರಸ್ತೆಗೆ ಮಣ್ಣು ಹಾಕಲು ಈ ಹಣ ಸಾಲುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕ ರಾಜೇಗೌಡ ತಿಳಿಸಿದರು.

ಒಂದು ಮಳೆಗೇ ಮಣ್ಣು ಕೊಚ್ಚಿ ಹೋಗುತ್ತದೆ. ಆದ್ದರಿಂದ ಎನ್‌ಡಿಆರ್‌ಎಫ್‌ ನಿಯಮವನ್ನು ಬದಿಗಿಟ್ಟು ಸೂಕ್ತ ಪರಿಹಾರ ನೀಡಬೇಕು. ಸಣ್ಣ– ಪುಟ್ಟ ಸೇತುವೆಗಳು ಕುಸಿದು ಹೋದ ಕಡೆಗಳಲ್ಲಿ ಅಡಿಕೆ ಮರದ ಕಾಲು ಸೇತುವೆ ನಿರ್ಮಿಸಲಾಗಿದೆ ಎಂದರು.

ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ, ಪರಿಹಾರ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT