ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಎಚ್‌.ಕೆ.ಪಾಟೀಲ

Last Updated 9 ಸೆಪ್ಟೆಂಬರ್ 2019, 12:10 IST
ಅಕ್ಷರ ಗಾತ್ರ

ಗದಗ: ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸುವ ಮೂಲಕ ಜನರಿಗೆ ಆರ್ಥಿಕ ವ್ಯವಸ್ಥೆಯ ನೈಜ ಚಿತ್ರಣ ತಿಳಿಸಬೇಕು ಎಂದು ಶಾಸಕ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಪಾಕಿಸ್ತಾನದೊಂದಿಗೆ ಯುದ್ಧ ಮಾಡುವಂತಹ ಭಾವನಾತ್ಮಕ ವಿಷಯಗಳ ಬದಲಿಗೆ ಕೇಂದ್ರ ಸರ್ಕಾರ ದೇಶದ ಆರ್ಥಿಕ ವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲ:ರಾಜ್ಯದಲ್ಲಿ ಪ್ರವಾಹ, ಮಳೆಯಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ತುರ್ತು ಪರಿಹಾರ, ಪುನರ್ವಸತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂಗಡ ಹಣ ನೀಡುವುದನ್ನು ಬಿಟ್ಟು ಹಾನಿಯ ಅಧ್ಯಯನಕ್ಕೆ ತಂಡವನ್ನು ಕಳುಹಿಸಿದೆ. ರಾಜ್ಯದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಕೇಂದ್ರ ಸರ್ಕಾರ ಸ್ವಲ್ಪವೂ ವಿಶ್ವಾಸ ಇಡದಿರುವುದು ದುರಾದೃಷ್ಟಕರ ಸಂಗತಿ ಎಂದು ಟೀಕಿಸಿದರು.

ಶೈಕ್ಷಣಿಕ ವರ್ಷ ಮಾರ್ಪಾಡಿಗೆ ಸಲಹೆ:ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಮಕ್ಕಳ ಪಠ್ಯಪುಸ್ತಕಗಳು ತೇಲಿಹೋಗಿವೆ. ಮಳೆ, ನೆರೆಯಿಂದ ಶಾಲಾ, ಕಾಲೇಜುಗಳು ಸರಿಯಾಗಿ ನಡೆಯದೇ ಶೈಕ್ಷಣಿಕ ದಿನಗಳು ನಷ್ಟವಾಗಿವೆ. ಇದನ್ನು ಸರಿದೂಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಮಾರ್ಪಾಡು ಮಾಡಬೇಕು ಎಂದು ಸಲಹೆ ನೀಡಿದರು.

ಎನ್‌ಡಿಆರ್‌ಎಫ್‌ ನಿಯಮಾವಳಿ ಬದಲಿಗೆ ಒತ್ತಾಯ:ನೆರೆ, ಬರ ಸಂದರ್ಭದಲ್ಲಿ ಸಂತ್ರಸ್ತರಿಗೆ ಕನಿಷ್ಠ ಪರಿಹಾರ ಸಿಗುತ್ತಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ ನಿಯಮಾವಳಿ ಬದಲಿಸಿ, ಹೆಚ್ಚಿನ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರಿಹಾರ ತೃಪ್ತಿಕರವಾಗಿಲ್ಲ:‌ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಪ್ರದೇಶದಲ್ಲಿ ಪರಿಹಾರ, ಪುನರ್ವಸತಿ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿಲ್ಲ. ಜನರ ಸಂಕಷ್ಟವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವ ಕಾರ್ಯ ರಾಜ್ಯ ಸರ್ಕಾರದಿಂದ ನಡೆದಿಲ್ಲ. ಸಂತ್ರಸ್ತರು ತೀವ್ರ ನರಾಶರಾಗಿದ್ದಾರೆ ಎಂದರು.

ಈಶ್ವರಪ್ಪ ಹೇಳಿಕೆಯಿಂದ ಘಾಸಿ:‘ನಿಮಗೆ ₹10 ಸಾವಿರ ಪರಿಹಾರ ನೀಡಿದ್ದೇ ಹೆಚ್ಚು’ ಎಂಬ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆ ನೆರೆ ಸಂತ್ರಸ್ತರ ಭಾವನೆಯನ್ನು ಘಾಸಿಗೊಳಿಸುವಂತಿದೆ. ಜನರಿಗೆ ನೋವಾಗುವಂತೆ ಹೇಳಿಕೆ ನೀಡಬೇಡಿ. ಅವರ ಸಹನೆಯ ಕಟ್ಟೆ ಒಡೆಯಲು ಅವಕಾಶ ಮಾಡಿಕೊಡಬೇಡಿ’ ಎಂದು ಎಚ್ಚರಿಕೆ ನೀಡಿದರು.

ಉದ್ಧಟತನದ ಮಾತು:‘ಡಿ.ಕೆ.ಶಿವಕುಮಾರ್‌ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆ ಬೇಜವಬ್ದಾರಿ ಮತ್ತು ಉದ್ಧಟತನದಿಂದ ಕೂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT