ಬುಧವಾರ, ನವೆಂಬರ್ 13, 2019
28 °C
ಕಾಟನ್‌ಪೇಟೆಯ ಭಕ್ಷಿ ಗಾರ್ಡನ್‌ನಲ್ಲಿ ಘಟನೆ * ಒಂದೇ ಕುಟುಂಬದ ಮೂವರ ದುರ್ಮರಣ

ಬೆಂಗಳೂರು: ಪತ್ನಿ, ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ

Published:
Updated:
Prajavani

ಬೆಂಗಳೂರು: ನಿದ್ದೆಯಲ್ಲಿದ್ದ ಪತ್ನಿ ಮತ್ತು ಮಕ್ಕಳಿಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪತಿ, ಬಳಿಕ ತಾನೂ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಕಾಟನ್‌ಪೇಟೆ ಠಾಣೆ ವ್ಯಾಪ‍್ತಿಯ ಭಕ್ಷಿ ಗಾರ್ಡನ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಮಕ್ಕಳಾದ ಕಾವೇರಿ (21) ಮತ್ತು ಶ್ರೀಕಾಂತ್ (13) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಪತಿ ಮುರಳಿ (45) ಚಿಕಿತ್ಸೆಗೆ ಸ್ಪಂದಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಗೀತಾ (38), ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕೌಟುಂಬಿಕ ಕಲಹದಿಂದಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ಹಾಗೂ ಮಕ್ಕಳನ್ನು ಕೊಲ್ಲುವ ಉದ್ದೇಶದಿಂದಲೇ ಆರೋಪಿ ಈ ಕೃತ್ಯ ಎಸಗಿದ್ದಾನೆ.  ಆತನ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದರು.

ಮದ್ಯವ್ಯಸನಿ ಆಗಿದ್ದ ಮುರಳಿ; ‘ಆರೋಪಿ ಮುರುಳಿ ಮದ್ಯವ್ಯಸನಿಯಾಗಿದ್ದ. ಕೆಲದಿನ ಕಾರ್ಪೆಂಟರ್‌ ಕೆಲಸ ಮಾಡಿದ್ದ. ನಂತರ, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಿತ್ಯವೂ ಮದ್ಯಸೇವಿಸಿ ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಪತ್ನಿ ಗೀತಾ ಹೂವು ಮಾರಿ ಮಕ್ಕಳನ್ನು ಸಾಕುತ್ತಿದ್ದರು. ಅವರ ಬಳಿಯೂ ಹಣಕ್ಕಾಗಿ ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಆಗಾಗ ಗಲಾಟೆ ಆಗುತ್ತಿತ್ತು’ ಎಂದು ಕಾಟನ್‌ಪೇಟೆ ಪೊಲೀಸರು ಹೇಳಿದರು.

‘ದಂಪತಿಗೆ ಮೂವರು ಮಕ್ಕಳಿದ್ದರು. ಮೊದಲ ಮಗಳು ಕಾವೇರಿ, ನಗರದ ಕಾಲೇಜೊಂದರಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಮಗ ಶ್ರೀಕಾಂತ್, 9ನೇ ತರಗತಿಯಲ್ಲಿ ಓದುತ್ತಿದ್ದ’ ಎಂದು ಮಾಹಿತಿ ನೀಡಿದರು.

ಟೀ ನೆಪದಲ್ಲಿ ಪೆಟ್ರೋಲ್ ತಂದ: ‘ಸೋಮವಾರ ಬೆಳಿಗ್ಗೆ 6ರ ಸುಮಾರಿಗೆ ಎಚ್ಚರಗೊಂಡಿದ್ದ ಮುರುಳಿ, ಟೀ ತರುವುದಾಗಿ ಪತ್ನಿಗೆ ಹೇಳಿ ಹೊರಗಡೆ ಹೋಗಿದ್ದ. ಅದಾದ ಬಳಿಕ ಪತ್ನಿ ಹಾಗೂ ಮಕ್ಕಳು ನಿದ್ದೆಗೆ ಜಾರಿದ್ದರು’ ಎಂದು ಪೊಲೀಸರು ಹೇಳಿದರು.

‘6.30ರ ಸುಮಾರಿಗೆ ಮನೆಗೆ ವಾಪಸು ಬಂದಿದ್ದ ಮುರಳಿ, ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದ. ಪತ್ನಿ ಹಾಗೂ ಮಕ್ಕಳು ನಿದ್ದೆಯಲ್ಲಿರುವಾಗಲೇ ಅವರ ಮೇಲೆ ಪೆಟ್ರೋಲ್ ಸುರಿದಿದ್ದ. ತಾನೂ ಸುರಿದುಕೊಂಡಿದ್ದ. ನಂತರ ಬೆಂಕಿ ಪೊಟ್ಟಣದಿಂದ ಕಡ್ಡಿ ಗೀರಿ ಬೆಂಕಿ ಹಚ್ಚಿಕೊಂಡಿದ್ದ. ಈ ಬಗ್ಗೆ ಮುರಳಿಯೇ ಹೇಳಿಕೆ ನೀಡಿದ್ದಾನೆ’

‘ಕೆಲ ಕ್ಷಣದಲ್ಲೇ ಬೆಂಕಿ ಇಡೀ ಮನೆಯನ್ನು ಆವರಿಸಿತ್ತು. ನಾಲ್ವರೂ ಚೀರಾಡಲಾರಂಭಿಸಿದ್ದರು. ಸ್ಥಳೀಯರು ರಕ್ಷಣೆಗೆ ಹೋಗುವಷ್ಟರಲ್ಲೇ ಮಕ್ಕಳಿಬ್ಬರು ಮೃತಪಟ್ಟಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಮುರಳಿ ಹಾಗೂ ಗೀತಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದು ಪೊಲೀಸರು ವಿವರಿಸಿದರು.

ಪ್ರಜ್ಞೆ ಕಳೆದುಕೊಂಡಿದ್ದ ಆರೋಪಿ: ‘ಘಟನೆಯಲ್ಲಿ ಮನೆ ಸುಟ್ಟು ಹೋಗಿದೆ. ಮುರಳಿ ಹಾಗೂ ಗೀತಾ ಇಬ್ಬರಿಗೂ ಪ್ರಜ್ಞೆ ಇರಲಿಲ್ಲ. ಚಿಕಿತ್ಸೆ ನೀಡಿದ ಬಳಿಕ ಮುರಳಿಗೆ ಪ್ರಜ್ಞೆ ಬಂದಿತ್ತು. ಬೆಂಕಿ ಹಚ್ಚಿದ್ದು ನಾನೇ ಎಂದು ಆತ ತಪ್ಪೊಪ್ಪಿಕೊಂಡು ಹೇಳಿಕೆ ನೀಡಿದ’ ಎಂದು ಪೊಲೀಸರು ಹೇಳಿದರು.

’ಪತ್ನಿ ಹಾಗೂ ನನ್ನ ನಡುವೆ ನಿತ್ಯವೂ ಗಲಾಟೆ ಆಗುತ್ತಿತ್ತು. ಮಕ್ಕಳೆಲ್ಲ ತಾಯಿ ಪರವಿದ್ದರು. ಅದರಿಂದ ನೊಂದು ಈ ರೀತಿ ಮಾಡಿದೆ’ ಎಂದು ಆತ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲೇ ಆತ ತೀರಿಕೊಂಡ’ ಎಂದು ಮಾಹಿತಿ ನೀಡಿದರು.

‘ಗೀತಾ ಅವರ ದೇಹ ಶೇ 80ರಷ್ಟು ಸುಟ್ಟಿದೆ. ಅವರಿಗೆ ಪ್ರಜ್ಞೆ ಬಂದಿಲ್ಲ. ಬದುಕುವುದು ಕಷ್ಟವೆಂದು ವೈದ್ಯರು ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)