ನಾಲ್ವರನ್ನು ಬಲಿ ಪಡೆದ ‘ಹೊಸಮನೆ ಕನಸು’

7
ಮನೆ ಕೊಡಿಸುವುದಾಗಿ ಹೇಳಿ ₹25 ಲಕ್ಷ ಪಡೆದಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು

ನಾಲ್ವರನ್ನು ಬಲಿ ಪಡೆದ ‘ಹೊಸಮನೆ ಕನಸು’

Published:
Updated:
Deccan Herald

ಬೆಂಗಳೂರು: ಹೊಸ ಮನೆ ಖರೀದಿಸುವುದಕ್ಕಾಗಿ ವ್ಯಕ್ತಿಯೊಬ್ಬರಿಗೆ ನೀಡಿದ್ದ ₹25 ಲಕ್ಷ ವಾಪಸ್‌ ಸಿಗಲಿಲ್ಲವೆಂದು ನೊಂದಿದ್ದರು ಎನ್ನಲಾದ ಸುಧಾರಾಣಿ (29) ಎಂಬಾಕೆ ತನ್ನ ತಂದೆ– ತಾಯಿ ಹಾಗೂ ಮಗಳನ್ನು ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದ್ಯಾರಣ್ಯಪುರ ಬಳಿಯ ದೊಡ್ಡಬೊಮ್ಮಸಂದ್ರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿಯಾಗಿದ್ದ ಸುಧಾರಾಣಿ, ತಂದೆ ಜನಾರ್ದನ್ (52) ಹಾಗೂ ತಾಯಿ ಸುಮಿತ್ರಾ (45) ಅವರಿಗೆ ನಿದ್ರೆ ಮಾತ್ರೆ ತಿನ್ನಿಸಿ ಕೊಂದಿದ್ದಾಳೆ. ಮಗಳು ಸೋನಿಕಾಳನ್ನು (6) ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಕತ್ತು ಹಿಸುಕಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದರು.

‘ಮನೆಯಿಂದ ಸೋಮವಾರ ಮಧ್ಯಾಹ್ನ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು, ಠಾಣೆಗೆ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಮನೆ ಬಳಿ ಹೋಗಿ ಬೀಗ ಒಡೆದು ನೋಡಿದಾಗ ಶವಗಳು ಪತ್ತೆಯಾದವು. ಎರಡು ದಿನಗಳ ಹಿಂದೆಯೇ ನಾಲ್ವರೂ ಮೃತಪಟ್ಟಿರುವ ಅನುಮಾನವಿದೆ’ ಎಂದು ಹೇಳಿದರು.

‘ಖಾಸಗಿ ವಾಹನದ ಚಾಲಕರಾಗಿದ್ದ ಜನಾರ್ದನ, ಪತ್ನಿ ಸುಮಿತ್ರಾ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಗಳು ಸುಧಾರಾಣಿಯನ್ನು ಮತ್ತೀಕೆರೆ ನಿವಾಸಿ ಅರ್ಜುನ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಆ ದಂಪತಿ, ಮಗಳು ಸೋನಿಕಾ ಜೊತೆಯಲ್ಲಿ ಮತ್ತೀಕೆರೆಯಲ್ಲೇ ನೆಲೆಸಿದ್ದರು. ಅರ್ಜುನ್, ಔಷಧಿ ಮಳಿಗೆ ನಡೆಸುತ್ತಿದ್ದರು. ಸುಧಾರಾಣಿ, ಆಗಾಗ ತವರು ಮನೆಗೂ ಬಂದು ಹೋಗುತ್ತಿದ್ದಳು’ ಎಂದು ಹೇಳಿದರು. 

ಒಬ್ಬನನ್ನು ನಂಬಿ ಮೋಸ ಹೋದೆ: ‘ಆತ್ಮಹತ್ಯೆಗೂ ಮುನ್ನ ಸುಧಾರಾಣಿ ಬರೆದಿದ್ದಾಳೆ ಎನ್ನಲಾದ ಮರಣೋತ್ತರ ಪತ್ರ, ಸ್ಥಳದಲ್ಲಿ ಸಿಕ್ಕಿದೆ. ‘ನಮ್ಮ ಸಾವಿಗೆ ನಾವೇ ಕಾರಣ’ ಎಂದು ಪತ್ರದಲ್ಲಿ ಬರೆಯಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಸುಧಾರಾಣಿ. ನನಗೆ ಒಂದು ಸ್ವಂತ ಮನೆ ತೆಗೆದುಕೊಳ್ಳಬೇಕೆಂಬ ಕನಸಿತ್ತು. ಹೊಸ ಮನೆ ಖರೀದಿಸಲೆಂದು ಒಬ್ಬನನ್ನು ನಂಬಿ, ಆತನಿಗೆ ₹25 ಲಕ್ಷ ಕೊಟ್ಟಿದ್ದೆ. ಆದರೆ, ಆತ ಅಪಘಾತವೊಂದರಲ್ಲಿ ತೀರಿಕೊಂಡ. ಅದರಿಂದಾಗಿ ನನ್ನ ಹಣವೆಲ್ಲ ಹೋಯಿತು. ಅಪ್ಪ–ಅಮ್ಮನಿಗೂ ವಿಷಯ ತಿಳಿಸಿದ್ದೆ. ಹಣ ವಾಪಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಜನರ ಸಹಾಯ ಕೇಳಿದ್ದೆ. ಯಾರೊಬ್ಬರೂ ನನ್ನ ಹಣ ವಾಪಸ್‌ ಕೊಡಿಸಲಿಲ್ಲ. ಹಣ ವಾಪಸ್ ಬರುವ ನಂಬಿಕೆಯೇ ಹೋಯಿತು. ಕೊನೆಯದಾಗಿ ಸಾಯುವುದೇ ಒಳ್ಳೆಯದು ಅನಿಸಿ ಅಪ್ಪ–ಅಮ್ಮನ ಜೊತೆ ಮಾತನಾಡಿ ಆತ್ಮಹತ್ಯೆ ತೀರ್ಮಾನ ಮಾಡಿದ್ದೆವು’ ಎಂದು ಪತ್ರದಲ್ಲಿ ಬರೆದಿರುವುದಾಗಿ ಅಧಿಕಾರಿ ವಿವರಿಸಿದರು.

‘ಶನಿವಾರ (ನ. 10) ಬೆಳಿಗ್ಗೆ ಪತಿ ಅಂಗಡಿಗೆ ಹೋಗುತ್ತಿದ್ದಂತೆ, ಮಗಳನ್ನು ಕರೆದುಕೊಂಡು ಅಪ್ಪ–ಅಮ್ಮನ ಮನೆಗೆ ಬಂದೆ. ಮೊದಲೇ ಯೋಚಿಸಿದಂತೆ ಅಪ್ಪ- ಅಮ್ಮನಿಗೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸಿದ್ದೆ. ‘ನಾವು ವಾಪಸ್‌ ಎದ್ದರೆ, ನಮ್ಮನ್ನು ಕತ್ತು ಹಿಸುಕಿ ಸಾಯಿಸು’ ಎಂದು ಅವರಿಬ್ಬರು ಹೇಳಿದ್ದರು. ಅವರಿಬ್ಬರು ಮಲಗಿದ ನಂತರ, ಮನೆಗೆ ಬೀಗ ಹಾಕಿ ಮಗಳನ್ನು ಕರೆದುಕೊಂಡು ಪುನಃ ಗಂಡನ ಮನೆಗೆ ಹೋದೆ. ಅಲ್ಲಿ ಅಡುಗೆ ಮಾಡಿಟ್ಟು, ಸಂಜೆ ವಾಪಸ್ ಬಂದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ನಾನು ಬರುವಷ್ಟರಲ್ಲೇ ಅಪ್ಪ- ಅಮ್ಮ ಸತ್ತು ಹೋಗಿದ್ದರು. ಆಗ ಮನೆಯ ಬಾಗಿಲನ್ನು ಒಳಗಿನಿಂದ ಹಾಕಿ, ಮಗಳು ಸೋನಿಕಾಳನ್ನು ಉಸಿರುಗಟ್ಟಿಸಿ ಕೊಂದೆ. ಈಗ ನಾನೂ ಸಾಯುತ್ತಿದ್ದೇನೆ....’ ಎಂದು ಮರಣೋತ್ತರ ಪತ್ರದಲ್ಲಿ ಸುಧಾರಾಣಿ ಬರೆದಿರುವುದಾಗಿ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.   

ನೇಣು ಹಾಕಿಕೊಳ್ಳಲು ಪ್ರಯತ್ನಿಸಿ ಕತ್ತು ಹಿಸುಕಿಕೊಂಡಳು:  ‘ಜನಾರ್ದನ್, ಸುಮಿತ್ರಾ ನಿದ್ರೆ ಮಾತ್ರೆಯಿಂದ ಹಾಗೂ ಸೋನಿಕಾ ಉಸಿರುಗಟ್ಟಿ ಮೃತಪಟ್ಟಿರುವುದನ್ನು ಮೇಲ್ನೋಟಕ್ಕೆ ವೈದ್ಯರು ಖಾತ್ರಿಪಡಿಸಿದ್ದಾರೆ. ಆದರೆ, ಸುಧಾರಾಣಿ ಮನೆಯಲ್ಲೇ ನೇಣು ಹಾಕಿಕೊಳ್ಳಲು ಪ್ರಯತ್ನಿಸಿ ವಿಫಲ ಆಗಿದ್ದಳು. ನಂತರ, ಆಕೆ ಕೈಯಿಂದಲೇ ಕತ್ತು ಹಿಸುಕಿಕೊಂಡು ಮೃತಪಟ್ಟಿರುವ ಸಾಧ್ಯತೆ ಇರುವುದಾಗಿ ವೈದ್ಯರು ತಿಳಿದ್ದಾರೆ’ ಎಂದು ಹಿರಿಯ ಅಧಿಕಾರಿ ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !