ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಹೋಮ್‌ ಸ್ಟೇ ವಿರುದ್ಧ ಸಮರ

207 ಮಾತ್ರ ‘ಅಧಿಕೃತ ಹೋಮ್‌ ಸ್ಟೇ’, ವೆಬ್‌ಸೈಟ್‌ನಲ್ಲಿ ಹೆಸರು ಪ್ರಕಟಿಸಿದ ಜಿಲ್ಲಾಡಳಿತ
Last Updated 13 ಜೂನ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾಡಳಿತವು ಅನಧಿಕೃತ ಹೋಮ್‌ ಸ್ಟೇಗಳಿಗೆ ಚಾಟಿ ಬೀಸಿದೆ. ಜಿಲ್ಲೆಯ ಪ್ರಕೃತಿ ಮಡಲಲ್ಲಿ ಸದ್ದುಗದ್ದಲವಿಲ್ಲದೇ ತಲೆಯೆತ್ತಿದ್ದ ಅನಧಿಕೃತ ಹೋಮ್‌ ಸ್ಟೇಗಳ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ.

‘ಅಂದಾಜು 4 ಸಾವಿರ ಹೋಮ್‌ ಸ್ಟೇಗಳಿವೆ’ ಎಂಬ ಆರೋಪವಿದೆ. ಆದರೆ, ನೋಂದಣಿ ಆಗಿರುವುದು 207 ಮಾತ್ರ! ನೋಂದಣಿಯಾದ ಹೋಮ್‌ ಸ್ಟೇ ಹೆಸರನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಅನಧಿಕೃತವಾಗಿ ವ್ಯವಹಾರ ನಡೆಸುತ್ತಿದ್ದವರಿಗೆ ಬಿಸಿ ಮುಟ್ಟಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಮಳೆಗಾಲದ ಮೂರು ತಿಂಗಳು ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೋಮ್‌ಸ್ಟೇ ಬುಕ್ಕಿಂಗ್‌ ಸ್ಥಗಿತಗೊಳಿಸುವಂತೆ ಪಿಡಿಒ ಒಬ್ಬರು ಸೂಚನೆ ನೀಡಿದ್ದರು. ಮಳೆಗಾಲದಲ್ಲಿ ಭೂಕುಸಿತ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡು ಅತಿಥಿಗಳಿಗೆ ತೊಂದರೆ ಉಂಟಾದರೆ ಮಾಲೀಕರೇ ಜವಾಬ್ದಾರರು ಎಂಬ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿತ್ತು. ಆ ಕ್ರಮದ ವಿರುದ್ಧ ಹೋಮ್‌ ಸ್ಟೇ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಆದೇಶವನ್ನೂ ವಾಪಸ್‌ ಪಡೆಯಲಾಗಿತ್ತು. ಈ ಎಲ್ಲ ಬೆಳವಣಿಗೆಯಿಂದ ಈಗ ನೋಂದಣಿಯಾದ ಹೋಮ್‌ ಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯು ಅಧಿಕೃತವಾಗಿ ವೆಬ್‌ಸೈಟ್‌ ಪ್ರಕಟಿಸುವ ಕೆಲಸ ಮಾಡಿದೆ.

ಫೇಸ್‌ಬುಕ್‌: ಕೊಡಗು ಜಿಲ್ಲಾಧಿಕಾರಿ ಅವರ ಫೇಸ್‌ಬುಕ್‌ ಖಾತೆಯಲ್ಲಿ ‘ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಗಮನಕ್ಕೆ’ ಎಂದು ಬರೆದು ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯಕ್ಕಾಗಿ ಹೋಮ್‌ ಸ್ಟೇ ಬಗ್ಗೆ ಯೋಚಿಸಿದ್ದೀರಾ? ಹಾಗಾದರೆ ದಯವಿಟ್ಟು ನೀವು ಆಯ್ಕೆ ಮಾಡಿಕೊಂಡಿರುವ ಹೋಮ್‌ ಸ್ಟೇ ಸರ್ಕಾರದ ಆದೇಶ ಸಂ:ಪ್ರ ಇ/429/ಪ್ರವಾಯೋ/2015 ದಿನಾಂಕ: 31-3-2016ರಂತೆ ನೋಂದಾಯಿಸಲ್ಪಟ್ಟ ಹೋಮ್‌ ಸ್ಟೇ ಆಗಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಿ. ನೋಂದಾಯಿತ ಹೋಮ್‌ ಸ್ಟೇಗಳ ಪಟ್ಟಿಯನ್ನು ಜಿಲ್ಲಾ ವೆಬ್‌ಸೈಟ್‌: https://kodagu.nic.in/en/tourism/accommodation/ನಲ್ಲಿ ಪ್ರವಾಸಿಗರ ಮಾಹಿತಿಗೆ ಪ್ರಕಟಿಸಲಾಗಿದೆ. ‘ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ’ ಎಂದು ಜಿಲ್ಲಾಡಳಿತ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ಮಾಡಿದೆ.

ಈ ವೆಬ್‌ಸೈಟ್‌ ತೆರೆದರೆ ಅದರಲ್ಲಿ ಪ್ರವಾಸೋದ್ಯಮ ಇಲಾಖೆಯ ಅಡಿ ಸಬ್ಸಿಡಿ ಪಡೆದ ಹೋಟೆಲ್‌ ಹಾಗೂ ರೆಸಾರ್ಟ್‌ಗಳನ್ನು ಹೆಸರನ್ನೂ ಹಾಕಲಾಗಿದೆ. ಅಲ್ಲದೇ ನೋಂದಣಿಯಾದ 207 ಹೋಮ್‌ ಸ್ಟೇ ಹೆಸರು ಹಾಗೂ ಸಂಪರ್ಕ ಸಂಖ್ಯೆಯಿದೆ. ನೋಂದಣಿ ಆಗಿದ್ದರೆ ಮಾತ್ರ ಸೌಲಭ್ಯ ನೀಡಲು ಸಾಧ್ಯವಾಗಲಿದೆ ಎಂಬ ಕಾರಣಕ್ಕೂ ಜಿಲ್ಲಾಡಳಿತ ಈ ಚಿಂತನೆ ನಡೆಸಿದೆ ಎನ್ನಲಾಗಿದೆ.

4600 ಅರ್ಜಿ ಸಲ್ಲಿಕೆ: ‘ಅನಧಿಕೃತ ಹೋಮ್‌ ಸ್ಟೇಗಳ ಸಂಖ್ಯೆ ಸದ್ಯಕ್ಕೆ ತಿಳಿದಿಲ್ಲ. ಆನ್‌ಲೈನ್‌ನಲ್ಲಿ 600 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 207 ಮಾಲೀಕರ ದಾಖಲಾತಿ ಪರಿಶೀಲಿಸಿ ಅನುಮತಿ ನೀಡಲಾಗಿದೆ. ಕೆಲವು ಸ್ಥಳ ಪರಿಶೀಲನೆ ಪೂರ್ಣವಾಗಿದೆ. ಉಳಿದ ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣವಾದ ನಂತರ ಜಿಲ್ಲಾಧಿಕಾರಿ ಅನುಮತಿ ನೀಡಲಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಗ್ರಹವೂ ಕೇಳಿಬಂದಿತ್ತು: ಅನಧಿಕೃತ ಹೋಮ್‌ ಸ್ಟೇಗಳಿಗೆ ಯಾವುದೇ ಕಡಿವಾಣ ಇಲ್ಲದಾಗಿದೆ. ನಿಸರ್ಗ ಸಂಪತ್ತು ಹೊಂದಿರುವ ಜಿಲ್ಲೆಯಲ್ಲಿ ‘ಅತಿಥಿ ಸತ್ಕಾರ’ದ ಹೆಸರಿನಲ್ಲಿ ಆರಂಭವಾದ ಹೋಮ್‌ ಸ್ಟೇಗಳು ಉದ್ಯಮದ ಸ್ವರೂಪ ಪಡೆದುಕೊಂಡಿದ್ದರೂ, ನೋಂದಣಿಗೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಎಲ್ಲಿ ತಮ್ಮೆಲ್ಲಾ ವಹಿವಾಟು ತಿಳಿಯಲಿದೆ ಎಂಬ ಕಾರಣಕ್ಕೆ ಮೌನ ವಹಿಸುತ್ತಾರೆ ಎಂಬ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳುತ್ತಾರೆ.

ಯಾಕೆ ನೋಂದಣಿ ಮಾಡಿಸುತ್ತಿಲ್ಲ: ಪ್ರವಾಸೋದ್ಯಮ ಇಲಾಖೆಗೆ ಕೇವಲ ₹ 500 ಪಾವತಿಸಿ ಅಗತ್ಯ ದಾಖಲೆ ನೀಡಿದರೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಗ್ರಾಮ ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ (ಎನ್‌ಒಸಿ) ಪಡೆಯಲು ಸಾಧ್ಯವಾಗದ ಕಾರಣಕ್ಕೆ ಪ್ರವಾಸೋದ್ಯಮ ಇಲಾಖೆ ಮೂಲಕ ನೋಂದಣಿಗೆ ಮಾಲೀಕರು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸ್ವಂತ ಜಾಗದಲ್ಲಿ ಹೋಮ್‌ ಸ್ಟೇ ಇರಬೇಕು
ಕೈಗಾರಿಕೆ ಸ್ಥಾಪನೆಗೆ ಕೊಡಗಿನಲ್ಲಿ ಅವಕಾಶವಿಲ್ಲ. ಕೃಷಿ ಬಿಟ್ಟರೆ ಪ್ರವಾಸೋದ್ಯಮವೇ ಆಧಾರ. ಪ್ರವಾಸೋದ್ಯಮ ಬೆಳವಣಿಗೆಯಾದ ನಂತರ ಹೋಮ್‌ ಸ್ಟೇ ಪರಿಕಲ್ಪನೆ ಬಂತು. ಅದಕ್ಕೆ ಬೇಡಿಕೆಯೂ ಇತ್ತು. ನೂರಾರು ಮಂದಿ ಅದರಿಂದ ಬದುಕು ಕಟ್ಟಿಕೊಂಡಿದ್ದರು. ಅದರ ಬೆನ್ನಲ್ಲೇ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬಂತು.

ಅಧಿಕೃತವಾಗಿ ನಿವಾಸ ಹೊಂದಿರುವ ಸಂಸಾರಸ್ಥ ಕುಟುಂಬಗಳು ಮಾತ್ರ ಹೋಮ್‌ ಸ್ಟೇ ನಡೆಸಬೇಕು. ಕುಟುಂಬಸ್ಥರು ವಾಸಿಸುವ ಕೋಣೆ ಹೊರತುಪಡಿಸಿ, ಹೆಚ್ಚುವರಿ ಮೂರು ಕೋಣೆಗಳು ಇರಬೇಕು. ಪ್ರವಾಸೋದ್ಯಮ ಇಲಾಖೆ, ಪೊಲೀಸ್‌ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರಬೇಕು. ತಂಗುವ ಪ್ರವಾಸಿಗರು ಅತಿಥಿ ಪುಸ್ತಕದಲ್ಲಿ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ತಂಗುವ ಸಮಯ, ಗುರುತಿನ ಚೀಟಿಯ ಜೆರಾಕ್ಸ್‌ ಪ್ರತಿ ಒದಗಿಸಬೇಕು.

ಅನುಮಾನಾಸ್ಪದ ವ್ಯಕ್ತಿಗಳು ಬಂದರೆ, ತಂಗಲು ಅವಕಾಶ ನೀಡದೇ ಪೊಲೀಸರಿಗೆ ಮಾಹಿತಿ ನೀಡಬೇಕು. ಬಾಡಿಗೆಗೆ ಮನೆ ಪಡೆದು ನಡೆಸುವಂತಿಲ್ಲ. ಆದರೆ, ಯಾವ ನಿಯಮಗಳೂ ಪಾಲನೆಯಾಗುತ್ತಿಲ್ಲ. ವಿಭಿನ್ನ ಸಂಸ್ಕೃತಿ, ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಪರಿಸರದ ಅರಿವು ಸಾರಬೇಕಿದ್ದ ಹೋಮ್‌ ಸ್ಟೇಗಳ ಪರಿಕಲ್ಪನೆ ಬದಲಾಗಿತ್ತು. ಅದಕ್ಕೆ ಕಡಿವಾಣ ಹಾಕಲು ಕೊನೆಗೂ ಜಿಲ್ಲಾಡಳಿತ ಮುಂದಾಗಿದೆ.

**

ಅನಧಿಕೃತ ಹೋಮ್‌ ಸ್ಟೇಗಳಿವೆ ಎಂಬ ಆರೋಪ ಕೇಳಿ ಬಂದಿದ್ದು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷವೇ ಪ್ರಕ್ರಿಯೆ ಆರಂಭಗೊಂಡಿದ್ದರೂ ಪ್ರಕೃತಿ ವಿಕೋಪದಿಂದ ಸಾಧ್ಯವಾಗಿರಲಿಲ್ಲ.
-ರಾಘವೇಂದ್ರ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT