ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: 463 ನೆರೆ ಸಂತ್ರಸ್ತರಿಗೆ ಸೂರಿನ ಭಾಗ್ಯ

ಕೊನೆಗೂ ಸಂತ್ರಸ್ತರಿಗೆ ಸಿಹಿ ಸುದ್ದಿ; ಫಲಾನುಭವಿಗಳಿಗೆ ಮನೆ ಹಸ್ತಾಂತರ 29ರಂದು
Last Updated 13 ಮೇ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ನೆಲೆ ಕಳೆದುಕೊಂಡು ಸಂತ್ರಸ್ತರಾಗಿದ್ದ ಕುಟುಂಬಗಳಿಗೆ ಕೊನೆಗೂ ಸೂರಿನ ಭಾಗ್ಯ ಸಿಗುತ್ತಿದೆ.

ಸಂತ್ರಸ್ತರಿಗಾಗಿ ಕರ್ಣಂಗೇರಿ, ಮದೆ, ಗಾಳಿಬೀಡು, ಜಂಬೂರು, ಕೆ.ನಿಡುಗಣಿ ಗ್ರಾಮಗಳಲ್ಲಿ ಮನೆ ನಿರ್ಮಿಸಲಾಗುತ್ತಿತ್ತು. ಅದರಲ್ಲಿ ಕರ್ಣಂಗೇರಿ ಗ್ರಾಮದಲ್ಲಿ ಮಾತ್ರ 35 ಮಂದಿ ಸಂತ್ರಸ್ತರಿಗಷ್ಟೇ ಜಿಲ್ಲಾಡಳಿತವು ಕಳೆದ ವರ್ಷ ಮನೆ ಹಸ್ತಾಂತರಿಸಿತ್ತು. ಉಳಿದವರು ಮನೆಗಾಗಿ ಚಾತಕ ಪಕ್ಷಿಯಂತೆ ಕಾದಿದ್ದರು.

ಇದೀಗ ಮದೆ ಹಾಗೂ ಜಂಬೂರಿನ 463 ಮಂದಿಗೆ ಸೂರು ದೊರೆಯಲಿದ್ದು, ಮುಂಗಾರು ಮಳೆ ಆರಂಭಕ್ಕೂ ಮೊದಲೇ ಮನೆ ಹಸ್ತಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಮೇ 29ರಂದು ಸಂತ್ರಸ್ತರಿಗೆ ಕೀ ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಡಬಲ್‌ ಬೆಡ್‌ರೂಂ ಮನೆ:ಸರ್ಕಾರವು ಪ್ರತಿ ಮನೆಗೆ ₹ 9.85 ಲಕ್ಷ ವೆಚ್ಚ ಮಾಡಿದೆ. ಎರಡು ಮಲಗುವ ಕೋಣೆಯುಳ್ಳ ಮನೆ ನಿರ್ಮಿಸಲಾಗಿದ್ದು ಅಗತ್ಯವುಳ್ಳವರು ಹೆಚ್ಚುವರಿ ಕೊಠಡಿ ನಿರ್ಮಿಸಿಕೊಳ್ಳಲು ಅವಕಾಶವಿದೆ. ರಾಜೀವ್‌ ಗಾಂಧಿ ವಸತಿ ನಿಗಮದ ಅಡಿ ಮನೆಗಳನ್ನು ನಿರ್ಮಿಸಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ‘ಮೈತ್ರಿ’ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಂಬೂರು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.

‘ಮದೆಯಲ್ಲಿ 80, ಜಂಬೂರು ಗ್ರಾಮದಲ್ಲಿ 383 ಮನೆ ಹಸ್ತಾಂತರಿಸಲಾಗುವುದು. ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ. ಲಾಕ್‌ಡೌನ್‌ ನಿಯಮದಂತೆಮೇ 17ರ ತನಕ ಯಾವುದೇ ವೇದಿಕೆ ಕಾರ್ಯಕ್ರಮ ನಡೆಸುವಂತಿಲ್ಲ. ಅದಾದ ಮೇಲೆ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿ ಪ್ರಕಟಿಸಲಿದೆ. ಅದರಂತೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಿಂಗಳಾಂತ್ಯಕ್ಕೆ ಎನ್‌ಡಿಆರ್‌ಎಫ್‌‘ಜಿಲ್ಲೆಯಲ್ಲಿ ಮುಂಗಾರು ಮಳೆಯನ್ನು ಎದುರಿಸಲು ಸಜ್ಜಾಗಿದ್ದೇವೆ. ಹಣಕಾಸಿನ ತೊಂದರೆ ಇಲ್ಲ. ಟಾಸ್ಕ್‌ ಫೋರ್ಸ್‌ ತಂಡ ಸಿದ್ಧವಾಗಿದೆ. ತಿಂಗಳಾಂತ್ಯಕ್ಕೆ ಎನ್‌ಡಿಆರ್‌ಎಫ್‌ ತಂಡವು ಜಿಲ್ಲೆಗೆ ಬರಲಿದೆ. ‘ಸಹಾಯವಾಣಿ’ ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT