ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗೀರಥ ಪ್ರಯತ್ನದಿಂದ ಕೆರೆ ತುಂಬಿಸಿದ ಹೊಳಲ್ಕೆರೆಯ ರಂಗಾಪುರ ಗ್ರಾಮಸ್ಥರು!

Last Updated 21 ಮಾರ್ಚ್ 2019, 19:25 IST
ಅಕ್ಷರ ಗಾತ್ರ

ಹೊಳಲ್ಕೆರೆ: ಬೇಸಿಗೆ ಆರಂಭವಾಗಿ ನೀರಿಗೆ ಹಾಹಾಕಾರ ಶುರುವಾದರೂ ಇಲ್ಲೊಂದು ಕೆರೆಯಲ್ಲಿ ಗಂಗೆ ತುಂಬಿ ತುಳುಕುತ್ತಿದ್ದಾಳೆ. ಮೈದುಂಬಿದ ಕೆರೆಯಿಂದ ಅಂತರ್ಜಲ ಹೆಚ್ಚಳವಾಗಿ ಕೆರೆ ಕೆಳಗಿನ ಕೊಳವೆಬಾವಿಗಳಲ್ಲಿ ನೀರು ತುಂಬಿದೆ. ಜಾನುವಾರು, ಪಕ್ಷಿ, ಜಲಚರಗಳು ನೆಮ್ಮದಿಯಿಂದ ಬದುಕುತ್ತಿವೆ.

ತಾಲ್ಲೂಕಿನ ರಾಮಗಿರಿ ಹೋಬಳಿಯ ರಂಗಾಪುರದ ಗ್ರಾಮಸ್ಥರ ಭಗೀರಥ ಪ್ರಯತ್ನದಿಂದ ಕೆರೆಯಲ್ಲಿ ನೀರು ತುಂಬಿ ಕಂಗೊಳಿಸುತ್ತಿದೆ. ಮಾರ್ಚ್ ಅಂತ್ಯದಲ್ಲೂ ಕೆರೆಯಲ್ಲಿ ಸುಮಾರು 5 ಅಡಿ ನೀರು ಸಂಗ್ರಹವಿದೆ.

ಹಳ್ಳದ ನೀರು ಕೆರೆಗೆ ಹರಿಸಿದರು

ಗ್ರಾಮದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಹರಿಯುವ ಹಿರೇಹಳ್ಳದಿಂದ ಕೆರೆಗೆ ನೀರು ತರುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಹಳ್ಳದಲ್ಲಿ ಬೃಹತ್ ಗುಂಡಿಯೊಂದನ್ನು ನಿರ್ಮಿಸಿ, ಅಲ್ಲಿಂದ ಪಂಪ್‌ ಇಟ್ಟು ಪೈಪ್ ಮೂಲಕ ನೀರು ತರಲಾಗಿದೆ. ಮಳೆಗಾಲದಲ್ಲಿ ಹಳ್ಳದಲ್ಲಿ ಹರಿಯುವ ನೀರನ್ನು ಕೆರೆಗೆ ತುಂಬಿಸಿಕೊಳ್ಳಲಾಗುತ್ತಿದೆ.

‘ಮಳೆಯ ಅಭಾವದಿಂದ ನಮ್ಮೂರಿನ ಕೆರೆ ತುಂಬುತ್ತಿರಲಿಲ್ಲ. ನಮ್ಮದು ತೋಟದ ಸೀಮೆಯಾಗಿದ್ದು, ಬೇಸಿಗೆಯಲ್ಲಿ ನೀರು ಅತ್ಯಗತ್ಯ. ಕೆರೆ ತುಂಬಿಸುವ ಬಗ್ಗೆ ಗ್ರಾಮದ ಮುಖಂಡರು ಯೋಜನೆಯೊಂದನ್ನು ರೂಪಿಸಿದರು. ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ಹಿರೇಹಳ್ಳದಿಂದ ನೀರು ತರುವ ಬಗ್ಗೆ ತೀರ್ಮಾನಿಸಿದೆವು. ಪೈಪ್‌ಲೈನ್ ಹಾಗೂ ಪಂಪ್‌ ಅಳವಡಿಕೆಗೆ ₹ 5.5 ಲಕ್ಷ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಯಿತು. ಚನ್ನಗಿರಿಯ ತುಮ್ಕೋಸ್‌ ₹ 4 ಲಕ್ಷ ಮೌಲ್ಯದ ಪೈಪ್‌ಗಳನ್ನು ಸಾಲವಾಗಿ ನೀಡಿತು. ಗ್ರಾಮದಲ್ಲಿ ಸುಮಾರು 350 ಮನೆಗಳಿದ್ದು, ಎಲ್ಲರೂ ತಮ್ಮ ಕೈಲಾದಷ್ಟು ನೆರವು ನೀಡಿದರು. ₹ 3 ಸಾವಿರದಿಂದ ₹ 25 ಸಾವಿರದವರೆಗೆ ನೆರವು ಹರಿದುಬಂತು. ನಂತರ ತುಮ್ಕೋಸ್‌ ಸಾಲ ತೀರಿಸಲಾಯಿತು’ ಎಂದು ಗ್ರಾಮದ ಎನ್.ಬಿ. ಮೋಹನ್, ಮಹಂತೇಶ್, ಅಜ್ಜಪ್ಪ, ಎ.ಎಂ. ಶಿವಕುಮಾರ್ ತಿಳಿಸಿದರು.

‘ಮಳೆಯಿಂದ ಅರ್ಧ ಕೆರೆಗೆ ಮಾತ್ರ ನೀರು ಬರುತ್ತಿತ್ತು. ಮಳೆಗಾಲದಲ್ಲಿ ಹಿರೇಹಳ್ಳದ ನೀರು ವ್ಯರ್ಥವಾಗಿ ಹರಿಯುತ್ತಿತ್ತು. ಅಲ್ಲಿಂದ ನೀರು ಹರಿಸುವುದರಿಂದ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ತುಂಬಿರುತ್ತದೆ. ಕೆರೆಯಲ್ಲಿ ನೀರು ಇರುವುದರಿಂದ ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಅನುಕೂಲ ಆಗಿದೆ’ ಎಂದು ಗ್ರಾಮದ ಬಿ.ರಾಜಪ್ಪ, ರಾಜಶೇಖರ್, ಎಸ್. ಸಿದ್ದಪ್ಪ, ಪ್ರಸನ್ನ, ಬನಪ್ಪ ಕುಮಾರ್, ಬಿ.ಬಿ. ವಿಜಯಕುಮಾರ್ ಹೇಳುತ್ತಾರೆ.

ಧರ್ಮಸ್ಥಳ ಯೋಜನೆಯ ನೆರವು:

‘ಕೆರೆ ಪುನಃಶ್ಚೇತನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 10 ಲಕ್ಷ ನೆರವು ನೀಡಲಾಗಿದೆ.

‘ನಮ್ಮೂರು ನಮ್ಮ ಕೆರೆ’ ಯೋಜನೆಯಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಕೆರೆಯಲ್ಲಿನ ಹೂಳು ತೆಗೆದು, ಏರಿ ದುರಸ್ತಿ ಮಾಡಲಾಗಿದೆ. 6 ಕಡೆ 12 ಇಂಚಿನ 11 ಪೈಪ್‌ಗಳನ್ನು ಹಾಕಿ ಕೆರೆಗೆ ನೀರು ಹರಿದು ಬರುವಂತೆ ಮಾಡಲಾಗಿದೆ.

‘ಕಳೆದ ವರ್ಷ ತಾಲ್ಲೂಕಿನ ಕೆಂಗುಂಟೆ ಕೆರೆಯನ್ನು ₹ 7.5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಚಿಕ್ಕಂದವಾಡಿ ಹಾಗೂ ವಡೇರಹಳ್ಳಿ ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯದ 170 ಕೆರೆಗಳ ಅಭಿವೃದ್ಧಿಗೆ ₹ 13.80 ಕೋಟಿ ನೀಡಿದ್ದಾರೆ’ ಎಂದು ಸಂಸ್ಥೆಯ ಯೋಜನಾಧಿಕಾರಿ ಎನ್. ಮೇದಪ್ಪ ಹಾಗೂ ಕೃಷಿ ಮೇಲ್ವಿಚಾರಕ ಬಿ. ಮಹದೇವ್ ಹೇಳಿದರು.

**

ಕೆರೆಗೆ ಮಳೆ ನೀರು ಅರ್ಧ ಬಂದರೆ, ಹಿರೇಹಳ್ಳದಿಂದ ಅರ್ಧ ನೀರು ತುಂಬಿಸುತ್ತೇವೆ. ಮುಂದಿನ ಮಳೆಗಾಲದವರೆಗೂ ಕೆರೆಯಲ್ಲಿ ನೀರಿರುತ್ತದೆ
– ಎನ್.ಬಿ.ಮೋಹನ್, ಸದಸ್ಯ, ಕೆರೆ ನಿರ್ವಹಣಾ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT