ಮನೆಯ ಕಟ್ಟೆಯ ಮೇಲೆ ಮಂಗಟ್ಟೆ!

ಸೋಮವಾರ, ಮಾರ್ಚ್ 25, 2019
24 °C
ಅಂಕೋಲಾ: ಸಾಕುಪ್ರಾಣಿಯಂತೆ ಮನುಷ್ಯರೊಂದಿಗೆ ಬೆರೆಯುತ್ತಿರುವ ಅಪರೂಪದ ಪಕ್ಷಿ

ಮನೆಯ ಕಟ್ಟೆಯ ಮೇಲೆ ಮಂಗಟ್ಟೆ!

Published:
Updated:
Prajavani

ಅಂಕೋಲಾ (ಉತ್ತರ ಕನ್ನಡ): ಅತ್ಯಂತ ನಾಚಿಕೆ ಸ್ವಭಾವದ ಹಾರ್ನ್‌ಬಿಲ್ (ಮಂಗಟ್ಟೆ) ಪಕ್ಷಿಗಳು ಮನುಷ್ಯರಿಂದ ಸಾಕಷ್ಟು ದೂರ ಇರುತ್ತವೆ. ಆದರೆ, ತಾಲ್ಲೂಕಿನ ತಳಗದ್ದೆ ಗ್ರಾಮದಲ್ಲಿ ಹಕ್ಕಿಯೊಂದು ಸ್ಥಳೀಯರ ಒಡನಾಟ ಬೆಳೆಸಿಕೊಂಡಿದೆ. ಅವರು ಕೊಡುವ ಕೈಚಾಚಿ ಕೊಡುವ ಹಣ್ಣುಗಳನ್ನು ತನ್ನ ಉದ್ದ ಕೊಕ್ಕಿನಿಂದ ಪಡೆದು ಸೇವಿಸುತ್ತಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಗ್ರೇಟ್ ಇಂಡಿಯನ್ ಪ್ರಭೇದಕ್ಕೆ ಸೇರಿದ ಹೆಣ್ಣು ಹಕ್ಕಿ ಇದಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಸ್ಥಳೀಯ ಮಾದು ಗೌಡ ಎಂಬುವವರ ಮನೆಯ ಬಳಿ ಈ ಹಕ್ಕಿ ಕಾಣಿಸಿಕೊಂಡಿತ್ತು. ಅಂದು ಅವರು ನೀಡಿದ ಆಹಾರವನ್ನು ಸೇವಿಸಿತ್ತು. ಬಳಿಕ ಪ್ರತಿ ನಿತ್ಯ ಇವರ ಮನೆ ಬಳಿ ಬಂದು ಆಹಾರ ಸೇವಿಸುತ್ತಿದೆ.

ಮತ್ತೊಂದು ಹಕ್ಕಿಯೂ ಆಗಾಗ ಇದರ ಜತೆಗೆ ಬರುತ್ತದೆ. ಆದರೆ, ಅದು ಮರದ ಮೇಲೆಯೇ ಇರುತ್ತದೆ. ಈ ಹಕ್ಕಿ ಕಾಂಪೌಂಡ್ ಅಥವಾ ಮರದ ಟೊಂಗೆಯಲ್ಲಿ ಕುಳಿತು ಮನುಷ್ಯರ ಅತ್ಯಂತ ಹತ್ತಿರದಲ್ಲಿ ಕೂರುತ್ತದೆ. ಕೆಲವು ತಿಂಗಳಿನಿಂದ ಮಾದು ಗೌಡ ಅವರು ಪರ ಊರಿಗೆ ಹೋಗಿದ್ದಾರೆ. ಅವರ ಮನೆಯ ಬಳಿ ಬಂದ ಹಕ್ಕಿ, ಊರಿನವರು ನೀಡುವ ಹಣ್ಣು, ಹಂಪಲನ್ನು ಸ್ವೀಕರಿಸುತ್ತಿದೆ. 

ಸುಮಾರು 50 ವರ್ಷಗಳ ಜೀವಿತಾವಧಿ ಹೊಂದಿರುವ ಈ ಪಕ್ಷಿಗಳ ರಕ್ಷಣೆಗೆ ಜಿಲ್ಲೆಯ ದಾಂಡೇಲಿ ಅರಣ್ಯದಲ್ಲಿ ಜಾಗ ಮೀಸಲಿಡಲಾಗಿದೆ. ಎರಡು ವರ್ಷಗಳಿಂದ ಅರಣ್ಯ ಇಲಾಖೆಯು ‘ಹಾರ್ನ್‌ಬಿಲ್ ಹಕ್ಕಿ ಹಬ್ಬ’ವನ್ನೂ ಆಯೋಜಿಸುತ್ತಿದೆ. 

ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್ ಹಕ್ಕಿಯು ಅತ್ಯಂತ ಅಪರೂಪದ್ದಾಗಿದೆ. ಇಂತಹ ಅಪರೂಪದ ಪಕ್ಷಿ ಸಂಕುಲ ಉಳಿಯಬೇಕು. ಇದಕ್ಕಾಗಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.

‘ಬಿಟ್ಟುಕೊಡುವ ಮಾತೇ ಇಲ್ಲ’: ಅಪರೂಪದ ಹಾರ್ನ್‌ಬಿಲ್ ಪಕ್ಷಿಯ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ವಿಚಾರ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಅದರ ರಕ್ಷಣೆಗಾಗಿ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳಿಂದ ಗ್ರಾಮಸ್ಥರು ಬೇಸರಗೊಂಡಿದ್ದಾರೆ.

‘ನಮ್ಮ ಒಡನಾಡಿಯಾಗಿರುವ ಹಕ್ಕಿಯನ್ನು ಇಲ್ಲಿಂದ ಬಿಟ್ಟುಕೊಡುವ ಮಾತೇ ಇಲ್ಲ. ಅಷ್ಟಕ್ಕೂ ಹಕ್ಕಿಗೆ ಸ್ಥಳೀಯರಿಂದ ಏನೂ ತೊಂದರೆಯಾಗಿಲ್ಲ. ಅದೂ ಇಲ್ಲಿಯ ಪರಿಸರಕ್ಕೆ ಹೊಂದಿಕೊಂಡಿದೆ. ಹಾಗಾಗಿ ಈಗ ಹೇಗಿದೆಯೋ ಹಾಗೇ ಇರಲಿ’ ಎಂದು ಸ್ಥಳೀಯರಾದ ರಾಮಗೌಡ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !